ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ನೌಕಾಪಡೆಯೊಂದಿಗೆ ಸಹಭಾಗಿತ್ವಕ್ಕೆ ಅಮೆರಿಕ ಉತ್ಸುಕ: ರಾಜನಾಥ ಸಿಂಗ್

Last Updated 26 ಮೇ 2022, 15:04 IST
ಅಕ್ಷರ ಗಾತ್ರ

ಕಾರವಾರ: 'ಭಾರತೀಯ ನೌಕಾಪಡೆಯು ವಿಶ್ವದಲ್ಲಿ ಅತ್ಯುತ್ತಮವಾದ ಗೌರವ ಹೊಂದಿದೆ. ಅಮೆರಿಕದ ನೌಕಾಪಡೆಯು ಭಾರತೀಯ ನೌಕಾಪಡೆಯೊಂದಿಗೆ ಸಹಯೋಗ ಹೊಂದಲು ಉತ್ಸುಕವಾಗಿದೆ' ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.

ಇಲ್ಲಿನ ಐ.ಎನ್.ಎಸ್ ಕದಂಬ ನೌಕಾನೆಲೆಗೆ ಎರಡು ದಿನಗಳ ಭೇಟಿಗಾಗಿ ಗುರುವಾರ ಸಂಜೆ ಆಗಮಿಸಿದ ಅವರು, ನೌಕಾನೆಲೆಯ ಅಧಿಕಾರಿ ವರ್ಗ, ಸಿಬ್ಬಂದಿ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

'ಈಚೆಗೆ ಅಮೆರಿಕಕ್ಕೆ ನಾನು ತೆರಳಿದ್ದಾಗ ಆ ದೇಶದ ನೌಕಾಪಡೆಯ ಮುಖ್ಯಸ್ಥರ ಭೇಟಿಯಾಗಿತ್ತು. ಅವರೊಂದಿಗೆ ಮಾತುಕತೆಯಲ್ಲಿ ಈ ಬಗ್ಗೆ ಚರ್ಚೆಯಾಯಿತು' ಎಂದು ತಿಳಿಸಿದರು.

'ಭಾರತದ ಕಡಲು ನಿಮ್ಮಿಂದಾಗಿ (ನೌಕಾಪಡೆ) ಸುರಕ್ಷಿತವಾಗಿದೆ. ದೇಶದ ಗಡಿಗಳು ಸುರಕ್ಷಿತವಾಗಿವೆ. ಇದರಲ್ಲಿ, ದೇಶದ ರಕ್ಷಣೆಯಲ್ಲಿ ತೊಡಗಿರುವ ಮೂರೂ ಪಡೆಗಳ ಕೊಡುಗೆಯಿದೆ. ಹಾಗಾಗಿ ಪ್ರಜೆಗಳಲ್ಲಿ ನಿಮ್ಮೆಲ್ಲರ ಬಗ್ಗೆ ಇರುವ ಗೌರವ ಮತ್ತು ಹೆಮ್ಮೆಯನ್ನು ನೀವು ಊಹಿಸಲೂ ಸಾಧ್ಯವಿಲ್ಲ. ನೀವು ದೇಶದ ಯುವಕರಿಗೆ ಪ್ರೇರಣೆ ನೀಡುತ್ತಿದ್ದೀರಿ' ಎಂದು ಶ್ಲಾಘಿಸಿದರು.

'ವೃತ್ತಿಗಾಗಿ ಸಮುದ್ರದಲ್ಲಿ ಒಮ್ಮೆ ಹೊರಟರೆ ತಿಂಗಳುಗಟ್ಟಲೆ ಭೂಮಿಯನ್ನೇ ನೀವು ನೋಡುವುದಿಲ್ಲ. ಯಾರ ಜೊತೆಯಾದರೂ ಮಾತನಾಡುವುದಿದ್ದರೆ ಸಮುದ್ರದ ಜೊತೆಯೇ ಮಾತನಾಡಬೇಕು. ನೀರಿನ ಹೊರತಾಗಿ ಮತ್ತೇನೂ ಶಬ್ದವೂ ಕೇಳಿಸುವುದಿಲ್ಲ. ನಿಮ್ಮಂಥ ಮಕ್ಕಳನ್ನು ದೇಶ ಸೇವೆಗೆ ಕೊಡುಗೆಯಾಗಿ ನೀಡಿದ ಮಾತಾ ಪಿತರನ್ನು, ನಿಮ್ಮ ಪತ್ನಿಯರಿಗೆ ನಮಸ್ಕರಿಸುತ್ತೇನೆ' ಎಂದರು.

ಸಂವಾದದ ಬಳಿಕ ನೌಕಾನೆಲೆಯ ಸಿಬ್ಬಂದಿ, ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಔತಣಕೂಟದಲ್ಲಿ ಪಾಲ್ಗೊಂಡರು. ಮೇ 27ರಂದು ನೌಕಾನೆಲೆಯಿಂದ ಜಲಾಂತರ್ಗಾಮಿಯಲ್ಲಿ ಸಮುದ್ರ ಪರ್ಯಟನೆ ಮಾಡಲಿದ್ದಾರೆ.

ಕಾರವಾರ ಶಾಸಕಿ ರೂಪಾಲಿ ನಾಯ್ಕ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್, ಪಶ್ಚಿಮ ವಲಯ ಮುಖ್ಯಸ್ಥ ವೈಸ್ ಅಡ್ಮಿರಲ್ ಅಜೇಂದ್ರ ಬಹಾದೂರ್ ಸಿಂಗ್, ಕರ್ನಾಟಕ ನೌಕಾ ವಲಯದ ಮುಖ್ಯಸ್ಥ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT