ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಲ್ಚಿನ್ನಿ ಬೆಳೆ ಕ್ಷೇತ್ರ ವಿಸ್ತರಣೆ

ಬೆಟ್ಟ ಸದ್ಬಳಕೆ ಮಾಡಿಕೊಳ್ಳುವತ್ತ ಚಿತ್ತ ಹರಿಸುತ್ತಿರುವ ರೈತರು
Last Updated 18 ಆಗಸ್ಟ್ 2022, 13:14 IST
ಅಕ್ಷರ ಗಾತ್ರ

ಶಿರಸಿ: ಸಾಂಬಾರು ಪದಾರ್ಥಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ದಾಲ್ಚಿನ್ನಿ ಬೆಳೆ ಕ್ಷೇತ್ರ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಿದೆ.

ತೋಟಗಾರಿಕಾ ಬೆಳೆಗಳನ್ನು ಅವಲಂಭಿಸಿರುವ ರೈತರು ಹೆಚ್ಚಿರುವ ಶಿರಸಿ, ಯಲ್ಲಾಪುರ ಭಾಗದಲ್ಲಿ ತೋಟಕ್ಕೆ ಬಳಕೆಗೆ ಬಿಟ್ಟಿರುವ ಬೆಟ್ಟದಲ್ಲಿ ದಾಲ್ಚಿನ್ನಿ ಗಿಡಗಳ ಬೆಳೆಯುವ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.

2020–21ರಲ್ಲಿ ಜಿಲ್ಲೆಯಲ್ಲಿ 17.24 ಹೆಕ್ಟೇರ್ ಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ದಾಲ್ಚಿನ್ನಿ ಬೆಳೆಯಲಾಗುತ್ತಿತ್ತು. ಪ್ರಸಕ್ತ ವರ್ಷ ಈ ಪ್ರಮಾಣ 70 ಹೆಕ್ಟೇರ್ ಗಿಂತಲೂ ಹೆಚ್ಚು ವಿಸ್ತರಿಸಿದೆ. ಶಿರಸಿ ತಾಲ್ಲೂಕಿನ ಭೈರುಂಬೆ, ಯಲ್ಲಾಪುರ ತಾಲ್ಲೂಕಿನ ಉಮ್ಮಚಗಿ, ಹಾಸಣಗಿ, ಕುಂದರಗಿ ವ್ಯಾಪ್ತಿಯಲ್ಲಿ ಹಲವು ರೈತರು ಉಪಬೆಳೆಯಾಗಿ ದಾಲ್ಚಿನ್ನಿ ಬೆಳೆಯತೊಡಗಿದ್ದಾರೆ.

‘ಅಡಿಕೆ ಪ್ರಧಾನವಾಗಿ ಬೆಳೆಯುವ ರೈತರಿಗೆ ಉಪಬೆಳೆ ದಾಲ್ಚಿನ್ನಿ ಕೈಹಿಡಿಯುತ್ತಿದೆ. ಸರಿಯಾದ ನಿರ್ವಹಣೆ ಮೂಲಕ ಮೂರು ವರ್ಷದಲ್ಲೇ ಉತ್ತಮ ಆದಾಯ ಗಳಿಕೆಗೂ ಅವಕಾಶವಿದೆ. ಮಾಲ್ಕಿ ಬೇಣದಲ್ಲಿ ದಾಲ್ಚಿನ್ನಿ ಬೆಳೆಯಲು ರೈತರಿಗೆ ನರೇಗಾ ಯೋಜನೆ ಅಡಿ ಸಹಾಯಧನ ನೀಡಲಾಗುತ್ತಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ್ ಹೆಗಡೆ.

‘ಕಳೆದ ಒಂದು ವರ್ಷದಲ್ಲೇ ಯಲ್ಲಾಪುರ ತಾಲ್ಲೂಕಿನಲ್ಲಿ ಸುಮಾರು 50 ಎಕರೆಯಷ್ಟು ಜಾಗದಲ್ಲಿ ದಾಲ್ಚಿನ್ನಿ ಗಿಡ ಬೆಳೆಸಲಾಗಿದೆ. ತೋಟಗಾರಿಕಾ ಇಲಾಖೆ ನರ್ಸರಿ, ಗೋಣಿಕೊಪ್ಪಲಿನಲ್ಲಿರುವ ಸಾಂಬಾರು ಸಂಶೋಧನಾ ಕೇಂದ್ರದಿಂದಲೂ ರೈತರು ಸಸಿಗಳನ್ನು ತಂದು ನಾಟಿ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಪ್ರತಿ ಎಕರೆ ಬೆಟ್ಟ ಜಾಗದಲ್ಲಿ ಕನಿಷ್ಠ 500 ಗಿಡಗಳನ್ನು ನಾಟಿ ಮಾಡಲು ಸಾಧ್ಯವಿದೆ. ಪ್ರತಿ ಗಿಡ ನಾಟಿ ಮಾಡಿದ ಮೂರು ವರ್ಷದ ಬಳಿಕ ಸರಾಸರಿ ಕಾಲು ಕೆಜಿಯಷ್ಟು ಮೊಗ್ಗು ಉತ್ಪನ್ನ ಒದಗಿಸುತ್ತದೆ. ಇದರಿಂದ ಉತ್ತಮ ಆದಾಯ ಗಳಿಕೆಗೂ ದಾರಿ ಕಂಡುಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿದೆ’ ಎಂದು ವಿವರಿಸಿದರು.

‘ನಾಟಿ ಮಾಡಿದ ಮೊದಲ ವರ್ಷ ಗೊಬ್ಬರ, ನೀರು ನೀಡಿ ಆರೈಕೆ ಮಾಡಿದರೆ ದಾಲ್ಚಿನ್ನಿ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ. ಉಳಿದ ಸಸಿಗಳಂತೆ ಹೆಚ್ಚಿನ ಆರೈಕೆ ಅಗತ್ಯವಿಲ್ಲ. ಕಡಿಮೆ ಖರ್ಚಿನಲ್ಲಿ ನಿರೀಕ್ಷಿತ ಆದಾಯ ಗಳಿಕೆಗೂ ಇದು ದಾರಿಯಾಗುತ್ತದೆ. ನಿರ್ವಹಣೆ ಉತ್ತಮವಿದ್ದರೆ ಹೆಚ್ಚಿನ ಫಸಲು ಪಡೆಯಬಹುದು’ ಎಂದು ಶಿರಸಿಯ ರೈತ ಸುಜಯ್ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊಗ್ಗಿನಿಂದ ಆದಾಯ

‘ದಾಲ್ಚಿನ್ನಿ ಗಿಡಗಳು ಮೂರು ವರ್ಷಕ್ಕೆ ಮೊಗ್ಗು ಬಿಡಲಾರಂಭಿಸುತ್ತವೆ. ಅವುಗಳನ್ನು ಕೊಯ್ಲು ಮಾಡಿ ಒಣಗಿಸಿ ಮಾರಾಟ ಮಾಡಬೇಕಾಗುತ್ತದೆ. ಪ್ರತಿ ಕೆಜಿ ಮೊಗ್ಗಿನ ಬೆಲೆ ಸದ್ಯಕ್ಕೆ ಸರಾಸರಿ ₹ 1 ಸಾವಿರದಿಂದ ₹ 1200 ಇದೆ. ಕೇರಳ ಭಾಗದಲ್ಲಿ ದಾಲ್ಚಿನ್ನಿ ಗಿಡದ ತೊಗಟೆ ತೆಗೆದು ಮಾರಾಟ ಮಾಡಲಾಗುತ್ತಿದೆ. ಸದ್ಯಕ್ಕೆ ಮಲೆನಾಡು ಪ್ರದೇಶದಲ್ಲಿ ದಾಲ್ಚಿನ್ನಿ ಮೊಗ್ಗು ಮಾತ್ರ ರೈತರಿಗೆ ಆದಾಯ ತಂದುಕೊಡಲಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ್ ಹೆಗಡೆ.

------------------

ದಾಲ್ಚಿನ್ನಿ ಬೆಳೆಗೆ ರೋಗಬಾಧೆ ಕಡಿಮೆ. ಇದು ರೈತರಿಗೆ ಉಪಆದಾಯಕ್ಕೆ ಉತ್ತಮ ಬೆಳೆಯಾಗಿದ್ದು ರೈತರಿಗೆ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಸತೀಶ್ ಹೆಗಡೆ

ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT