ಬುಧವಾರ, ಸೆಪ್ಟೆಂಬರ್ 18, 2019
21 °C

ದೇವುಳ್ಳಿ: ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ

Published:
Updated:
Prajavani

ಜೊಯಿಡಾ: ತಾಲ್ಲೂಕಿನ ಆಖೇತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವುಳ್ಳಿಯಲ್ಲಿ ನೀರುಗಂಟಿ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಗುರುವಾರ ಮುತ್ತಿಗೆ ಹಾಕಿದರು.

ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಕೊಳವೆಬಾವಿಯಲ್ಲಿ ನೀರಿನ ಕೊರತೆಯಾಗಿಲ್ಲ. ಆದರೆ, ಗ್ರಾಮ ಪಂಚಾಯ್ತಿಯ ಸರಬರಾಜು ಹಾಗೂ ನಿರ್ವಹಣೆಯ ಸಮಸ್ಯೆಯಿಂದಾಗಿ ಹಲವು ದಿನಗಳಿಂದ ಪೂರೈಕೆಯಾಗಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. 

ದೇವುಳ್ಳಿ ಗ್ರಾಮದಲ್ಲಿ ಸುಮಾರು 50 ಮನೆಗಳಿದ್ದು 500ರಷ್ಟು ಜನರು ವಾಸಿಸುತ್ತಿದ್ದಾರೆ. ಆಖೇತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಯಸವಾಡಿ ಹಾಗೂ ಬರಲಕೊಟ ಗ್ರಾಮದಲ್ಲೂ ಜನರು ಕುಡಿಯುವ ನೀರಿಗೆ ಕಷ್ಟಪಡುವಂತಹ ಸ್ಥಿತಿಯಿದೆ ಎಂದು ಸ್ಥಳೀಯ ಮುಖಂಡ ಗುರಪ್ಪಾ ಹಣಬರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯೋಗಿತಾ, ‘ಗ್ರಾಮಸ್ಥರಿಂದ ದೂರು ಬಂದಿದ್ದು, ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿದೆ. ಪುನಃ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರದಿಂದ ಕಾರ್ಯನಿರ್ವಹಿಸಲು ನೀರುಗಂಟಿಗೆ ತಿಳಿಸಲಾಗಿದೆ’ ಎಂದರು.

Post Comments (+)