ಗುರುವಾರ , ಸೆಪ್ಟೆಂಬರ್ 16, 2021
29 °C
ಸ್ವಚ್ಛಗೊಳಿಸಲೆಂದೇ 535 ಕಿ.ಮೀ ಬೈಕ್‌ ಪ್ರಯಾಣ!

ಕಾರವಾರದ ತೀಳ್‌ಮಾತಿ ಕಡಲತೀರ ಸ್ವಚ್ಛಗೊಳಿಸಿದ ಬೆಂಗಳೂರಿನ ದಂಪತಿ

ದೇವರಾಜ ನಾಯ್ಜ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಬೆಂಗಳೂರಿನಿಂದ ಬಂದ ದಂಪತಿ ತಾಲ್ಲೂಕಿನ ತೀಳ್‌ಮಾತಿ ಕಡಲತೀರದಲ್ಲಿ ತುಂಬಿಕೊಂಡಿದ್ದ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ ಸ್ವಚ್ಛತಾ ಪ್ರಜ್ಞೆ ಮೆರೆದಿದ್ದಾರೆ.

ಬೆಂಗಳೂರಿನ ಕಸ್ತೂರಿನಗರದ ನಿವಾಸಿ ಮೃತ್ಯುಂಜಯ್ ಹಾಗೂ ಸ್ನಿಗ್ಧಾ, ಸುಮಾರು 535 ಕಿ.ಮೀ. ದೂರದಿಂದ ಬೈಕ್‌ನಲ್ಲಿ ಇತ್ತೀಚಿಗೆ ಇಲ್ಲಿಗೆ ಬಂದಿದ್ದರು. ಕಡಲತೀರಕ್ಕೆ ತೆರಳಿ ಅರ್ಧ ದಿನ ಸ್ವಚ್ಛತೆಗಾಗಿ ಕಳೆದಿದ್ದಾರೆ. ಆ ಮೂಲಕ ಇತರ ಪ್ರವಾಸಿಗರನ್ನು ಹುರಿದುಂಬಿಸಿದ್ದಾರೆ.

ಮೃತ್ಯುಂಜಯ್, ಕಾರ್ಪೊರೇಟ್‌ ಕಂಪನಿಗಳ ಸಾಕ್ಷ್ಯಚಿತ್ರ ನಿರ್ಮಾಣ (ಫಿಲ್ಮ್ ಮೇಕರ್) ಮಾಡುತ್ತಾರೆ. ಸ್ನಿಗ್ಧಾ ‘ಡೆಲ್ ಟೆಕ್ನಾಲಜಿ’ಯಲ್ಲಿ ಮಾನವ ಸಂಪನ್ಮೂಲ (ಎಚ್‌ಆರ್) ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಾರಣ, ಸುತ್ತಾಟ, ಪ್ರವಾಸವನ್ನು ಹೆಚ್ಚಾಗಿ ಇಷ್ಟಪಡುವ ಈ ದಂಪತಿ, 2018ರ ಡಿಸೆಂಬರ್‌ ತಿಂಗಳಲ್ಲಿ ನಗರಕ್ಕೆ ಭೇಟಿ ಕೊಟ್ಟಾಗ ತೀಳ್‌ಮಾತಿ ಸ್ವಚ್ಛತೆಗೆ ನಿರ್ಧರಿಸಿದ್ದರು.

‘ಬೇಸರವಾಗಿತ್ತು’: ‘ಕಾರವಾರದಲ್ಲಿ ವಿಕಾಸ್ ತಾಂಡೇಲ ಎನ್ನುವ ಸ್ನೇಹಿತರಿದ್ದಾರೆ. ಅವರು ಗುತ್ತಿಗೆದಾರರಾಗಿ ವೃತ್ತಿ ಮಾಡುತ್ತಿದ್ದಾರೆ. ಈ ಹಿಂದೆ ತೀಳ್‌ಮಾತಿಗೆ ಭೇಟಿ ಕೊಟ್ಟಾಗ ಅಲ್ಲಿನ ತ್ಯಾಜ್ಯಗಳ ರಾಶಿ ಕಂಡು ಬೇಸರವಾಗಿತ್ತು. ಅಂದೇ ಕಡಲತೀರವನ್ನು ಸ್ವಚ್ಛಗೊಳಿಸಲು ನಿರ್ಧರಿಸಿ, ಬಿಡುವಿದ್ದಾಗ ಇಲ್ಲಿಗೆ ಬರಲು ಯೋಜನೆ ರೂಪಿಸಿದ್ದೆವು’ ಎಂದು ಮೃತ್ಯುಂಜಯ್ ವಿವರಿಸಿದರು.

‘ಪ್ರಜಾವಾಣಿ ಜತೆ ಮಾತನಾಡಿದ ಅವರು, ‘ಅಂದು ನಿರ್ಧರಿಸಿದಂತೆ ಬೈಕ್‌ನಲ್ಲಿ ಇಬ್ಬರೂ ಮೇ 1ರ ಸುಮಾರಿಗೆ ಕಾರವಾರಕ್ಕೆ ಬಂದೆವು. ಈ ವೇಳೆ ಸ್ವಚ್ಛತೆ ಕೈಗೊಳ್ಳಲು ಬೇಕಾದ ಸಾಮಗ್ರಿಯನ್ನೂ ಜತೆಯಲ್ಲೇ ತಂದಿದ್ದೆವು. ಎರಡರಂದು ಸ್ವಚ್ಛತಾ ಕಾರ್ಯ ಕೈಗೊಂಡೆವು. ಆಶ್ವರ್ಯವೆಂದರೆ, ಸುಮಾರು 50 ಕೆ.ಜಿ ಗಾತ್ರದ ಐದು ಚೀಲಗಳಲ್ಲಿ ಖಾಲಿ ಬಿಯರ್‌ ಬಾಟಲಿಗಳೇ ತುಂಬಿದ್ದವು. ಇನ್ನಷ್ಟು ತ್ಯಾಜ್ಯವಿತ್ತು. ಆದರೆ, ನಾವು ಮೂವರೇ ಇದ್ದಿದ್ದರಿಂದ ಎಲ್ಲವನ್ನೂ ಸ್ವಚ್ಛಗೊಳಿಸಲು ಸಾಧ್ಯವಾಗಲಿಲ್ಲ’ ಎಂದು ಅವರು ತಿಳಿಸಿದರು.

ವಿಡಿಯೊ ಅಪ್‌ಲೋಡ್ ಮಾಡಿದರು: ತಮ್ಮ ಪರಿಸರ ಕಾಳಜಿಯ ವಿಡಿಯೊವನ್ನು ದಂಪತಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದಾರೆ. ಅವರದೇ ಆದ, ‘ಸ್ನಿಗ್ಧಾಸ್ ಬಯೋಸ್ಕೋಪ್’ ಹೆಸರಿನ ಚಾನೆಲ್‌ನಲ್ಲಿ ವಿಡಿಯೊವಿದೆ. ಕಡಲತೀರವನ್ನು ಮಲಿನಗೊಳಿಸದಂತೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಅವರು ಮನವಿ ಮಾಡಿಕೊಂಡಿದ್ದಾರೆ.

‘ಮತ್ತೆ ಬರುತ್ತೇವೆ, ಸ್ವಚ್ಛತೆ ಮಾಡುತ್ತೇವೆ’: ‘ಉತ್ತರ ಕನ್ನಡ ಬಹಳ ಸುಂದರ ಜಿಲ್ಲೆ. ಬೆಂಗಳೂರಿನಂಥ ನಗರಗಳಲ್ಲಿ ವಾಸಿಸುವವರಿಗೆ ಇದು ಸ್ವರ್ಗದಂತೆ ಕಾಣುತ್ತದೆ’ ಎನ್ನುತ್ತಾರೆ ಸ್ನಿಗ್ಧಾ.

‘ಇಲ್ಲಿನ ಕಡಲತೀರಕ್ಕೆ ಪ್ರವಾಸಕ್ಕೆಂದು ಬಂದವರು ಪ್ಲಾಸ್ಟಿಕ್ ಕವರ್‌ಗಳನ್ನು ಅಲ್ಲೇ ಬಿಟ್ಟು ಬರುತ್ತಾರೆ. ಅಲ್ಲಿ ಜಿಲ್ಲಾಡಳಿತ ಸಿಬ್ಬಂದಿಯನ್ನು ಅಥವಾ ಮಾರ್ಗದರ್ಶಕರನ್ನು ನೇಮಿಸಬೇಕು. ಸೂಚನಾ ಫಲಕಗಳನ್ನು ಅಳವಡಿಸಬೇಕು. ಜತೆಗೆ, ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಅವರು ಮನವಿ ಮಾಡುತ್ತಾರೆ.

‘ಮಳೆಗಾಲ ಮುಗಿದ ಬಳಿಕ ಮತ್ತೆ ಜಿಲ್ಲೆಗೆ ಬರುತ್ತೇವೆ. ಅದು ಕೂಡ ಕಾರವಾರಕ್ಕೆ. ಇಲ್ಲಿನ ‘ಲೇಡಿ ಬೀಚ್’ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತೇವೆ. ಈ ಮೊದಲು ಬಂದಾಗ ನಮ್ಮ ಜೊತೆ ಕಡಿಮೆ ಜನರಿದ್ದ ಕಾರಣ ಸ್ವಚ್ಛಗೊಳಿಸಲು ಸಾಧ್ಯವಾಗಿರಲಿಲ್ಲ. ಮತ್ತೆ ಬರುವಾಗ ಇನ್ನೊಂದಿಷ್ಟು ಜನರ ಸಹಕಾರ ಬಯಸುತ್ತೇವೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು