ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕಿ ವಿರುದ್ಧದ ಆಪಾದನೆ ಸಂಪೂರ್ಣ ನಿರ್ಲಕ್ಷಿಸುವಂಥದ್ದು: ನಾಗರಾಜ ನಾಯಕ

ಬಿ.ಜೆ.ಪಿ ಮುಖಂಡರ ತಿರುಗೇಟು
Last Updated 8 ಜುಲೈ 2021, 15:51 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣ ಆರಂಭ ವಿಳಂಬವಾಗಲು ಶಾಸಕಿ ರೂಪಾಲಿ ನಾಯ್ಕ ಕಾರಣ ಎಂಬ ಆರೋಪ ನಿರಾಧಾರವಾಗಿದೆ. ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರ ಆಪಾದನೆಗಳು ಸಂಪೂರ್ಣವಾಗಿ ನಿರ್ಲಕ್ಷಿಸುವಂಥದ್ದು’ ಎಂದು ಬಿ.ಜೆ.ಪಿ ಜಿಲ್ಲಾ ಘಟಕದ ವಕ್ತಾರ ನಾಗರಾಜ ನಾಯಕ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಧವ ನಾಯಕ ಅವರು ಹತ್ತಿಯಿಲ್ಲದೇ ನೂಲು ತೆಗೆಯಲು ಮುಂದಾಗಿದ್ದಾರೆ. ಕಾಮಗಾರಿ ವಿಳಂವಾಗಲು ರಾಜಕಾರಣಿಯೊಬ್ಬರು ಕಾರಣ ಎಂದು ಆನಂದ ಅಸ್ನೋಟಿಕರ್ ಹೇಳಿದ್ದಾರೆಯೇ ವಿನಾ ಜನಪ್ರತಿನಿಧಿ ಹೇಳಿಲ್ಲ. ಅವರ ಹೇಳಿಕೆಯನ್ನು ಉಲ್ಲೇಖಿಸಿ ಆರೋಪಿಸಿರುವ ಮಾಧವ ನಾಯಕ ಪೂರಕವಾದ ಸಾಕ್ಷ್ಯಗಳನ್ನು ಕೊಡಬೇಕು. ಈ ರೀತಿಯಲ್ಲಿ ಗಾಳಿಯಲ್ಲಿ ಗುಂಡು ಹೊಡೆಯುವ ಪ್ರವೃತ್ತಿಯಲ್ಲಿ ಪಕ್ಷ ಕಟುವಾಗಿ ಖಂಡಿಸುತ್ತದೆ’ ಎಂದು ತಿರುಗೇಟು ನೀಡಿದರು.

‘ಜಿಲ್ಲಾ ಆಸ್ಪತ್ರೆ ಕಾಮಗಾರಿಗೆ ₹ 150 ಕೋಟಿ ಮಂಜೂರಾಗಿದ್ದಕ್ಕೆ ಶಾಸಕಿಯನ್ನು ಅಭಿನಂದಿಸಬೇಕಿತ್ತು. ಅದುಬಿಟ್ಟು, ಆರೋಪಿಸುವುದಲ್ಲ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ಆರಂಭ ವಿಳಂಬವಾಗಿದೆ. ಇದಕ್ಕೆ ಶಾಸಕಿ ಹೊಣೆಯಲ್ಲ. ಇದೇ ರೀತಿ, ಅವರ ಮೇಲೂ ಸಾಕಷ್ಟು ಆರೋಪಗಳಿವೆ. ಅದಕ್ಕೂ ಅವರ ಉತ್ತರ ಕೊಡಲಿ’ ಎಂದು ಸವಾಲೆಸೆದರು.

ಜುಲೈ 5ರಂದು ಸುದ್ದಿಗೋಷ್ಠಿ ಮಾಡಿದ್ದ ಮಾಧವ ನಾಯಕ, ಜಿಲ್ಲಾ ಆಸ್ಪತ್ರೆಯ ಸುಸಜ್ಜಿತ ಕಟ್ಟಡ ನಿರ್ಮಾಣ ವಿಳಂಬವಾಗಲು ಶಾಸಕಿ ರೂಪಾಲಿ ನಾಯ್ಕ, ಕಾಮಗಾರಿಯ ಮೊತ್ತದಲ್ಲಿ ಶೇಕಡಾವಾರು ಹಣ ಕೇಳುತ್ತಿರುವುದು ಕಾರಣ ಎಂದು ದೂರಿದ್ದರು.

‘ಕಾಂಗ್ರೆಸ್ ಒಳಜಗಳಕ್ಕೆ ಉದಾಹರಣೆ’:

‘ಹೊನ್ನಾವರದ ಟೊಂಕಾದಲ್ಲಿ ಬಂದರು ನಿರ್ಮಾಣಕ್ಕೆ ನೂರಾರು ಜನರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂದು ಕಾಂಗ್ರೆಸ್ ರಾಜ್ಯ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊಸಳೆ ಕಣ್ಣೀರು ಸುರಿಸಿದ್ದಾರೆ. ಈ ಕಾಮಗಾರಿಗೆ 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಕಾಳು ವೈದ್ಯ ಅವರ ಸಮಕ್ಷಮದಲ್ಲಿ ಚಾಲನೆ ನೀಡಿದ್ದರು. ಆಗ ಕಾಸರಕೋಡು ಗ್ರಾಮ ಪಂಚಾಯಿತಿಯು ಕಾಂಗ್ರೆಸ್ ಬೆಂಬಲಿತರ ಆಡಳಿತದಲ್ಲಿತ್ತು. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಚಾಲನೆ ನೀಡಿದ ಕಾಮಗಾರಿಯನ್ನು ಶಿವಕುಮಾರ್ ವಿರೋಧಿಸುತ್ತಾರೆ. ಇದು ಆ ಪಕ್ಷದ ಒಳಜಗಳಕ್ಕೆ ಉದಾಹರಣೆ’ ಎಂದು ನಾಗರಾಜ ನಾಯಕ ಪ್ರತಿಪಾದಿಸಿದರು.

ಪಕ್ಷದ ಪ್ರಮುರಾದ ಸುಭಾಸ್ ಗುನಗಿ, ನಾಗೇಶ ಕುರ್ಡೇಕರ್, ಸಂಜು ನಾಯ್ಕ ಭಾವಿಕೇರಿ, ನಿತಿನ್ ರಾಯ್ಕರ್, ಉಲ್ಲಾಸ್ ಕೇಣಿ, ಹನುಮಂತ ತಳವಾರ್, ಗಜಾನನ ಕುಬಡೆ, ಅರುಣ್ ಹಬ್ಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT