ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಬೆಂಗಳೂರಿನಿಂದ ಬಂದಿದ್ದ ವ್ಯಕ್ತಿ ಮೃತ: ಟಿಎಸ್‌ಎಸ್‌ ಒಂದು ವಾರ ಬಂದ್

ಕೋವಿಡ್ 19 ಸೋಂಕು ಹೆಚ್ಚುತ್ತಿರುವ ಆತಂಕ
Last Updated 6 ಜುಲೈ 2020, 16:11 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ. ಬೆಂಗಳೂರಿನಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಸೋಮವಾರ ಸೋಂಕು ದೃಢಪಟ್ಟಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ತಾಲ್ಲೂಕಿನ ಬಾಳಗಾರದ ಈ ವ್ಯಕ್ತಿ, ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಜ್ವರದ ಲಕ್ಷಣಗಳನ್ನು ಗಮನಿಸಿ, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಿಗೆ ಸೋಂಕು ಇರುವುದು ಖಚಿತವಾಗಿರುವ ಕಾರಣ, ಕಾರವಾರದ ಕ್ರಿಮ್ಸ್‌ಗೆ ಚಿಕಿತ್ಸೆಗೆ ಕಳುಹಿಸಲಾಗಿತ್ತು. ಅವರು ಶನಿವಾರ ಬೆಂಗಳೂರಿನಿಂದ ಬರುವಾಗಲೇ ಜ್ವರದಿಂದ ಬಳಲುತ್ತಿದ್ದರು.

ಟಿಎಸ್‌ಎಸ್‌ ಸ್ವಯಂಪ್ರೇರಿತ ಬಂದ್:

ಹೆಚ್ಚು ಕೃಷಿ ವಹಿವಾಟು ನಡೆಯುವ ಇಲ್ಲಿನ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿಯನ್ನು ಸ್ವಯಂ ಪ್ರೇರಿತವಾಗಿ ಒಂದು ವಾರ ಬಂದ್ ಮಾಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

’ಕೋವಿಡ್ 19 ಹೆಚ್ಚುತ್ತಿರುವ ಕಾರಣ ಅತಿ ದೊಡ್ಡ ವ್ಯಾಪಾರಿ ಸ್ಥಳವಾದ ಟಿಎಸ್‌ಎಸ್‌ನ ಎಲ್ಲ ವ್ಯವಹಾರಗಳನ್ನು ಜುಲೈ 7ರಿಂದ 12ರವರೆಗೆ ಸ್ಥಗಿತಗೊಳಿಸಲಾಗುವುದು. ಜನರ ಓಡಾಟ, ವ್ಯಾವಹಾರಿಕವಾಗಿ ಹೆಚ್ಚು ಜನರು ಸೇರುವುದನ್ನು ನಿಯಂತ್ರಿಸುವುದು ಹಾಗೂ ಆ ಮೂಲಕ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಾಮಾಜಿಕ ಕಳಕಳಿಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಸೂಪರ್ ಮಾರ್ಕೆಟ್, ವ್ಯಾಪಾರಿ ಅಂಗಳ, ಹಣಕಾಸು ವ್ಯವಹಾರ, ಅಕ್ಕಿ ಗಿರಣಿ ವಿಭಾಗಗಳು ಸಂಪೂರ್ಣ ಬಂದಾಗುತ್ತವೆ. ಸಾರ್ವಜನಿಕರ ಸಹ ಸ್ವಯಂ ಪ್ರೇರಿತರಾಗಿ ಓಡಾಟವನ್ನು ನಿಯಂತ್ರಿಸಬೇಕು’ ಎಂದು ಟಿಎಸ್‌ಎಸ್‌ ತಿಳಿಸಿದೆ.

ಟಿಎಸ್‌ಎಸ್‌ನ ಮುಂಡಗೋಡ, ಸಿದ್ದಾಪುರ, ಯಲ್ಲಾಪುರ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಇಲ್ಲಿನ ಮಾರಿಕಾಂಬಾ ದೇವಾಲಯದ ಪಕ್ಕದಲ್ಲಿರುವ ಮನೆಯ ವ್ಯಕ್ತಿಯಲ್ಲಿ ಕೋವಿಡ್ 19 ದೃಢಪಟ್ಟಿರುವುದರಿಂದ ಒಂದು ದೇವಾಲಯದಲ್ಲಿ ದೇವಿಯ ದರ್ಶನವನ್ನು ನಿರ್ಬಂಧಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಸೋಮವಾರ ದೇವಾಲಯದ ಇಡೀ ಆವರಣವನ್ನು ಸ್ಯಾನಿಟೈಸ್ ಮಾಡಲಾಯಿತು.

ಬಂಗಾರದ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್ ಸೋಂಕು ಖಚಿತವಾಗಿರುವ ಕಾರಣ ನಗರದ ಎಲ್ಲ ಬಂಗಾರದ ಅಂಗಡಿಗಳನ್ನು ಮೂರು ದಿನಗಳ ಕಾಲ ಬಂದ್ ಮಾಡಲಾಗಿದೆ. ಸರಾಫರ ಸಂಘಟನೆ ಮುಂದಾಗಿ ಈ ನಿರ್ಧಾರ ಪ್ರಕಟಿಸಿದೆ.

ನಗರದ ವ್ಯಾಪಾರಸ್ಥರು ಅರ್ಧ ದಿನ ಮಾತ್ರ ಅಂಗಡಿಗಳನ್ನು ತೆರೆದು, ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್ ಮಾಡಿ, ಕೋವಿಡ್ 19 ದೂರಗೊಳಿಸಬೇಕು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT