ಬುಧವಾರ, ಮಾರ್ಚ್ 22, 2023
19 °C

ನಿರ್ಬಂಧದ ನಡುವೆಯೂ ಕಾಳಿ ನದಿಯಲ್ಲಿ ರ‍್ಯಾಫ್ಟಿಂಗ್

ಜ್ಞಾನೇಶ್ವರ ದೇಸಾಯಿ Updated:

ಅಕ್ಷರ ಗಾತ್ರ : | |

ಜೊಯಿಡಾ: ಸರ್ಕಾರ ಕೋವಿಡ್ 19 ನಿಯಂತ್ರಣಕ್ಕೆ ವಿಧಿಸಿದ್ದ ವಾರಾಂತ್ಯದ ಕರ್ಫ್ಯೂ ಜಾರಿ ಇದ್ದು ಜನ ಸೇರುವುದನ್ನು ನಿಷೇಧಿಸಿದೆ. ಆದರೂ ತಾಲ್ಲೂಕಿನ ಗಣೇಶಗುಡಿಯಲ್ಲಿ, ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗಳು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಶನಿವಾರ ಮತ್ತು ಭಾನುವಾರ ಆಯೋಜನೆಗೊಂಡಿವೆ.

ಪ್ರವಾಸಿಗರು ಮತ್ತು ಮಾರ್ಗದರ್ಶಿಗಳು ಕೋವಿಡ್ ಸುರಕ್ಷತಾ ನಿಯಮ ಪಾಲಿಸದಿರುವುದು ಕಂಡು ಬಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರೊಬ್ಬರು ಹೇಳಿದ್ದಾರೆ. ರ‍್ಯಾಫ್ಟಿಂಗ್ ಆಯೋಜಿಸುವವರು ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಜೀವರಕ್ಷಾ ಕವಚ, ಹೆಲ್ಮೆಟ್ ಧರಿಸಬೇಕು. ಅಲ್ಲದೇ ನಿಗದಿತ ಸಂಖ್ಯೆಯಲ್ಲಿ ಮಾತ್ರ ರ‍್ಯಾಫ್ಟಿಂಗ್ ದೋಣಿಯಲ್ಲಿ ಪ್ರವಾಸಿಗರನ್ನು ಕೂರಿಸಬೇಕು.

ಈ ಬಗ್ಗೆ ಫೆಬ್ರುವರಿ ಮೊದಲ ವಾರದಲ್ಲಿ ಜೊಯಿಡಾ ತಹಶೀಲ್ದಾರ್ ಕಚೇರಿಯಲ್ಲಿ ರೆಸಾರ್ಟ್ ಮತ್ತು ಹೋಮ್ ಸ್ಟೇ ಮಾಲೀಕರ ಸಭೆ ಕರೆದು ಸೂಚಿಸಲಾಗಿತ್ತು. ಕೊನೆಯ ವಾರಾಂತ್ಯದ ಕರ್ಫ್ಯೂ ಇದ್ದ ಶನಿವಾರ ಮತ್ತು ಭಾನುವಾರ, ಗಣೇಶಗುಡಿ ಸೂಪಾ ಜಲಾಶಯದ ಕೆಳಗಿನ ಸೇತುವೆಯ ಮೇಲೆ ನೂರಾರು ಪ್ರವಾಸಿಗರು ಮುಖಗವಸು ಧರಿಸದೆ ನೃತ್ಯ ಮಾಡುತ್ತಿದ್ದರು. ಹಲವರು ಸೆಲ್ಫೀ ತೆಗೆದುಕೊಳ್ಳುತ್ತಿದ್ದರು. ಇವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಪೊಲೀಸ್ ಮತ್ತು ತಾಲ್ಲೂಕು ಆಡಳಿತಕ್ಕೆ ಸಾರ್ವಜನಿಕರು ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ನಿಯಮದ ಪ್ರಕಾರ ಸಣ್ಣ ರ‍್ಯಾಫ್ಟ್‌ನಲ್ಲಿ ಆರು ಜನ ಮತ್ತು ದೊಡ್ಡ ರ‍್ಯಾಫ್ಟ್‌ನಲ್ಲಿ ಎಂಟು ಜನರನ್ನು ಕೂರಿಸಬಹುದು. ಆದರೆ, ಕೆಲವು ರ‍್ಯಾಫ್ಟ್‌ಗಳಲ್ಲಿ 16 ಜನರನ್ನು ಕೂರಿಸಿಯೂ ಜಲ ಸಾಹಸ ಕ್ರೀಡೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅನಾಹುತವಾದರೆ ಯಾರು ಹೊಣೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

‘ನಿಷೇಧಿಸಿ ನೋಟಿಸ್’: ‘ಕೋವಿಡ್ 19 ಕಾರಣದಿಂದ ಸರ್ಕಾರವು ಕೆಲವು ಚಟುವಟಿಕೆಗಳಿಗೆ ನಿರ್ಬಂಧ ಹೇರಿದೆ. ಜೊಯಿಡಾ ತಾಲ್ಲೂಕಿನ ಕಾಳಿ ನದಿಯಲ್ಲಿ ನಡೆಯುವ ಎಲ್ಲ ಜಲ ಸಾಹಸ ಕ್ರೀಡೆಗಳನ್ನು ನಿಷೇಧಿಸಲಾಗಿದೆ. ಕೋವಿಡ್ ಲಾಕ್‌ಡೌನ್ 3.0 ಜಾರಿಯಲ್ಲಿದೆ. ಆದ್ದರಿಂದ ಮುಂದಿನ ಆದೇಶದವರೆಗೂ ರೆಸಾರ್ಟ್, ಹೋಂ ಸ್ಟೇ ಮೂಲಕ ಜಲ ಸಾಹಸ ಕ್ರೀಡೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಿ ನೊಟೀಸ್ ನೀಡಲಾಗಿದೆ’ ಎಂದು ಜೊಯಿಡಾ ತಹಶೀಲ್ದಾರ್ ಸಂಜಯ ಕಾಂಬಳೆ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು