ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಆಸ್ಪತ್ರೆಗೆ ‘ವೈದ್ಯರಿಲ್ಲ’ದ ಕಾಯಿಲೆ

ಶಿರಸಿ ತಾಲ್ಲೂಕಿನ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮಸ್ಯೆ
Last Updated 3 ಜುಲೈ 2022, 15:33 IST
ಅಕ್ಷರ ಗಾತ್ರ

ಶಿರಸಿ: ಸುಸಜ್ಜಿತ ಕಟ್ಟಡವಿದೆ. ಸಿಬ್ಬಂದಿಯೂ ಇದ್ದಾರೆ. ಆದರೆ, ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಚಿಕಿತ್ಸೆಗೆ ಅವಲಂಭಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಇಲ್ಲದ ಕಾಯಿಲೆ ಆವರಿಸಿಕೊಂಡಿದೆ.

ಇದು ತಾಲ್ಲೂಕಿನ ಮೆಣಸಿ, ಸುಗಾವಿ ಮತ್ತು ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗಂಭೀರ ಸಮಸ್ಯೆಯಾಗಿದೆ. ಹತ್ತು ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿ ಎರಡು ವರ್ಷ ಕಳೆದರೂ ಮೆಣಸಿ ಆರೋಗ್ಯ ಕೇಂದ್ರ ಕಾಯಂ ವೈದ್ಯರನ್ನು ಕಂಡಿಲ್ಲ. ಸುಗಾವಿ ಆಸ್ಪತ್ರೆಯ ವೈದ್ಯರೊಬ್ಬರು ವರ್ಗಾವಣೆಗೊಂಡ ಹಲವು ತಿಂಗಳು ಕಳೆದಿದೆ. ಹೆಗಡೆಕಟ್ಟಾ ಆಸ್ಪತ್ರೆಯ ವೈದ್ಯರು ಈಚೆಗೆ ಭಟ್ಕಳಕ್ಕೆ ವರ್ಗವಾಗಿದ್ದಾರೆ.

ಮೆಣಸಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬಾಳೆಕಾಯಿಮನೆ, ಸೊಣಗಿನಮನೆ, ಕೊಡ್ನಗದ್ದೆ ಸೇರಿ ಹಲವು ಗ್ರಾಮಗಳಿವೆ. ಕುಗ್ರಾಮದಂತಿರುವ ಈ ಪ್ರದೇಶ ತಾಲ್ಲೂಕು ಕೇಂದ್ರದಿಂದ 35 ರಿಂದ 40 ಕಿ.ಮೀ. ದೂರದಲ್ಲಿದೆ. ಅನಾರೋಗ್ಯಕ್ಕೆ ತುತ್ತಾದವರನ್ನು ಚಿಕಿತ್ಸೆಗೆ ಶಿರಸಿ ನಗರಕ್ಕೆ ಕರೆತರಬೇಕಾದ ಸ್ಥಿತಿ ಇದೆ.

ಸುಗಾವಿ ಮತ್ತು ಹೆಗಡೆಕಟ್ಟಾ ಕೂಡ ನಗರದಿಂದ 15 ಕಿ.ಮೀ. ದೂರದಲ್ಲಿವೆ. ಈ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಿದೆ. ಗ್ರಾಮಗಳು ಸಾಕಷ್ಟಿವೆ. ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಅವಲಂಬಿಸಿರುವ ಬಡ ಕುಟುಂಬಗಳೇ ಹೆಚ್ಚಿರುವ ಈ ಪ್ರದೇಶದ ಜನರು ವೈದ್ಯರು ಸಕಾಲಕ್ಕೆ ಸಿಗದ ಪರಿಣಾಮ ತೊಂದರೆಗೆ ಸಿಲುಕಿದ್ದಾರೆ.

‘ಮಳೆಗಾಲದಲ್ಲಿ ಏಕಾಏಕಿ ವಾತಾವರಣಏರುಪೇರಾಗುವುದರಿಂದ ಅನಾರೋಗ್ಯಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚು. ಅಲ್ಲದೆ ಸಣ್ಣಪುಟ್ಟ ಅಪಘಾತ, ಅವಘಡಗಳು ನಡೆದರಂತೂ ತಕ್ಷಣಕ್ಕೆ ಚಿಕಿತ್ಸೆಗೆ ಸ್ಥಳೀಯವಾಗಿ ವೈದ್ಯರಿಲ್ಲದೆ ಸಮಸ್ಯೆ ಉಂಟಾಗುತ್ತಿದೆ. ಕೂಲಿಕಾರ್ಮಿಕರು ಹೆಚ್ಚಿರುವ ಕೊಡ್ನಗದ್ದೆ ಭಾಗದಲ್ಲಿ ಆಸ್ಪತ್ರೆ ಇದ್ದರೂ ವೈದ್ಯರಿಲ್ಲದಿರುವುದು ವ್ಯವಸ್ಥೆಯನ್ನು ಅಣಕಿಸುವಂತಾಗುತ್ತಿದೆ’ ಎಂದು ಕೊಡ್ನಗದ್ದೆ ಗ್ರಾಮ ಪಂಚಾಯ್ತಿ ಸದಸ್ಯ ಪ್ರವೀಣ ಹೆಗಡೆ ಹೇಳುತ್ತಾರೆ.

‘ಗ್ರಾಮೀಣ ಭಾಗದಲ್ಲಿ ಆರೋಗ್ಯ ಸುಧಾರಣೆ ಕೇವಲ ಘೋಷಣೆಗೆ ಸೀಮಿತವಾಗಿದೆ. ಕಟ್ಟಡ ನಿರ್ಮಿಸಿ, ಕೆಲವೇ ಸಿಬ್ಬಂದಿ ನಿಯೋಜಿಸುವ ಆರೋಗ್ಯ ಇಲಾಖೆ ಕಾಯಂ ವೈದ್ಯರನ್ನು ನೇಮಿಸಲು ಹಿಂದೇಟು ಹಾಕುತ್ತಿದೆ. ಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಸ್ಥಿತಿ ಉಂಟಾಗಿದೆ’ ಎಂದು ಕೊರ್ಲಕಟ್ಟಾ ಗ್ರಾಮಸ್ಥ ರವಿ ನಾಯ್ಕ ಹೇಳಿದರು.

ಹೊಂದಾಣಿಕೆ ಸಮಸ್ಯೆ

ಕೆಲವು ತಿಂಗಳುಗಳ ಹಿಂದೆ ಮೆಣಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂ.ಬಿ.ಬಿ.ಎಸ್. ಪದವಿ ಪಡೆದ ವೈದ್ಯರೊಬ್ಬರನ್ನು ನೇಮಿಸಲಾಗಿತ್ತು. ಉನ್ನತ ವ್ಯಾಸಂಗದ ಸಲುವಾಗಿ ಅವರು ಹುದ್ದೆಗೆ ರಾಜೀನಾಮೆ ನೀಡಿ ತೆರಳಿದ ಬಳಿಕ ಇಲ್ಲಿಗೆ ವೈದ್ಯರ ನೇಮಕಾತಿಗೆ ತಾಂತ್ರಿಕ ಅಡಚಣೆ ಉಂಟಾಗಿದೆ ಎಂಬುದು ಆರೋಗ್ಯ ಇಲಾಖೆಯ ಮಾಹಿತಿ.

‘ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈ ಮೊದಲು ಬಿ.ಎಂ.ಎಸ್. ಪದವಿ ಪಡೆದ ವೈದ್ಯರನ್ನೂ ನಿಯೋಜಿಸಲು ಅವಕಾಶವಿತ್ತು. ಆದರೆ ಈಗ ಎಂ.ಬಿ.ಬಿ.ಎಸ್. ಪದವಿ ಪಡೆದವರ ನೇಮಕಾತಿಗೆ ಮಾತ್ರ ಅವಕಾಶ ಇರುವ ಕಾರಣ ಹುದ್ದೆ ಖಾಲಿ ಇರುವ ಆಸ್ಪತ್ರೆಗಳಿಗೆ ಹೊಂದಾಣಿಕೆ ಕಷ್ಟವಾಗಿದೆ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

----------------

ಕಾಯಂ ವೈದ್ಯರಿಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಮೀಪದ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಪ್ರಭಾರ ಕರ್ತವ್ಯಕ್ಕೆ ನಿಯೋಜಿಸಿ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುತ್ತಿದೆ.

ಡಾ.ವಿನಾಯಕ ಭಟ್ಟ

ತಾಲ್ಲೂಕು ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT