ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯರ್ಥವಾಗಿ ಹರಿಯುತ್ತಿದೆ ಮುಂಡಗೋಡದ ಚಿಗಳ್ಳಿ ಜಲಾಶಯದ ನೀರು

ವರ್ಷ ಕಳೆದರೂ ದುರಸ್ತಿ ಭಾಗ್ಯವಿಲ್ಲ!
Last Updated 10 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ಮುಂಡಗೋಡ: ‘ಬಾಯಿ ತೆರೆದುಕೊಂಡಿರುವ ಒಡ್ಡಿನಿಂದ ಧುಮುಕುತ್ತಿರುವ ನೀರು, ದಡಭಾಗದ ರೈತರ ಕಣ್ಣೀರ ಕೋಡಿಯಂತೆ ಹರಿಯುತ್ತಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಪ್ರದೇಶದಲ್ಲಿ ಕಲ್ಲುಗಳ ರಾಶಿಯು ಕರಾಳ ದಿನದ ಸಾಕ್ಷಿ ಹೇಳುತ್ತಿವೆ. ಗುಡ್ಡದ ಎಡ– ಬಲದಿಂದ ಸುರಿಯುವ ಮಳೆಯ ನೀರು, ಪುರಸೊತ್ತು ಇಲ್ಲದಂತೆ ಗದ್ದೆಯ ಮಣ್ಣನ್ನು ಕತ್ತರಿಸುತ್ತ ಹಳ್ಳ ಹಿಡಿಯುತ್ತಿದೆ..’

ತಾಲ್ಲೂಕಿನ ಚಿಗಳ್ಳಿ ಜಲಾಶಯದ ಎಡದಂಡೆ ಒಡ್ಡು ಒಡೆದು ಆ.12ಕ್ಕೆ ಒಂದು ವರ್ಷ. ಆದರೆ, ಇನ್ನೂ ದುರಸ್ತಿಯ ಭಾಗ್ಯ ಮಾತ್ರ ಕೂಡಿಬಂದಿಲ್ಲ.

‘ರಾಜಕೀಯ ಇಚ್ಛಾಶಕ್ತಿಯ ಕೊರತೆ, ರೈತರಲ್ಲಿ ಹೋರಾಟದ ಶಕ್ತಿ ಹಾಗೂ ಒಗ್ಗಟ್ಟು ಇಲ್ಲದಿರುವ ಕಾರಣ ಒಡ್ಡು ದುರಸ್ತಿ ಆಗಿಲ್ಲ’ ಎಂಬ ಮಾತುಗಳನ್ನು ರೈತರೇ ಹೇಳುತ್ತಿದ್ದಾರೆ.

ನಾಲ್ಕು ದಶಕಗಳ ನಂತರ ಮೊದಲ ಬಾರಿಗೆ (2019ರಲ್ಲಿ) ಕೋಡಿ ಬಿದ್ದಿದ್ದ ಜಲಾಶಯಕ್ಕೆ ಪೂಜೆ ಸಲ್ಲಿಸಿದ್ದ ರೈತರ ಸಂಭ್ರಮ ಕೆಲವೇ ದಿನಗಳಲ್ಲಿ ಬತ್ತಿ ಹೋಗಿತ್ತು. 150– 200 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿತ್ತು. ಮಳೆಗಾಲದ ಬೆಳೆ ಜೊತೆ ಗದ್ದೆಯೂ ಕಿತ್ತು ಹೋಯಿತಲ್ಲ ಎಂದು ದಡಭಾಗದ ರೈತರು ಕಣ್ಣೀರು ಹಾಕಿದ್ದರು.

‘ಜಲಾಶಯದ ಒಡ್ಡು ದುರಸ್ತಿಗೆ ಸಂಬಂಧಿಸಿದ ಅಧಿಕಾರಿಗಳಿಗೆ, ಸರ್ಕಾರಕ್ಕೆ ಪತ್ರ ಬರೆದರೂ ಪ್ರಯೋಜವಾಗಲಿಲ್ಲ. ಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಲು ಯಾರೂ ಮುಂದಾಗಲಿಲ್ಲ. ಸುಖಾಸುಮ್ಮನೆ ಒಂದು ವರ್ಷ ಕಳೆದಿದೆ. ರಾಜ್ಯ ಮಟ್ಟದ ನಾಯಕರು, ಎಂಜಿನಿಯರಗಳು ಭೇಟಿ ನೀಡಿ ಪುನರ್ ನಿರ್ಮಾಣದ ಭರವಸೆ ನೀಡಿದ್ದು ಹುಸಿಯಾಗಿದೆ’ ಎಂದು ಹಿರಿಯ ವಕೀಲ ಎಸ್.ಪಿ.ಸಮ್ಮಸಗಿ ದೂರಿದರು.

‘ಜಲಾಶಯ ಒಡೆದ ದಿನದಿಂದ ಇಲ್ಲಿಯವರೆಗೂ ಅಧಿಕಾರಿ, ಜನಪ್ರತಿನಿಧಿಗಳ ಆಶ್ವಾಸನೆ ಕೇಳಿ ಸಾಕಾಗಿದೆ. ಒಬ್ಬೊಬ್ಬ ರೈತರ ಗದ್ದೆಗಳಲ್ಲಿ ಎಂಟು ಹತ್ತು ಅಡಿಗಳಷ್ಟು ಮಣ್ಣು ಕಿತ್ತುಹೋಗಿ, ಕಲ್ಲು ಮಾತ್ರ ಉಳಿದಿವೆ. ಶಾಶ್ವತ ಪರಿಹಾರ ರೂಪಿಸಲು ಇಲ್ಲಿಯವರೆಗೂ ಗಂಭೀರ ಚರ್ಚೆ ನಡೆದಿಲ್ಲ. ಮಳೆ ಬಂತೆಂದರೆ ಡ್ಯಾಂ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇದರಿಂದ ಚಿಗಳ್ಳಿ–ಮುಡಸಾಲಿ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದೆ’ ಎಂದು ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ರಾಜಶೇಖರ ಹಿರೇಮಠ ಹೇಳಿದರು.

‘ಅನುದಾನ ಮೀಸಲು’:

‘ಚಿಗಳ್ಳಿ ಜಲಾಶಯದ ಒಡ್ಡು ದುರಸ್ತಿಗೆ ಹಣಕಾಸು ಹಾಗೂ ತಾಂತ್ರಿಕ ಬಿಡ್ ಅನುಮೋದನೆ ಆಗಿರುವ ಮಾಹಿತಿಯಿದೆ. ಆದರೆ, ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಅಂದಾಜು ₹ 7.5 ಕೋಟಿ ಅನುದಾನ ಮೀಸಲಿಟ್ಟಿದ್ದು, ಮಳೆಗಾಲದ ನಂತರ ಕೆಲಸ ಆರಂಭವಾಗುವ ಸಾಧ್ಯತೆಯಿದೆ’ ಎಂದು ಚಿಕ್ಕ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಗಿರೀಶ ಜೋಶಿ ಹೇಳಿದರು.

–––

ಚಿಗಳ್ಳಿ ಜಲಾಶಯ: ಅಂಕಿ ಅಂಶ

0.29

ಟಿ.ಎಂ.ಸಿ ಅಡಿ ಸಾಮರ್ಥ್ಯ

1,440 ಹೆಕ್ಟೇರ್

ಅಚ್ಚುಕಟ್ಟು ಪ್ರದೇಶ

1974

ಜಲಾಶಯ ನಿರ್ಮಾಣದ ವರ್ಷ

2007ರ ಆ.14

ಮೊದಲ ಬಾರಿಗೆ ಒಡೆದಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT