ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರಕ್ಕಿಳಿದು ಅರೆಬೆತ್ತಲೆ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುತ್ತಿಗೆದಾರರ ಮೆರವಣಿಗೆ
Last Updated 23 ಫೆಬ್ರುವರಿ 2021, 11:39 IST
ಅಕ್ಷರ ಗಾತ್ರ

ಕಾರವಾರ: ಲಂಚವನ್ನು ನಿರ್ಮೂಲನೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಾಲ್ಲೂಕು ನೋಂದಾಯಿತ ಗುತ್ತಿಗೆದಾರರ ಸಂಘದ ಪ್ರಮುಖರು ನಗರದಲ್ಲಿ ಮಂಗಳವಾರ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡರು. ಟ್ಯಾಗೋರ್ ಕಡಲತೀರದಲ್ಲಿ ಸಮುದ್ರಕ್ಕಿಳಿದು ‘ಗುತ್ತಿಗೆದಾರರನ್ನು ರಕ್ಷಿಸಿ’ ಎಂದು ಆಗ್ರಹಿಸಿದರು.

ನಗರದ ಮಿತ್ರ ಸಮಾಜ ಮೈದಾನದಿಂದ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು, ಗ್ರೀನ್‌ಸ್ಟ್ರೀಟ್ ಮೂಲಕ ಸಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸಿದರು. ಬಳಿಕ ಸಮುದ್ರದಲ್ಲಿ ಸೊಂಟದೆತ್ತರದ ನೀರಿನಲ್ಲಿ ನಿಂತು ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಾಧವ ನಾಯಕ, ‘ಟೆಂಡರ್ ಮೂಲಕ ಕೆಲಸ ಪಡೆದುಕೊಂಡ ಗುತ್ತಿಗೆದಾರರು ಕಾಮಗಾರಿಗೆ ಮಾಡಿದ ಸಾಲ ತೀರಿಸಲು ಒದ್ದಾಡಬೇಕಾಗಿದೆ. ಕಾಮಗಾರಿಯ ಹಣವನ್ನು ಪಾವತಿಸಲು ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಲಂಚ ಕೊಡಬೇಕಾಗಿದೆ’ ಎಂದರು.

‘ಸರ್ಕಾರವು ರಾಜಧನವನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಿದೆ. ಇದನ್ನು ಕಡಿಮೆ ಮಾಡಿ, ಈ ಹಿಂದಿನ ದರವನ್ನೇ ನಿಗದಿ ಮಾಡಬೇಕು. ನಿರ್ಮಾಣ ಸಾಮಗ್ರಿಗಳಾದ ಮಣ್ಣು, ಮರಳು, ಚಿರೇಕಲ್ಲು, ಕಲ್ಲು, ಎಂ ಸ್ಯಾಂಡ್ ಹಾಗೂ ಜಲ್ಲಿಕಲ್ಲನ್ನು ಸರಬರಾಜು ಮಾಡಲು ವಿಳಂಬವಿಲ್ಲದೇ ಪರವಾನಗಿ ನೀಡಬೇಕು. ಜೊತೆಗೇ ಇದಕ್ಕೆ ಬೇಕಾದ ಕ್ವಾರಿಗಳನ್ನು ಗುರುತಿಸುವ ಕಾರ್ಯವಾಗಬೇಕು’ ಎಂದು ಅವರು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಮಳೆ ಹೆಚ್ಚು ಬರುವ ಕಾರಣ ಮಳೆಗಾಲವನ್ನು ಹೊರತುಪಡಿಸಿದ ಅವಧಿಯಲ್ಲಿ ಕಾಮಗಾರಿಗೆ ಅವಕಾಶ ನೀಡಬೇಕು. ವಿವಿಧ ಇಲಾಖೆಗಳಲ್ಲಿ ಪಾವತಿಗೆ ಬಾಕಿಯಿರುವ ಕಾಮಗಾರಿಯ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕರಾವಳಿ ಮತ್ತು ಮಲೆನಾಡಿಗೆ ಪ‍್ರತ್ಯೇಕವಾಗಿ ದರವಾರು ಪಟ್ಟಿಯನ್ನು ರೂಪಿಸಬೇಕು. ಖಾಲಿಯಿರುವ ಎಂಜಿನಿಯರ್‌ಗಳ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಇದೇವೇಳೆ ಆಗ್ರಹಿಸಿದರು.

‘ಪ್ಯಾಕೇಜ್’ ಪದ್ಧತಿಗೆ ವಿರೋಧ

‘ಕಡಿಮೆ ಮೊತ್ತದ ಎರಡು, ಮೂರು ಕಾಮಗಾರಿಗಳನ್ನು ಒಟ್ಟುಗೂಡಿಸಿ ಒಂದು ‘ಪ್ಯಾಕೇಜ್’ ಗುತ್ತಿಗೆ ಕೊಡುವ ಪದ್ಧತಿಯನ್ನು ನಿಲ್ಲಿಸಬೇಕು. ಸರ್ಕಾರದ ಈ ಕ್ರಮದಿಂದಾಗಿ ಸಣ್ಣ ಗುತ್ತಿಗೆದಾರರಿಗೆ ಕಾಮಗಾರಿಗಳು ಸಿಗುತ್ತಿಲ್ಲ. ಇದರಿಂದಾಗಿ ಅವರಿಗೆ ಬಹಳ ತೊಂದರೆಯಾಗುತ್ತಿದೆ’ ಎಂದು ಮಾಧವ ನಾಯಕ ಹೇಳಿದರು.

‘ಸರ್ಕಾರವು ₹ 2 ಕೋಟಿಯೊಳಗಿನ ಕಾಮಗಾರಿಯನ್ನು ಟೆಂಡರ್ ಕರೆಯದೇ ನೇರವಾಗಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಲು ಮುಂದಾಗಿದೆ. ಇದಕ್ಕೆ ಕಾಯ್ದೆಗೂ ತಿದ್ದುಪಡಿ ತರಲು ಸಿದ್ಧತೆ ನಡೆಸಿದೆ. ಇದು ಒಪ್ಪುವಂಥ ವಿಚಾರವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಂತೋಷ ಪಿ.ಸೈಲ್, ಕಾರ್ಯದರ್ಶಿ ಅನಿಲ್ ಕುಮಾರ್ ಎಂ.ಮಾಳ್ಸೇಕರ್, ಜಂಟಿ ಕಾರ್ಯದರ್ಶಿ ಸುಮೀತ್ ಎಂ.ಅಸ್ನೋಟಿಕರ್ ಸೇರಿದಂತೆ ಹಲವು ಮಂದಿ ಗುತ್ತಿಗೆದಾರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT