ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಕ್ಕು ರಕ್ಷಣೆಗೆ ಸಮನ್ವಯ ಅಗತ್ಯ- ಆಯೋಗದ ಸದಸ್ಯ ಅಶೋಕ ಯರಗಟ್ಟಿ

Last Updated 13 ಏಪ್ರಿಲ್ 2022, 13:41 IST
ಅಕ್ಷರ ಗಾತ್ರ

ಕಾರವಾರ: ‘ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಭಿಕ್ಷಾಟನೆ, ಮಕ್ಕಳು ನಾಪತ್ತೆ, ಅಪಹರಣ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರದ ಎಲ್ಲ ಇಲಾಖೆಗಳೂ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಅಶೋಕ ಯರಗಟ್ಟಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಶಿಕ್ಷಣ ಹಕ್ಕು, ಪೊಕ್ಸೊ ಕಾಯ್ದೆ 2012 ಹಾಗೂ ಬಾಲನ್ಯಾಯ ಕಾಯ್ದೆ 2015ರ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಮಕ್ಕಳ ಹಕ್ಕುಗಳ ರಕ್ಷಣಾ ವಿಚಾರದಲ್ಲಿ ಮಕ್ಕಳಿಗೆ ಮಾಹಿತಿ ಮತ್ತು ಯೋಜನೆಗಳನ್ನು ತಲುಪಿಸಬೇಕು. ಭಿಕ್ಷಾಟನೆ, ಬಾಲಕಾರ್ಮಿಕ, ಅಪಹರಣದಂಥ ಸಂದರ್ಭದಲ್ಲಿ ಮಕ್ಕಳು ಸಿಕ್ಕಾಗ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಸಾರ್ವಜನಿಕರಿಗೆ ಇರಬೇಕು. ಸಂಬಂಧಿಸಿದವರ ದೂರವಾಣಿ ಸಂಖ್ಯೆ ಒಳಗೊಂಡ ಫಲಕಗಳಿರುವ ಸಂಪರ್ಕ ಕೇಂದ್ರವನ್ನು ತೆರೆಯಬೇಕು. ಕಾಣೆಯಾದ ಮಕ್ಕಳು ‍ಪತ್ತೆಯಾದಾಗ ಕೂಲಂಕಶವಾಗಿ ವಿಚಾರಿಸಿ ಪೋಷಕರಿಗೆ ಒಪ್ಪಿಸಬೇಕು. ಬಳಿಕ ಪೋಷಕರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು’ ಎಂದು ತಿಳಿಸಿದರ.

‘1098 ಮತ್ತು 112 ಸಹಾಯವಾಣಿಗಳ ಬಗ್ಗೆ ಮಕ್ಕಳಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಬೇಕು. ಮಕ್ಕಳ ಶಿಕ್ಷಣಕ್ಕೆ ಮೂಲಸೌಕರ್ಯಗಳನ್ನು ಒದಗಿಸಬೇಕು. ದೌರ್ಜನ್ಯ ಪೀಡಿತ ಮಕ್ಕಳು ದೂರು ನೀಡುವಂತಾಗಲು ಸ್ನೇಹಮಯ ವಾತಾವರಣ ಪೊಲೀಸ್ ಠಾಣೆಗಳಲ್ಲಿ ಉಂಟಾಗಬೇಕು. ಮಕ್ಕಳಿಗೆ ಕಾನೂನು ನೆರವು ಸಿಗಬೇಕು’ ಎಂದು ನಿರ್ದೇಶನ ನೀಡಿದರು.

‘ಪ್ರತಿ ಇಲಾಖೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸವಲತ್ತು ವಿತರಣೆಯಲ್ಲಿ ಮಕ್ಕಳ ಶ್ರೇಯೋಭಿವೃದ್ಧಿ ವಿಚಾರದಲ್ಲಿ ಯೋಜನಾ ವರದಿ ತಯಾರಿಸಿ ಆಯೋಗಕ್ಕೆ ಕಳುಹಿಸಿ ಕೊಡಿ’ ಎಂದೂ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಡಿ.ವೈ.ಎಸ್‍.ಪಿ ವ್ಯಾಲೆಂಟೈನ್ ಡಿಸೋಜಾ, ಆಯೋಗದ ಸದಸ್ಯೆ ಜಯಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಪುರಾಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸೋನಲ್ ಐಗಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT