ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಮಾರಾಟ: ಹೊಸ ವರ್ಷಕ್ಕೆ ನಶೆ ಏರಿಸಿದ ಬಿಯರ್

ಕುಮಟಾ ವಲಯದಲ್ಲಿ ಅತಿ ಹೆಚ್ಚು
Last Updated 2 ಜನವರಿ 2021, 19:30 IST
ಅಕ್ಷರ ಗಾತ್ರ

ಕಾರವಾರ: ಕೊರೊನಾ ಕಾರಣದಿಂದ ಡಿ.31ರಂದು ರಾತ್ರಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅವಕಾಶ ಇರಲಿಲ್ಲ. ಆದರೆ, ಬಿಯರ್ ಪ್ರಿಯರು ಮನೆಯಲ್ಲೇ ಇದ್ದುಕೊಂಡು 2021ನ್ನು ಸ್ವಾಗತಿಸಿದ್ದಾರೆ. ಅಂದು ಒಂದೇ ದಿನ ಜಿಲ್ಲೆಯಾದ್ಯಂತ 4,858 ಕೇಸ್‌ಗಳು ರಾಜ್ಯ ಪಾನೀಯ ನಿಗಮದ (ಕೆ.ಎಸ್.ಬಿ.ಸಿ.ಎಲ್) ವಿವಿಧ ಡಿಪೊಗಳಿಂದ ಮಾರಾಟವಾಗಿವೆ.

ಈ ಬಾರಿ ಕಡಲ ತೀರಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ ನೂತನ ವರ್ಷದ ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿತ್ತು. 144ನೇ ಸೆಕ್ಷನ್ ಜಾರಿಯಲ್ಲಿದ್ದ ಕಾರಣ ಎಲ್ಲ ಕಡೆಗಳಲ್ಲಿ ಪೊಲೀಸರು ಗಸ್ತು ತಿರುಗಿದ್ದರು. 31ರಂದು ಸಂಜೆ 4ರ ನಂತರ ಕಡಲತೀರಗಳಲ್ಲಿ ಯಾರೂ ನಿಲ್ಲದಂತೆ ನೋಡಿಕೊಂಡಿದ್ದರು. ಮತ್ತಷ್ಟು ನಿಗಾ ವಹಿಸಲು ಡ್ರೋನ್ ಕ್ಯಾಮೆರಾವನ್ನೂ ಬಳಕೆ ಮಾಡಿದ್ದರು. ಹೋಟೆಲ್, ಬಾರ್‌ಗಳು, ವೈನ್‌ಶಾಪ್‌ಗಳಲ್ಲಿ ಎಂದಿನಂತೆ ವ್ಯಾಪಾರಕ್ಕೆ ಅವಕಾಶ ಕೊಡಲಾಗಿತ್ತು. ಆದರೆ, ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಸೂಚಿಸಲಾಗಿತ್ತು. ಅಲ್ಲದೇ ಡಿ.27ರಂದು ಗ್ರಾಮ ಪಂಚಾಯಿತಿ ಎರಡನೇ ಹಂತದ ಮತದಾನ ಮತ್ತು 30ರಂದು ಮತ ಎಣಿಕೆ ಮಾಡಲಾಗಿತ್ತು. ಹಾಗಾಗಿ ‘ಶುಷ್ಕ ದಿನ’ವನ್ನಾಗಿ ಘೋಷಿಸಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು.

ಈ ಎಲ್ಲ ಕಾರಣಗಳಿಂದ ಮದ್ಯ ಪ್ರಿಯರು ಕೆಲವು ದಿನ ನಿರಾಸೆಗೊಂಡಿದ್ದರು. ಆದರೆ, ಸಂಭ್ರಮಕ್ಕೆ ಅಡ್ಡಿಯಾಗದಂತೆ ಮೊದಲೇ ಯೋಚಿಸಿ, ಮನೆಗಳಲ್ಲೇ ಸಾಕಷ್ಟು ಪ್ರಮಾಣದಲ್ಲಿ ಬಿಯರ್ ತಂದಿಟ್ಟುಕೊಂಡಿದ್ದರು. ಅಬಕಾರಿ ಇಲಾಖೆಯ ಅಂಕಿ ಅಂಶಗಳನ್ನು ಗಮನಿಸಿದಾಗ ಇದು ದೃಢವಾಗುತ್ತದೆ.

ಡಿಸೆಂಬರ್ ಕೊನೆಯ ವಾರದಲ್ಲಿ ಕ್ರಿಸ್‌ಮಸ್, ಹೊಸ ವರ್ಷಾಚರಣೆ ಹಾಗೂ ಚಳಿಗಾಲವೆಂಬ ಕಾರಣಗಳಿಂದ ಸಹಜವಾಗಿ ಮದ್ಯ, ಬಿಯರ್ ಮಾರಾಟ ಹೆಚ್ಚಿರುತ್ತದೆ. ಕೆ.ಎಸ್.ಬಿ.ಸಿ.ಎಲ್‌ನ ಹೊನ್ನಾವರ ಡಿಪೊದಿಂದ ಕರಾವಳಿಯ ತಾಲ್ಲೂಕುಗಳಿಗೆ, ಶಿರಸಿ ಡಿಪೊದಿಂದ ಘಟ್ಟದ ಮೇಲಿನ ತಾಲ್ಲೂಕುಗಳಿಗೆ ಪೂರೈಕೆಯಾಗುತ್ತದೆ. ಹಳಿಯಾಳ ಮತ್ತು ಜೊಯಿಡಾ ತಾಲ್ಲೂಕುಗಳ ಕೆಲವು ಪ್ರದೇಶಗಳಿಗೆ ಹುಬ್ಬಳ್ಳಿಯಿಂದಲೂ ತರಿಸಿಕೊಳ್ಳಲಾಗುತ್ತದೆ.

‘ಎಲ್ಲವೂ ಮಾರಾಟವಲ್ಲ’:ಕೆ.ಎಸ್.ಬಿ.ಸಿ.ಎಲ್ ಡಿಪೊದಿಂದ ಬಿಯರ್ ಸೇರಿದಂತೆ ಯಾವುದೇ ಆಲ್ಕೊಹಾಲ್ ಪಾನೀಯಗಳ ಕೇಸ್‌ಗಳ ರವಾನೆಯಾದರೆ ಅವು ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಅರ್ಥವಲ್ಲ ಎನ್ನುತ್ತಾರೆ ಅಬಕಾರಿ ಇಲಾಖೆಯ ಅಧಿಕಾರಿಗಳು.

ಡಿಪೊದಿಂದ ವಿವಿಧ ವೈನ್‌ ಶಾಪ್‌ಗಳು, ಬಾರ್‌ಗಳಿಗೆ ಪೂರೈಕೆಯಾಗಿದ್ದರೂ ಅವು ಅಲ್ಲಿ ಮಾರಾಟವಾಗದಿರುವ ಸಾಧ್ಯತೆಗಳಿವೆ. ವರ್ಷಾಂತ್ಯದಲ್ಲಿ ಮಾರಾಟದ ಗುರಿ ತಲುಪುವ ಒತ್ತಡ, ಹೊಸ ವರ್ಷಾಚರಣೆ, ಚಳಿಗಾಲದ ಕಾರಣಗಳಿಂದ ಮಳಿಗೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿರುತ್ತದೆ ಎಂದು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT