ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಬೆಟನ್ ಕ್ಯಾಂಪ್‌ಗೆ ಕೆಲಸಕ್ಕೆ ಹೋಗದಂತೆ ಡಂಗುರ

ಜಾತ್ರೆ, ಸಂತೆ ರದ್ದು ; ಗ್ರಂಥಾಲಯಕ್ಕೆ ಬಾಗಿಲು
Last Updated 18 ಮಾರ್ಚ್ 2020, 14:38 IST
ಅಕ್ಷರ ಗಾತ್ರ

ಮುಂಡಗೋಡ: ಕೊರೊನಾ ವೈರಾಣು ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮವಾಗಿ ತಾಲ್ಲೂಕಿನ ಇಂದೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೋಟೆಲ್‍ಗಳನ್ನು ಪ್ರತಿದಿನ ಸಂಜೆ 5 ಗಂಟೆಯೊಳಗೆ ಬಂದ್ ಮಾಡುವಂತೆ ಹಾಗೂ ಗುರುವಾರ ನಡೆಯುವ ವಾರದ ಸಂತೆಯನ್ನು ಕೇವಲ ಮೂರು ತಾಸಿನಲ್ಲಿ ಮುಗಿಸುವಂತೆ ಧ್ವನಿವರ್ಧಕದ ಮೂಲಕ ಸಾರಲಾಗಿದೆ.

ಮುಂದಿನ 15 ದಿನಗಳವರೆಗೆ ಟಿಬೆಟನ್ ಕ್ಯಾಂಪ್‍ಗೆ ಹೋಗದಂತೆಡಂಗುರ ಹೊಡೆಸಿ, ಇಂದೂರ ಪಂಚಾಯ್ತಿ ವ್ಯಾಪ್ತಿಯ ಕೂಲಿಕಾರರಿಗೆ ತಿಳಿಸಲಾಗಿದೆ. ಒಂದೊಮ್ಮೆ ಕೂಲಿ ಕೆಲಸಕ್ಕೆ ಯಾರಾದರೂ ಟಿಬೆಟನ್ ಕ್ಯಾಂಪ್‍ಗೆ ಹೋಗುವವರಿದ್ದರೆ ಅವರನ್ನೂ ಸಹ ಮನವೊಲಿಸಲಾಗುವುದು. ಈಗಾಗಲೇ ಮಹಿಳಾ ಸಂಘಗಳ ಸಭೆ ನಡೆಸಿ ಕೊರೊನಾ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಲಾಗಿದೆ. ಜಾತ್ರೆ ಮತ್ತು ಉರುಸು ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ಇಂದೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹ್ಮದ ರಫೀಕ್ ದೇಸಳ್ಳಿ ಹೇಳಿದರು.

ತಾಲ್ಲೂಕಿನ ಮಳಗಿಯಲ್ಲಿ ಗುರುವಾರ ನಡೆಯಬೇಕಾಗಿದ್ದ ವಾರದ ಸಂತೆಯನ್ನು ಕೆಲ ದಿನಗಳ ಮಟ್ಟಿಗೆ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕನ್, ಮಟನ್ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ ಎಂದು ಮಳಗಿ ಗ್ರಾಮ ಪಂಚಾಯ್ತಿ ಪಿಡಿಓ ಅಣ್ಣಪ್ಪ ವಡ್ಡರ ಹೇಳಿದರು.

ಗ್ರಂಥಾಲಯದಲ್ಲಿಯೂ ಕಟ್ಟೆಚ್ಚರ: ಕೇಂದ್ರ ಗ್ರಂಥಾಲಯ ಸೇರಿದಂತೆ ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಚ್‌ ಅಂತ್ಯದವರೆಗೆ ವಾಚನಾಲಯಗಳನ್ನು ಮುಚ್ಚುವಂತೆ ಹಾಗೂ ಕೇವಲ ಪುಸ್ತಕಗಳನ್ನು ಓದುಗರಿಗೆ ವಿತರಿಸುವ ಕ್ರಮವನ್ನು ಮಾತ್ರ ಮುಂದುವರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಕೇಂದ್ರ ಗ್ರಂಥಾಲಯದಲ್ಲಿ ಬುಧವಾರದಿಂದ ಓದುಗರಿಗೆ ದಿನಪತ್ರಿಕೆಗಳನ್ನು ನೀಡುವುದನ್ನು ಸ್ಥಗಿತಗೊಳಿಸಲಾಗಿದೆ.

ಜಾಗೃತಿ ಕಾರ್ಯಕ್ರಮ: ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಬುಧವಾರ ಕೊರೊನಾ ವೈರಾಣು ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಚ್.ಎಫ್.ಇಂಗಳೆ ಅವರು, ನ್ಯಾಯಾಧೀಶರು ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಯನ್ನು ಪರೀಕ್ಷಿಸಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT