ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಘನಾಶಿನಿಗೆ ಸುರಿದ ಮಣ್ಣು ತೆರವಿಗೆ ತೀರ್ಮಾನ

ಮಳೆಗಾಲದಲ್ಲಿ ಮಣ್ಣಿಗೆ ಪಾಲಿಥಿನ್ ಶೀಟ್ ಹೊದಿಕೆ: ಗುತ್ತಿಗೆದಾರರು
Last Updated 14 ಮೇ 2019, 13:57 IST
ಅಕ್ಷರ ಗಾತ್ರ

ಕುಮಟಾ:ತಾಲ್ಲೂಕಿನ ಐಗಳಕೂರ್ವೆ ಹಾಗೂ ಕೊಡಕಣಿ ಗ್ರಾಮದ ನಡುವೆ ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಮಣ್ಣಿನ ದಿಬ್ಬ ತೆರವುಗೊಳಿಸಲು ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ಕಚೇರಿಯಲ್ಲಿಸೇರಿದ್ದ ಸ್ಥಳೀಯರು, ಮೀನುಗಾರರುಹಾಗೂ ಗುತ್ತಿಗೆದಾರ ಕಂಪನಿ ಅಧಿಕಾರಿಗಳು ಈ ವಿಚಾರವಾಗಿ ಚರ್ಚಿಸಿದರು.

ನದಿಗೆ ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಸುರಿಯಲಾಗಿತ್ತು. ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಸಭೆಯಲ್ಲಿ ಮಾತನಾಡಿದಜಿಲ್ಲಾ ನಾಡದೋಣಿ ಸಂಘದ ಅಧ್ಯಕ್ಷ ಸದಾನಂದ ಹರಿಕಂತ್ರ, ‘ನದಿಯ ಪ್ರಾಕೃತಿಕ ಸ್ವರೂಪಕ್ಕೆ ಹಾಗೂ ನದಿಯಲ್ಲಿ ಮೀನುಗಾರಿಕೆಗೆ ಅಡ್ಡಿಯಾಗದಂತೆ ಸೇತುವೆ ನಿರ್ಮಾಣ ಕಾರ್ಯ ಕೈಗೊಳ್ಳಬೇಕಿತ್ತು. ಶತಮಾನಗಳಷ್ಟು ಹಳೆಯ ಪದ್ಧತಿಯಂತೆ ನದಿಯಲ್ಲಿ ಸಾವಿರಾರು ಲಾರಿ ಲೋಡ್ ಮಣ್ಣು ಸುರಿಯಲಾಗಿದೆ.ಒಡ್ಡು ಕಟ್ಟಿ ಸೇತುವೆ ಕಾಮಗಾರಿ ಮುಗಿದ ನಂತರ ಮಣ್ಣನ್ನು ನೀರಿನಲ್ಲಿ ಕೊಚ್ಚಿ ಬಿಡುವುದು ಅಪರಾಧ ಹಾಗೂ ಸಮಾಜ ದ್ರೋಹ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ರೀತಿ ಮಾಡುವುದರಿಂದ ಮುಂದೆ ನದಿಯಲ್ಲಿ ಹೂಳು ತುಂಬಿ ದೋಣಿಗಳು ಸಾಗದಂತಾಗುತ್ತದೆ. ನದಿಯಲ್ಲಿ ಸುರಿದ ಮಣ್ಣನ್ನು ತಕ್ಷಣ ತೆರವು ಮಾಡಿ ನೀರಿನ ಹರಿವಿಗೆ ಅನುಕೂಲ ಮಾಡಿಕೊಡಬೇಕು. ಮಣ್ಣು ತೆಗೆದ ನಂತರವೂ ಮೀನುಗಾರರಿಗೆ ತೊಂದರೆ ಉಂಟಾದರೆ ಪ್ರತಿಭಟನೆ ಮುಂದುವರಿಸುವುದು ಅನಿವಾರ್ಯವಾಗುತ್ತದೆ’ ಎಂದರು.

ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ಮಾತನಾಡಿ, ‘ನದಿಯಲ್ಲಿ ಒಡ್ಡು ಕಟ್ಟಿದ ಮಣ್ಣನ್ನು ನೀರಿನಲ್ಲಿ ಹಾಗೇ ಕೊಚ್ಚಿ ಬಿಟ್ಟರೆ ಹಾನಿಯಾಗುತ್ತದೆ. ಯಾವ ರೀತಿ ಇದನ್ನು ತಡೆಯುತ್ತೀರಿ?’ ಎಂದು ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದ ಡಿ.ಆರ್.ನಾಯಕ ಕಂಪನಿಯ ಎಂಜಿನಿಯರ್ ಮಲ್ಲಿಕಾರ್ಜುನ ಕೋಲಕಾರ್ ಅವರನ್ನು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಅವರು, ‘ಮಳೆಗಾಲದಲ್ಲಿ ಮಣ್ಣು ಕೊಚ್ಚಿಹೋಗದಂತೆ ಪಾಲಿಥಿನ್ ಶೀಟ್‌ಗಳನ್ನು ಹೊದೆಸಲಾಗುವುದು. ನೀರಿನ ಮಟ್ಟದ ಮಣ್ಣನ್ನು ಮಳೆಗಾಲದಲ್ಲಿ ತೆಗೆಯಲಾಗುವುದು. ನೀರು ಹರಿದು ಹೋಗಲು ನದಿಯ ಎರಡೂ ಬದಿಗಳಲ್ಲಿ 30 ಮೀಟರ್ ಅಗಲದ ದಾರಿ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಗಣೇಶ ಅಂಬಿಗ ಮಾತನಾಡಿ, ‘ಮಣ್ಣಿನಿಂದ ನದಿಯಲ್ಲಿ ಹೂಳು ಸಂಗ್ರಹವಾಗದಂತೆ ಹಾಗೂ ಮೀನುಗಾರಿಕೆಗೆ ತೊಂದರೆ ಆಗದಂತೆ ಸೇತುವೆ ಕಾಮಗಾರಿ ನಿರ್ವಹಿಸಿ. ಯಥಾಸ್ಥಿತಿ ಮುಂದುವರಿದರೆ ಮೀನುಗಾರರ ಹೋರಾಟ ಕೂಡ ಮುಂದುವರಿಯುತ್ತದೆ’ ಎಂದು ಎಚ್ಚರಿಕೆ ನೀಡಿದರು.

ನಾಡದೋಣಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುಧಾಕರ ತಾರಿ, ಮೀನುಗಾರರ ಮುಖಂಡ ಗೋಪಾಲ ಹೊಸಕಟ್ಟಾ, ಐಗಳಕೂರ್ವೆ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT