ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ಮಾರ್ಗದೆಡೆಗೆ ಬ್ರಾಹ್ಮಣರು ಸಾಗಬೇಕು

ವಿಪ್ರ ಸಮಾವೇಶದಲ್ಲಿ ಸ್ಪೀಕರ್ ಕಾಗೇರಿ
Last Updated 21 ಮೇ 2022, 14:21 IST
ಅಕ್ಷರ ಗಾತ್ರ

ಶಿರಸಿ: ‘ಬ್ರಿಟಿಷರು ಪರಿಚಯಿಸಿದ ಶಿಕ್ಷಣ ಪದ್ಧತಿಯಿಂದ ಸಂಸ್ಕಾರದ ಮೂಲಸೆಲೆ ಮರೆಯುವತ್ತ ಬ್ರಾಹ್ಮಣ ಸಮಾಜ ಸಾಗುತ್ತಿದೆ. ತಮ್ಮತನ ಉಳಿಸಿಕೊಳ್ಳಲು ಜ್ಞಾನ ಮಾರ್ಗದ ಕಡೆಗೆ ಸಾಗಬೇಕಾದ ಅಗತ್ಯವಿದೆ’ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇಲ್ಲಿನ ಟಿ.ಆರ್.ಸಿ. ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಶನಿವಾರ ಆಯೋಜಿಸಿದ್ದ ವಿಪ್ರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಸನಾತನ ಸಂಸ್ಕೃತಿಯ ಮೂಲಕ ಜ್ಞಾನದ ಬೆಳಕನ್ನು ಜಗತ್ತಿಗೆ ನೀಡಿದ್ದ ಬ್ರಾಹ್ಮಣರು ಜ್ಞಾನದ ದಾಹ ಹೆಚ್ಚಿಸಿಕೊಳ್ಳುವ ಮೂಲಕ ಗುರು ಪರಂಪರೆಗೆ ಸೇರಿದ್ದರು. ಅಂದಿನ ಸ್ಥಿತಿ ಈಗ ಮರುಕಳಿಸಬೇಕಾದ ಅಗತ್ಯವಿದೆ’ ಎಂದರು.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ‘ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶೈಕ್ಷಣಿಕ ಮೀಸಲಾತಿ ನೀಡುವ ಕುರಿತು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಬ್ರಾಹ್ಮಣರ ಬಗ್ಗೆ ಮಾತನಾಡಲು ಸಾರ್ವಜನಿಕ ಜೀವನದಲ್ಲಿರುವವರು ಹಿಂಜರಿಯುತ್ತಾರೆ. ಸಮುದಾಯದ ರಕ್ಷಣೆ ವಿಚಾರದಲ್ಲಿ ಸಂಕುಚಿತ ಭಾವನೆ ಬಿಡಬೇಕು’ ಎಂದರು.

ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ‘ಬ್ರಾಹ್ಮಣ ಸಮುದಾಯದಲ್ಲಿರುವ ಬಡವರ ಆರೋಗ್ಯ, ಶಿಕ್ಷಣ ಕುರಿತು ಬ್ರಾಹ್ಮಣ ಮಹಾಸಭಾ ಕಾಳಜಿ ವಹಿಸಬೇಕು. ಸಮಾಜದಲ್ಲಿ ಅರ್ಹತೆಗೆ ತಕ್ಕ ಉದ್ಯೋಗ, ಸ್ಥಾನಮಾನ ಸಿಗುವಂತಾಗಬೇಕು. ವಿಶ್ವದ ಮೂಲೆ ಮೂಲೆಯಲ್ಲಿ ಬ್ರಾಹ್ಮಣ ಸಮುದಾಯದ ಪ್ರತಿಭಾವಂತರಿದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಮಾತನಾಡಿ, ‘ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮೀಸಲಾತಿಯನ್ನು ‍ಪ್ರಸಕ್ತ ವರ್ಷದಿಂದಲೇ ಜಾರಿಗೆ ತರಬೇಕು ಎಂಬುದಾಗಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು’ ಎಂದರು. ಮಹಾಸಭಾದ ರಾಜ್ಯ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್ ಉಪಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ,ಪತ್ರಕರ್ತ ವಿಶ್ವೇಶ್ವರ ಭಟ್, ಟಿ.ಆರ್.ಸಿ. ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಸ್ವರ್ಣವಲ್ಲಿ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಇದ್ದರು.

-----------

ಮನುಷ್ಯ ಸಂಘ ಜೀವಿ. ಜಾತಿ, ಉಪಜಾತಿಗಿಂತ ಪ್ರತಿ ಮನುಷ್ಯರು ಸಂಘಟಿತರಾಗುವ ಅಗತ್ಯವಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ

ವಿಧಾನಸಭಾ ಅಧ್ಯಕ್ಷ

------------

ಜಾತಿ ರಾಜಕಾರಣ ಅಂತ್ಯಗೊಳ್ಳುವ ಹಂತ ಸಮೀಪಿಸಿದೆ. ಜನರು ಪ್ರಜ್ಞಾವಂತರಾಗುತ್ತಿದ್ದಾರೆ. ಈ ಸಮಯದಲ್ಲಿ ಬ್ರಾಹ್ಮಣರು ಒಟ್ಟಾಗಿರಬೇಕು.

ಆರ್.ವಿ.ದೇಶಪಾಂಡೆ, ಹಳಿಯಾಳ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT