ಸೋಮವಾರ, ಡಿಸೆಂಬರ್ 9, 2019
26 °C

ಯಲ್ಲಾಪುರ | ಆಮಿಷರಹಿತ ರಾಜಕಾರಣದತ್ತ ಜನರ ಒಲವು: ಭೀಮಣ್ಣ ನಾಯ್ಕ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ನಿತ್ಯ ನಸುಕಿನಲ್ಲಿ ಪ್ರಚಾರಕ್ಕೆ ತೆರಳಿದರೆ ಮತ್ತೆ ಮನೆ ಸೇರುವುದು ಮಧ್ಯರಾತ್ರಿಯ ಹೊತ್ತಿಗೆ. 

* ಎರಡು ಬಾರಿ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದವರು ನೀವು.  ಕ್ಷೇತ್ರ ಬದಲಾವಣೆ ಸಮಸ್ಯೆ ಅನ್ನಿಸಲ್ಲವೇ?

ಯಲ್ಲಾಪುರ ಕ್ಷೇತ್ರ ನನಗೆ ಹೊಸತಲ್ಲ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷನಾಗಿ 11 ವರ್ಷ ಕೆಲಸ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾಗ ಅವರ ಪರ ಪ್ರಚಾರಕ್ಕೆ ಹೋಗಿದ್ದೇನೆ. ಶಾಸಕ ಆರ್.ವಿ.ದೇಶಪಾಂಡೆ ಅವರ ಜೊತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಯಲ್ಲಾಪುರ, ಮುಂಡಗೋಡ, ಬನವಾಸಿ ಎಲ್ಲ ಕಡೆಗಳಲ್ಲೂ ಎಲ್ಲ ಸಮುದಾಯಗಳ ಸ್ನೇಹಿತರಿದ್ದಾರೆ. ಒಬ್ಬ ಸಾಮಾನ್ಯ ಕೃಷಿಕನಾಗಿ ಬೆಳೆದಿರುವ ನಾನು, ರೈತರ ಬಳಿ ಹೋದಾಗ ಅವರ ಸ್ಪಂದನೆ ಅತ್ಯಂತ ಖುಷಿ ಕೊಟ್ಟಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಇದೇ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ.

ಇದನ್ನೂ ಓದಿ: ಯಲ್ಲಾಪುರ– ಜಾತಿ ಲೆಕ್ಕಾಚಾರದಲ್ಲಿ ಮತ ಹೊಂಚು

* ಹಿಂದೆ ಶಾಸಕರಾಗಿದ್ದ ಶಿವರಾಮ ಹೆಬ್ಬಾರ್ ಕ್ಷೇತ್ರಕ್ಕೆ ಪರಿಚಿತರು. ನೀವು ಹೇಗೆ ಜನಾಭಿಪ್ರಾಯ ರೂಪಿಸುತ್ತಿರುವಿರಿ?

ಹೆಬ್ಬಾರ್ ಶಾಸಕರಾಗುವುದಕ್ಕಿಂತ ಪೂರ್ವದಿಂದ ನಾನು ಈ ಕ್ಷೇತ್ರಕ್ಕೆ ಪರಿಚಿತ. ‘ಕಾಂಗ್ರೆಸ್ ನಡಿಗೆ ಜನರ ಬಳಿಗೆ’ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿದ್ದೇನೆ. ಹೆಬ್ಬಾರ್ ಒಮ್ಮೆ ಸೋತವರು. 2013ರ ಚುನಾವಣೆಯಲ್ಲಿ ಹೆಬ್ಬಾರ್ ಅತ್ಯಧಿಕ ಮತಗಳಿಂದ ಗೆದ್ದಾಗ, ಜಿಲ್ಲಾ ಘಟಕದ ಅಧ್ಯಕ್ಷನಾಗಿ ನಾನು ಅವರ ಪರ ಪ್ರಚಾರ ಮಾಡಿ ಈ ಗೆಲುವಿಗೆ ಕಾರಣನಾಗಿದ್ದೆ. ಜನರ ಭಾವನೆ ಅರಿತಿರುವ ನನಗೆ ಜನಾಭಿಪ್ರಾಯ ರೂಪಿಸುವುದು ಕಷ್ಟವೇ ಇಲ್ಲ.

*ಅನೇಕ ಕಾರ್ಯಕರ್ತರು ಹೆಬ್ಬಾರ್ ಜೊತೆ ಬಿಜೆಪಿಗೆ ಹೋದರು. ಪಕ್ಷಕ್ಕೆ ಹೊಡೆತ ಅಲ್ಲವೇ?

ಅವರ ಜೊತೆ ಹೋದವರು ಕೆಲವರಷ್ಟೇ. ನಿಷ್ಠಾವಂತ ಕಾಂಗ್ರೆಸ್ಸಿಗರು ಯಾರೂ ಹೋಗಿಲ್ಲ. ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ. ನಾಯಕ ಸಿದ್ದರಾಮಯ್ಯ ಬಂದಾಗಲೂ ಅನೇಕರು ಪಕ್ಷಕ್ಕೆ ಸೇರ್ಪಡೆಗೊಂಡರು.

*ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ. ಯಾಕಾಗಿ ಈ ಪಕ್ಷಕ್ಕೆ ಮತ ನೀಡಬೇಕು?

ಒಂದು ಪಕ್ಷದ ತತ್ವ, ಸಿದ್ಧಾಂತಕ್ಕಾಗಿ. ಹಿಂದಿನ ಕಾಂಗ್ರೆಸ್ ಸರ್ಕಾರ ನೀಡಿರುವ ಅನ್ನಭಾಗ್ಯದಂತಹ ಬಡವರಪರ ಕಾರ್ಯಕ್ರಮಕ್ಕಾಗಿ. ಇನ್ನೊಂದೆಂದರೆ, ಹಿಂದಿನ ಶಾಸಕರು ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಕ್ಕಾಗಿ. ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ಅನುದಾನ, ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದ್ದರೂ ರಾಜೀನಾಮೆ ಅಗತ್ಯವಿತ್ತಾ? ಈ ರೀತಿ ಜನರಿಗೆ ಮೋಸ ಮಾಡುವ ವ್ಯಕ್ತಿಗೆ ರಾಜಕಾರಣದಲ್ಲಿ ಅವಕಾಶ ನೀಡಬಾರದು.

ಇದನ್ನೂ ಓದಿ: ಯಲ್ಲಾಪುರ– ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಜೆಡಿಎಸ್

* ಬಿಜೆಪಿಯ ಯಾವ ದೌರ್ಬಲ್ಯ ಕಾಂಗ್ರೆಸ್ಸಿಗೆ ವರವಾಗಿದೆ?

ವಿರೋಧಿ ಅಭ್ಯರ್ಥಿ ಜನರಿಗೆ ಮೋಸ ಮಾಡಿರುವುದು ಪ್ರಜ್ಞಾವಂತರು, ಚಿಂತಕರು, ಸಾಮಾನ್ಯರೆಲ್ಲರಿಗೂ ಗೊತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಮಿಷಕ್ಕೆ ಒಳಗಾಗಿ ಸರ್ಕಾರ ಅಭದ್ರ ಮಾಡುವ ಕಾರ್ಯ ಯಾವ ಪಕ್ಷಕ್ಕೂ ಆಗಬಾರದು. ರಾಜ್ಯ ರಾಜಕಾರಣದ ಭವಿಷ್ಯದ ಬಗ್ಗೆ ಚಿಂತಿಸುವ ಅನೇಕ ಹಿರಿಯ ಮಾತಿನಲ್ಲಿ ಇದು ವ್ಯಕ್ತವಾಗಿದೆ. ರಾಜಕಾರಣ ಸರಿಯಾದ ದಿಕ್ಕಿನಲ್ಲಿ ಹೋಗಬೇಕು. ಈ ಬಗ್ಗೆ ಯೋಚಿಸದಿದ್ದವರಿಗೆ ಜನರು ಸುಲಭದಲ್ಲಿ ಮತ ಹಾಕುವುದಿಲ್ಲ.

* ಆಯ್ಕೆಯಾದರೆ ಪ್ರಮುಖ ಆದ್ಯತೆ...

ಅನೇಕ ಕಡೆ ಭೇಟಿ ನೀಡಿದಾಗ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜನರು ಹೇಳಿಕೊಂಡರು. ಆಶ್ರಯಮನೆ ಬಿಲ್ ಬಾಕಿಯಿಂದ ಬಡವರು ಕಷ್ಟದಲ್ಲಿದ್ದಾರೆ. ಇವಕ್ಕೆಲ್ಲ ಆದ್ಯತೆ ನೀಡಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು