ಮಂಗಳವಾರ, ಜೂನ್ 22, 2021
22 °C
ಸೋಂಕಿತರಿಗೆ ಹಾಸಿಗೆ, ಆಮ್ಲಜನಕ, ತುರ್ತು ನಿಗಾ ಘಟಕದ ಕೊರತೆಯಿಲ್ಲ: ಸಚಿವ ಹೆಬ್ಬಾರ

ಕರ್ಫ್ಯೂನಲ್ಲಿ ಮದುವೆಗೆ ಷರತ್ತುಬದ್ಧ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಏ.23ರಿಂದ ಮೇ 7ರ ತನಕ ಸುಮಾರು ಒಂದು ಸಾವಿರ ಮದುವೆಗಳು ನಿಗದಿಯಾಗಿವೆ. ಅಂದು ಕರ್ಫ್ಯೂ ಇದ್ದರೂ ಷರತ್ತಿಗೆ ಒಳಪಟ್ಟು ಅನುಮತಿ ನೀಡಲು ಸೂಚಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮದುವೆ ಹಮ್ಮಿಕೊಂಡಿರುವ ಕುಟುಂಬದವರು ತಹಶೀಲ್ದಾರರಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಮದುವೆಯಲ್ಲಿ 50ಕ್ಕಿಂತ ಹೆಚ್ಚು ಜನ ಭಾಗವಹಿಸಲು ಅವಕಾಶ ಇರುವುದಿಲ್ಲ. ಅದೇ ರೀತಿ, ಮದುವೆಯಾದವರು ಬೇರೆ ಊರಿಗೆ ಹೋಗಲು ಕೂಡ ಮದುವೆಯ ಆಹ್ವಾನಪತ್ರಿಕೆ ತೋರಿಸಿ ಅನುಮತಿ ಪಡೆದುಕೊಳ್ಳಬೇಕು’ ಎಂದು ಸ್ಪಷ್ಟಪಡಿಸಿದರು.

‘ಮದುವೆಗೆ ತಿಂಗಳುಗಳ ಮೊದಲೇ ಸಿದ್ಧತೆ ಮಾಡಿಕೊಂಡಿರುತ್ತಾರೆ. ಮುಹೂರ್ತ ಮತ್ತೆ ಸಿಗುವುದು ಕಷ್ಟವಾಗುತ್ತದೆ. ಹಾಗಾಗಿ ಜನರ ಭಾವನೆಗಳಿಗೆ ಬೆಲೆ ನೀಡಿ ಅಧಿಕಾರಿಗಳಿಗೆ ಈ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ಹಾಸಿಗೆ, ಆಮ್ಲಜನಕ ಕೊರತೆಯಿಲ್ಲ:

‘ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 2,013 ಹಾಸಿಗೆಗಳು ಕೋವಿಡ್ ಸೋಂಕಿತರಿಗೆ ಮೀಸಲಾಗಿವೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೇವಲ 19 ಮಂದಿ ವೆಂಟಿಲೇಟರ್ ಬಳಕೆಯಲ್ಲಿದ್ದಾರೆ. ಉಳಿದಂತೆ, ಜಿಲ್ಲೆಯಾದ್ಯಂತ 55 ಸಾದಾ ಹಾಸಿಗೆಗಳು ಸೇರಿ ಒಟ್ಟು 74 ಹಾಸಿಗೆಗಳಷ್ಟೇ ಭರ್ತಿಯಾಗಿವೆ’ ಎಂದು ಮಾಹಿತಿ ನೀಡಿದರು.

‘ಕೋವಿಡ್ ನಿಯಂತ್ರಣದ ಸಲುವಾಗಿ ಜಾರಿ ಮಾಡಲಾದ ನಿಯಮಾವಳಿಗಳ ಜಾರಿಗೆ ಮತ್ತು ತುರ್ತು ಸ್ಪಂದನೆಗಾಗಿ ನೋಡಲ್ ಅಧಿಕಾರಿಗಳನ್ನು ಒಳಗೊಂಡ ಒಂಬತ್ತು ತಂಡಗಳನ್ನು ರಚಿಸಲಾಗಿದೆ. ವಲಯ ಮಟ್ಟದಲ್ಲಿ 115 ತಂಡಗಳನ್ನು ಮಾಡಲಾಗಿದೆ. ಜಿಲ್ಲಾಧಿಕಾರಿ ಎಲ್ಲ ತಂಡಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 17 ಸಾವಿರ ಡೋಸ್‌ಗಳಷ್ಟು ಲಸಿಕೆ ಸಂಗ್ರಹವಿದೆ. ಏ.23ರಂದು ಮತ್ತೆ 10 ಸಾವಿರ ಡೋಸ್ ಬರಲಿದೆ. 412 ಡೋಸ್‌ ರೆಮ್‌ಡಿಸಿವಿರ್ ಔಷಧ ತಲುಪಿದೆ. ಸೋಂಕಿತರಿಗೆ ಆದ್ಯತೆಯ ಮೇರೆಗೆ ನೀಡಲು ಜಿಲ್ಲಾ ಆರೋಗ್ಯಾಧಿಕಾರಿಗೆ ಅಧಿಕಾರ ನೀಡಲಾಗಿದೆ’ ಎಂದರು.

‘ಆಂಬುಲೆನ್ಸ್ ಕೊರತೆಯಿರುವಲ್ಲಿ ಸಮಸ್ಯೆ ನಿವಾರಣೆಗೆ ಸಂಬಂಧಿಸಿದವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಕೋವಿಡ್ ಸೋಂಕಿತರನ್ನು ಕರೆದುಕೊಂಡು ಹೋಗುವ ಎಲ್ಲ ಆಂಬುಲೆನ್ಸ್‌ಗಳಲ್ಲಿ ಆಮ್ಲಜನಕದ ಸಿಲಿಂಡರ್ ವ್ಯವಸ್ಥೆ ಕಡ್ಡಾಯವಾಗಿ ಇರುವಂತೆ ತಿಳಿಸಲಾಗಿದೆ’ ಎಂದು ಹೇಳಿದರು.

‘ವಿನಾಯಿತಿ ನೀಡಿದ್ದನ್ನು ಮುಚ್ಚಿಸಬೇಡಿ’:

‘ಕೋವಿಡ್ ನಿಯಮಾವಳಿ ಜಾರಿಯಲ್ಲಿರುವಾಗ ಸರ್ಕಾರ ವಿನಾಯಿತಿ ನೀಡಿದ ಅಂಗಡಿ, ಮುಂಗಟ್ಟುಗಳನ್ನು ಅಧಿಕಾರಿಗಳು ಮುಚ್ಚಿಸಲು ಅವಕಾಶವಿಲ್ಲ. ಯಾವುದೇ ಸೂಚನೆ ನೀಡದೇ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿಸಬಾರದು. ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ’ ಎಂದು ಶಿವರಾಮ ಹೆಬ್ಬಾರ ಹೇಳಿದರು.

‘ಚಿಂತಾಜನಕ ಸ್ಥಿತಿಯಿಲ್ಲ’:

‘ಜಿಲ್ಲೆಯಲ್ಲಿ 10 ದಿನಗಳಲ್ಲಿ ಹಮ್ಮಿಕೊಳ್ಳಲಾದ ಕೋವಿಡ್ ಪರೀಕ್ಷೆಯಲ್ಲಿ ಶಿರಸಿಯಲ್ಲಿ ಶೇ 8.57, ಅಂಕೋಲಾದಲ್ಲಿ ಶೇ 5.80 ಹಾಗೂ ಕಾರವಾರದಲ್ಲಿ ಶೇ 5.24ರಷ್ಟು ಪ್ರಕರಣಗಳು ದೃಢಪಡುತ್ತಿವೆ. ಉಳಿದ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಉತ್ತರ ಕನ್ನಡದಲ್ಲಿ ಚಿಂತಾಜನಕ ಸ್ಥಿತಿಯಿಲ್ಲ’ ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯಿತಿ ಸಿ.ಇ.ಒ ಎಂ.ಪ್ರಿಯಾಂಗಾ, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ, ‘ಕ್ರಿಮ್ಸ್’ ನಿರ್ದೇಶಕ ಡಾ.ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ಇದ್ದರು.

****

ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಯಲ್ಲಿ ನಿಭಾಯಿಸಲು ಹಣದ ಕೊರತೆಯಿಲ್ಲ. ಜಿಲ್ಲಾಧಿಕಾರಿ ಖಾತೆಗೆ ₹ 5 ಕೋಟಿ ಬಿಡುಗಡೆ ಮಾಡಲಾಗಿದ್ದು, ಅಗತ್ಯ ವೆಚ್ಚಗಳಿಗೆ ಬಳಸಿಕೊಳ್ಳಬಹುದು.

- ಶಿವರಾಮ ಹೆಬ್ಬಾರ, ಜಿಲ್ಲಾ ಉಸ್ತುವಾರಿ ಸಚಿವ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು