ಶನಿವಾರ, ಜೂನ್ 19, 2021
26 °C
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು, ಲಭ್ಯ ಹಾಸಿಗೆ, ಆಮ್ಲಜನಕದ ಅಂಕಿ ಅಂಶಕ್ಕೆ ವೆಬ್ ಪೋರ್ಟಲ್

ಕೋವಿಡ್ ಸೋಂಕಿತರು, ಲಭ್ಯ ಹಾಸಿಗೆ; ಒಂದೇ ‘ಕ್ಲಿಕ್’ನಲ್ಲಿ ಸರ್ವ ಮಾಹಿತಿ!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಲಭ್ಯವಿರುವ ಹಾಸಿಗೆಗಳು, ಆಮ್ಲಜನಕದ ಸಿಲಿಂಡರ್‌ಗಳ ಮಾಹಿತಿಯು ಒಂದೇ ‘ಕ್ಲಿಕ್’ನಲ್ಲಿ ಸಿಗುವಂತಾಗಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಉತ್ತರ ಕನ್ನಡ ಜಿಲ್ಲಾಡಳಿತದ ಅಧಿಕೃತ ವೆಬ್‍ಸೈಟ್‍ನಲ್ಲಿ ಪ್ರತ್ಯೇಕ ಪುಟವೊಂದನ್ನು (ಡ್ಯಾಶ್‍ಬೋರ್ಡ್) ಸರಳವಾಗಿ ರೂಪಿಸಲಾಗಿದ್ದು, ಅದರಲ್ಲಿ ಸಂಪೂರ್ಣ ಮಾಹಿತಿಯನ್ನು ನಮೂದಿಸಲಾಗುತ್ತಿದೆ.

ಜಿಲ್ಲಾಡಳಿತದ ವೆಬ್‍ಸೈಟ್ http://uttarakannada.nic.in/covid19.html ‘ಕೋವಿಡ್ 19’ ಎಂಬ ಪುಟವನ್ನು ಆರಂಭಿಸಲಾಗಿದೆ. ಅದರಲ್ಲಿ ಜಿಲ್ಲೆಯ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಒಟ್ಟು ಹಾಸಿಗೆಗಳು, ಅವುಗಳಲ್ಲಿ ಕೋವಿಡ್ ಸೋಂಕಿತರು ಭರ್ತಿಯಾಗಿರುವುದು ಮತ್ತು ಲಭ್ಯ ಹಾಸಿಗೆಗಳ ಮಾಹಿತಿಯನ್ನು ಪಟ್ಟಿ ಮಾಡಲಾಗಿದೆ. ಸಾಮಾನ್ಯ ಹಾಸಿಗೆಗಳು, ಆಮ್ಲಜನಕ ಸೌಲಭ್ಯ ಇರುವ ಹಾಸಿಗೆಗಳು, ತುರ್ತು ನಿಗಾ ಘಟಕದ ಹಾಸಿಗೆಗಳ ಮಾಹಿತಿ ಸಿಗುತ್ತಿದೆ.

ಈ ಪುಟದಲ್ಲಿ ಆಮ್ಲಜನಕದ ಸಿಲಿಂಡರ್‌ಗಳಿಗೆ ಸಂಬಂಧಿಸಿದ ಮಾಹಿತಿಗಳೂ ಇವೆ. ಪ್ರಸ್ತುತ ಲಭ್ಯವಿರುವ ಆಮ್ಲಜನಕದ ಸಿಲಿಂಡರ್‌ಗಳು (ರೀಫಿಲ್ಲಿಂಗ್‍ಗೆ ಕಳುಹಿಸಿದ್ದೂ ಸೇರಿ), ಒಂದು ದಿನದಲ್ಲಿ ಬಳಕೆಯಾದವು, ರೀಫಿಲ್ಲಿಂಗ್‍ಗೆ ಕಳುಹಿಸಿದವು ಮತ್ತು ಸದ್ಯಕ್ಕೆ ಲಭ್ಯವಿರುವ ಜಂಬೋ ಮತ್ತು ಸಣ್ಣ ಸಿಲಿಂಡರ್‌ಗಳ ಮಾಹಿತಿಗಳು ಕಾಣುತ್ತವೆ.

ಬಳಕೆಯಾದ ಹಾಗೂ ಲಭ್ಯವಿರುವ ರೆಮ್‍ಡಿಸಿವಿರ್ ಔಷಧದ ಅಂಕಿ ಅಂಶಗಳೂ ಇಲ್ಲಿವೆ. ಇಷ್ಟೇ ಅಲ್ಲದೇ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಈವರೆಗೆ ದಾಖಲಾದ ಕೋವಿಡ್ ಸೋಂಕಿತರು, ಈ ದಿನ ದಾಖಲಾದವರು, ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆಯೂ ಸಿಗುವಂತೆ ನೋಡಿಕೊಳ್ಳಲಾಗಿದೆ.

ಎರಡು ತಾಸಿಗೊಮ್ಮೆ ಅಪ್‍ಡೇಟ್:

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರೂ ಆಗಿರುವ ಕೋವಿಡ್ ಸಂಬಂಧಿತ ಕಾರ್ಯಗಳ ನೋಡಲ್ ಅಧಿಕಾರಿ ಪುರುಷೋತ್ತಮ ಅವರು ಈ ಪುಟದ ರೂವಾರಿ. ರಾಷ್ಟ್ರೀಯ ಮಾಹಿತಿ ಕೇಂದ್ರದ ಸಿಬ್ಬಂದಿಯೊಂದಿಗೆ ಚರ್ಚಿಸಿ, ಡ್ಯಾಶ್‍ಬೋರ್ಡ್ ಹೀಗೇ ಇರಬೇಕು ಎಂದು ವಿನ್ಯಾಸಗೊಳಿಸಿದ್ದಾರೆ.

‘ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ ಒಟ್ಟು 23 ಆಸ್ಪತ್ರೆಗಳಿವೆ. ಪ್ರತಿ ಆಸ್ಪತ್ರೆಗೆ ಗೆಜೆಟೆಡ್ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ಹಾಗೂ ಅವರಿಗೆ ಒಬ್ಬ ಸಹಾಯಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಅವರು ಹಗಲಲ್ಲಿ ಪ್ರತಿ ಎರಡು ಗಂಟೆಗೊಮ್ಮೆ, ರಾತ್ರಿ ಪ್ರತಿ ನಾಲ್ಕು ಗಂಟೆಗೊಮ್ಮೆ ಮಾಹಿತಿಯನ್ನು ಅಪ್‍ಡೇಟ್ ಮಾಡುತ್ತಾರೆ. ಇದರಿಂದ ಕೋವಿಡ್‍ಗೆ ಸಂಬಂಧಿಸಿದ ಅಷ್ಟೂ ಮಾಹಿತಿಗಳು ಒಂದೇ ಕ್ಲಿಕ್‍ನಲ್ಲಿ ಸಿಗುತ್ತವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ವೆಬ್‍ಸೈಟ್‍ನಲ್ಲಿ ಒಂದು ಕೈಪಿಡಿಯ ಲಿಂಕ್ ಕೂಡ ಕೊಡಲಾಗಿದೆ. ಅದನ್ನು ತೆರೆದರೆ ಕೋವಿಡ್ ಪರೀಕ್ಷಾ ಕೇಂದ್ರಗಳು, ಆಂಬುಲೆನ್ಸ್ ಸೇವೆ, ಆಮ್ಲಜನಕ ಪೂರೈಕೆ, ಚುಚ್ಚುಮದ್ದು ಮತ್ತು ಔಷಧಗಳು ಕೋವಿಡ್ ಆರೈಕೆ ಕೇಂದ್ರಗಳ ಮಾಹಿತಿ ಸಿಗುತ್ತವೆ’ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು