ಭಾನುವಾರ, ಅಕ್ಟೋಬರ್ 20, 2019
21 °C

ಕೃಷಿ ಬೆಳೆ ಹಾನಿ: ಸರ್ಕಾರಿ ಲೆಕ್ಕ–ವಾಸ್ತವಕ್ಕೆ ಅಜಗಜಾಂತರ ವ್ಯತ್ಯಾಸ

Published:
Updated:
Prajavani

ಶಿರಸಿ: ಅತಿವೃಷ್ಟಿಯಿಂದ ಆಗಿರುವ ಕೃಷಿ ಬೆಳೆ ಹಾನಿ ಸಂಬಂಧ ಕೃಷಿ ಇಲಾಖೆ ನೀಡಿರುವ ಪ್ರಾಥಮಿಕ ನಷ್ಟದ ಮಾಹಿತಿ ಹಾಗೂ ಪ್ರಕೃತಿ ವಿಕೋಪ ಪರಿಹಾರ ನಷ್ಟ ನಿಧಿಯಡಿ(ಎನ್‌ಡಿಆರ್‌ಎಫ್) ಮಾಡಿರುವ ಲೆಕ್ಕಾಚಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬೆಳೆ ನಷ್ಟ ಅನುಭವಿಸಿ ಕಷ್ಟದಲ್ಲಿರುವ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ ಕೃಷಿ ಬೆಳೆಗೆ ಸಾಕಷ್ಟು ಹಾನಿಯಾಗಿದೆ. ಆ ಸಂದರ್ಭದಲ್ಲಿ ಕೃಷಿ ಇಲಾಖೆ ನಡೆಸಿದ ಪ್ರಾಥಮಿಕ ಮಾಹಿತಿ ಪ್ರಕಾರ ಕಾರವಾರದಲ್ಲಿ 425 ಹೆಕ್ಟೇರ್, ಅಂಕೋಲಾದಲ್ಲಿ 1260 ಹೆಕ್ಟೇರ್, ಕುಮಟಾದಲ್ಲಿ 1300 ಹೆಕ್ಟೇರ್, ಹೊನ್ನಾವರ 310 ಹೆಕ್ಟೇರ್, ಭಟ್ಕಳ 30 ಹೆಕ್ಟೇರ್, ಶಿರಸಿ 1435 ಹೆಕ್ಟೇರ್, ಯಲ್ಲಾಪುರ 219 ಹೆಕ್ಟೇರ್, ಮುಂಡಗೋಡ 2095 ಹೆಕ್ಟೇರ್, ಸಿದ್ದಾಪುರ 648 ಹೆಕ್ಟೇರ್, ಹಳಿಯಾಳ 1690 ಹೆಕ್ಟೇರ್, ಜೊಯಿಡಾದಲ್ಲಿ 523 ಹೆಕ್ಟೇರ್ ಹಾನಿ ಸಂಭವಿಸಿತ್ತು. ಒಟ್ಟು 504 ಗ್ರಾಮಗಳಲ್ಲಿ ₹ 56.07 ಕೋಟಿ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿತ್ತು.

ಆದರೆ, ಎನ್‌ಡಿಆರ್‌ಎಫ್ ನಿಯಮದ ಅನ್ವಯ ಮಳೆಯಾಶ್ರಿತ ಕೃಷಿ ಬೆಳೆಗೆ ಹೆಕ್ಟೇರ್‌ವೊಂದಕ್ಕೆ ₹ 6800 ಪರಿಹಾರ ನೀಡಲು ಅವಕಾಶವಿದೆ. ಈ ಪ್ರಕಾರ ಲೆಕ್ಕ ಹಾಕಿದರೆ ಜಿಲ್ಲೆಯ ರೈತರಿಗೆ ₹ 7.14 ಕೋಟಿ ಮೊತ್ತದ ಪರಿಹಾರ ಹಣ ಸಿಗುವ ಸಾಧ್ಯತೆಯಿದೆ.

‘ವಾಸ್ತವದಲ್ಲಿ ಆಗಿರುವ ಹಾನಿಗೂ, ಎನ್‌ಡಿಆರ್‌ಎಫ್ ಲೆಕ್ಕಾಚಾರಕ್ಕೂ ತಾಳಮೇಳವಿಲ್ಲ. ಅತಿಯಾದ ಮಳೆಯಿಂದ ಭತ್ತ, ಹತ್ತಿ ಬೆಳೆ ಕೊಳೆತು ಹೋಗಿದೆ. ರೈತರು ನಿತ್ಯದ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿಯಿದೆ. ಎನ್‌ಡಿಆರ್‌ಎಫ್ ನಿಯಮದಲ್ಲಿ ಮಾರ್ಪಾಡು ತರಬೇಕು. ಬೆಳೆ ಹಾನಿ ಪರಿಹಾರ ಮೊತ್ತ ಹೆಚ್ಚಳ ಮಾಡಬೇಕು’ ಎನ್ನುತ್ತಾರೆ ಬನವಾಸಿಯ ಕನ್ನಾ ಚಲವಾದಿ.

‘ಅತಿವೃಷ್ಟಿಯ ಸಂದರ್ಭದಲ್ಲಿ ಕೃಷಿ ಇಲಾಖೆ ಪ್ರಾಥಮಿಕ ಸರ್ವೆ ನಡೆಸಿ, ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. ಆದರೆ, ನೆರೆ ಇಳಿದ ಮೇಲೆ ಇನ್ನೊಮ್ಮೆ ಸರ್ವೆ ನಡೆಸಲಾಗಿದೆ. ಕೆಲವು ತಾಲ್ಲೂಕುಗಳಲ್ಲಿ ಎರಡು ದಿನಗಳಿಗೆ ನೆರೆ ಇಳಿದ ಕಾರಣ ಬೆಳೆಗಳಿಗೆ ವಿಶೇಷ ಹಾನಿಯಾಗಿಲ್ಲ. ಎರಡನೇ ಬಾರಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು ಹಾನಿಯ ಕ್ಷೇತ್ರ ಸ್ವಲ್ಪ ಕಡಿಮೆಯಿದೆ. ಹಾನಿಯಾಗಿರುವ ಕಡೆಗಳಲ್ಲಿ ಇಳುವರಿ ಆಧರಿಸಿ, ಲೆಕ್ಕಾಚಾರ ಹಾಕಿ ವರದಿ ನೀಡಲಾಗಿದೆ’ ಎನ್ನುತ್ತಾರೆ ಕೃಷಿ ಉಪನಿರ್ದೇಶಕ ಟಿ.ಎಚ್.ನಟರಾಜ್.

Post Comments (+)