ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಮರಳು ಅಕ್ರಮ ಸಾಗಾಟ ತಡೆಗೆ ಜಿಲ್ಲಾಧಿಕಾರಿ ಸೂಚನೆ

ಶರಾವತಿ ನದಿಪಾತ್ರದಲ್ಲಿ ಅನಧಿಕೃತವಾಗಿ ಮರಳು ಸಾಗಣೆ ಬಗ್ಗೆ ಹೆಚ್ಚು ದೂರು
Last Updated 23 ಡಿಸೆಂಬರ್ 2021, 15:41 IST
ಅಕ್ಷರ ಗಾತ್ರ

ಕಾರವಾರ: ‘ಹೊನ್ನಾವರ ತಾಲ್ಲೂಕಿನ ಶರಾವತಿ ನದಿಪಾತ್ರದಲ್ಲಿ ಅನಧಿಕೃತವಾಗಿ ಮರಳು ಸಾಗಣೆ ಬಗ್ಗೆ ಹೆಚ್ಚು ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಕಾರ್ಯನಿರ್ವಹಿಸಬೇಕು. ದೂರುಗಳನ್ನು ಸ್ವೀಕರಿಸಿ, ಅವುಗಳಿಗೆ ತಕ್ಷಣ ಸ್ಪಂದಿಸಿ ಅಕ್ರಮಗಳನ್ನು ತಡೆಯಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ಪೊಲೀಸ್ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.

‘ಸರ್ಕಾರಿ ಕಾಮಗಾರಿಗೆ ಮರಳು ಸಿಗುತ್ತಿಲ್ಲ ಎಂಬ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಎಲ್ಲೆಲ್ಲಿ ನಡೆಯುತ್ತಿವೆ ಎಂಬುದನ್ನು ಪಟ್ಟಿ ಮಾಡಬೇಕು. ಕಾಮಗಾರಿ ನಡೆಯುವ ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಗುತ್ತಿಗೆದಾರರಿಗೆ ಆದ್ಯತೆಯ ಮೇರೆಗೆ ಸಂಗ್ರಹಿಸಿದ ಮರಳನ್ನು ಪೂರೈಕೆ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

‘ಮರಳು ಅಕ್ರಮ ಸಾಗಣೆ ಕುರಿತು ದಾಖಲಾದ ದೂರುಗಳನ್ನು ಸಂಬಂಧಿಸಿದ ಇಲಾಖೆಗಳು ಸಮನ್ವಯ ಸಾಧಿಸಿ ತಾರ್ಕಿಕವಾಗಿ ಅಂತ್ಯಗೊಳ್ಳುವಂತೆ ನೋಡಿಕೊಳ್ಳಬೇಕು. ಈ ಇಲಾಖೆಗಳ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳ ಜೊತೆ ಪ್ರತಿ ತಿಂಗಳು ಕಡ್ಡಾಯವಾಗಿ ಸಭೆ ನಡೆಸಬೇಕು. ಸಭೆಯ ನಡಾವಳಿಗಳ ವರದಿಯನ್ನು ಜಿಲ್ಲಾ ಮರಳು ಉಸ್ತುವಾರಿ ಸಮಿತಿಗೆ ನೀಡಬೇಕು’ ಎಂದು ತಿಳಿಸಿದರು.

‘ಸರದಿಯಲ್ಲಿ ಕರ್ತವ್ಯ’:

‘ಅಕ್ರಮ ಮರಳು ಗಣಿಗಾರಿಕೆ, ಸಾಗಣೆ, ದಾಸ್ತಾನು ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಾಗ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅನುಕೂಲವಾಗುವಂತೆ ಪ್ರತಿದಿನ ಸರದಿ ಪ್ರಕಾರ ವಿವಿಧ ಇಲಾಖೆಗಳು ಕರ್ತವ್ಯ ನಿರ್ವಹಿಸಬೇಕು. ಅರಣ್ಯ, ಪೊಲೀಸ್, ಕಂದಾಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಲೋಕೋಪಯೋಗಿ, ಜಲ ಸಂಪನ್ಮೂಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಮೋಟಾರು ವಾಹನ ನಿರೀಕ್ಷಕರು ತಲಾ ಇಬ್ಬರು ಸಿಬ್ಬಂದಿಯನ್ನು ನೇಮಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಯಾವ ದಿನ ಯಾವ ಇಲಾಖೆಯ ಜವಾಬ್ದಾರಿ ಎಂಬ ಬಗ್ಗೆ ಪಟ್ಟಿ ತಯಾರಿಸಿ ಆದೇಶ ಜಾರಿಯಾಗಲಿ. ಯಾರು ಕೆಲಸ ಮಾಡುತ್ತಿದ್ದಾರೆ ಅಥವಾ ಮಾಡುತ್ತಿಲ್ಲ ಎಂಬುದನ್ನು ಗಮನಿಸಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಿಯಾಂಗಾ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್.ಡಿ.ಪೆನ್ನೇಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದ್ರಿನಾಥ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಸೋಮಶೇಖರ ಇದ್ದರು.

-----

ಜಿಲ್ಲಾಧಿಕಾರಿ ಸೂಚನೆ:

* ಮರಳು ದಿಬ್ಬಗಳಿಗೆ ಅಧಿಕೃತ ವ್ಯಕ್ತಿ, ವಾಹನಕ್ಕೆ ಮಾತ್ರ ಪ್ರವೇಶಾವಕಾಶ

* ಒಂದೇ ಪಾಸ್ ಪಡೆದು ಹೆಚ್ಚು ವಾಹನಗಳಲ್ಲಿ ಮರಳು ಸಾಗಿಸಿದರೆ ಕಾನೂನು ಕ್ರಮ

* ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು

* ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು

* ದುರಸ್ತಿ ಆಗಬೇಕಿರುವ ಕ್ಯಾಮೆರಾಗಳನ್ನು ಬೇಗ ದುರಸ್ತಿ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT