ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಹಸಿ ಕಸದಿಂದ ಗ್ರಾ.ಪಂ.ಗೂ ಆದಾಯ!

ಚಿತ್ತಾಕುಲಾ ಗ್ರಾಮ ಪಂಚಾಯಿತಿಯಲ್ಲಿ ಸಾವಯವ ಗೊಬ್ಬರ ತಯಾರಿಸಿ ಮಾರಾಟ
Last Updated 24 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಕಾರವಾರ: ಈ ಗ್ರಾಮದಲ್ಲಿ ಸಂಗ್ರಹವಾಗುವ ಹಸಿ ಕಸ ಈಗ ವ್ಯರ್ಥವಾಗುವುದಿಲ್ಲ. ಗಿಡಗಳಿಗೆ ಫಲವತ್ತಾದ ಸಾವಯವ ಗೊಬ್ಬರವಾಗಿ ಮಾರ್ಪಾಡಾಗುತ್ತಿದೆ. ಈ ಮೂಲಕ ಸಾವಿರಾರು ರೂಪಾಯಿಗಳ ಆದಾಯ ಪಡೆದುಕೊಂಡು, ಆದಾಯವನ್ನೂ ಗಳಿಸುತ್ತಿದೆ.

ತಾಲ್ಲೂಕಿನ ಚಿತ್ತಾಕುಲಾ ಗ್ರಾಮ ಪಂಚಾಯಿತಿ ಈಗ ಮನೆ ಮನೆಗಳಿಂದ, ಮಾರುಕಟ್ಟೆಯಿಂದ ಸಂಗ್ರಹಿಸುವ ಹಸಿ ಕಸದಿಂದ ಗೊಬ್ಬರ ತಯಾರಿಸುತ್ತಿದೆ. ಜಿಲ್ಲೆಯಲ್ಲಿ ಕಾರವಾರ, ಶಿರಸಿ ಸೇರಿದಂತೆ ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಈ ಕ್ರಮ ಜಾರಿಯಲ್ಲಿದೆ. ಆದರೆ, ಗ್ರಾಮ ಪಂಚಾಯಿತಿಯೊಂದು ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ವಿಲೇವಾರಿಗೆ ಇಂಥ ಕ್ರಮವನ್ನು ಸಮರ್ಥವಾಗಿ ಆರಂಭಿಸಿದ್ದು ಜಿಲ್ಲೆಯಲ್ಲಿ ಮೊದಲಾಗಿದೆ.

ಚಿತ್ತಾಕುಲಾ ಗ್ರಾಮ ಪಂಚಾಯಿತಿಯು ಜನಸಂಖ್ಯೆಯ ಆಧಾರದಲ್ಲಿ ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿದೆ. ಸುಮಾರು 25 ಸಾವಿರ ಜನಸಂಖ್ಯೆಯಿದೆ. 5 ಸಾವಿರ ಮನೆಗಳಿವೆ. ಗ್ರಾಮ ಪಂಚಾಯಿತಿ ಮನೆಗಳಿಂದ ಹಸಿ ಕಸ ಸಂಗ್ರಹಿಸುವ ಕಾರ್ಯವನ್ನು ಈ ವರ್ಷ ಏಪ್ರಿಲ್‍ನಿಂದ ಮಾಡಲಾಗುತ್ತಿದೆ. ಇದಕ್ಕೆ ಸದ್ಯ ಒಂದೇ ವಾಹನವಿದೆ. ಹಾಗಾಗಿ ಸೀಮಿತ ಪರಿಧಿಯಲ್ಲಿ ಮನೆಗಳು, ಅಂಗಡಿಗಳು, ಮಾರುಕಟ್ಟೆ ಪ್ರದೇಶದಿಂದ ಹಸಿ ಕಸ ಸಂಗ್ರಹಿಸಿಕೊಂಡು ತ್ಯಾಜ್ಯ ವಿಲೇವಾರಿ ಘಟಕಕ್ಕೆ ತರಲಾಗುತ್ತಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನವೊಂದಕ್ಕೆ 25ರಿಂದ 30 ಕೆ.ಜಿ.ಗಳಷ್ಟು ಹಸಿ ಕಸ ಸಂಗ್ರಹಿಸಲಾಗುತ್ತಿದೆ. ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಎರಡು ಯಂತ್ರಗಳನ್ನು ಅಳವಡಿಸಲಾಗಿದೆ. ಅವುಗಳ ನಿರ್ವಹಣೆಗೆ ಮತ್ತು ಕಾರ್ಯನಿರ್ವಹಿಸಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ಅವರು ಸಾವಯವ ಗೊಬ್ಬರ ಸಿದ್ಧಪಡಿಸಿ ಖರೀದಿಸುವವರಿಗೆ ನೀಡುತ್ತಿದ್ದಾರೆ. ಪ್ರತಿ ಕೆ.ಜಿ. ಗೊಬ್ಬರವನ್ನು ₹10ರಂತೆ ಮಾರಾಟ ಮಾಡಲಾಗುತ್ತಿದೆ.

22 ಬಗೆಯ ತ್ಯಾಜ್ಯ ವಿಂಗಡನೆ:

‘ಚಿತ್ತಾಕುಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಯ ಜವಾಬ್ದಾರಿಯನ್ನು ದುರ್ಗಾದೇವಿ ಸ್ವಚ್ಛ ಸೇವಾ ಸಂಘಕ್ಕೆ ವಹಿಸಲಾಗಿದೆ. ವಾಹನ ಚಾಲಕ, ಸಹಾಯಕ ಹಾಗೂ ಆರು ಸಿಬ್ಬಂದಿ ಇದರಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಾತಿ ಸೂರಜ್ ದೇಸಾಯಿ.

‘ಗ್ರಾಮದಲ್ಲಿ 22 ಬಗೆಯ ತ್ಯಾಜ್ಯಗಳನ್ನು ವಿಂಗಡಿಸಲಾಗುತ್ತಿದೆ. ಸಿಟಿ ಸ್ಕ್ರ್ಯಾಪ್ ಸಂಸ್ಥೆಯು ಪ್ಲಾಸ್ಟಿಕ್ ವಿಲೇವಾರಿ ಮಾಡುತ್ತದೆ. ಮರುಬಳಕೆಯ ವಸ್ತುಗಳ ಮಾರಾಟದಿಂದ 2020– 21ರಲ್ಲಿ ಗ್ರಾಮ ಪಂಚಾಯಿತಿಗೆ ₹93,335 ಆದಾಯ ಬಂದಿದೆ. ತ್ಯಾಜ್ಯ ವಿಲೇವಾರಿ ಮಾಡುವ ಸಿಬ್ಬಂದಿಗೆ ತಿಂಗಳ ವೇತನಕ್ಕಾಗಿ ₹70 ಸಾವಿರ ಖರ್ಚಾಗುತ್ತಿದೆ. ಈ ಮೊತ್ತವು ಗೊಬ್ಬರ ಮಾರಾಟದಿಂದ ಸರಿ ಹೊಂದುವಂತೆ ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT