ಮಂಗಳವಾರ, ಅಕ್ಟೋಬರ್ 20, 2020
23 °C

10 ಅಡಿಗೂ ಎತ್ತರ ಹಾರಿ ಕಲ್ಲು ಕ್ವಾರಿಗೆ ಬಿದ್ದ ಕಾರು: ಒಬ್ಬ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕರ್ಣ: ಇಲ್ಲಿಯ ಚೌಡಗೇರಿ ಶಾಲೆಯ ಬಳಿ ಬುಧವಾರ ಮಧ್ಯರಾತ್ರಿ ಅತಿ ವೇಗದಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 10 ಅಡಿಗಿಂತಲೂ ಎತ್ತರ ಹಾರಿ, ರಸ್ತೆಯಿಂದ 20 ಅಡಿಗಿಂತಲೂ ದೂರದಲ್ಲಿರುವ ಕಲ್ಲು ಕ್ವಾರಿಗೆ ಬಿದ್ದಿದೆ. ಅಪಘಾತದಲ್ಲಿ ಒಬ್ಬ ಮೃತಪಟ್ಟಿದ್ದಾರೆ.

ಮೂಲತಃ ಅಗರಗೋಣ ನಿವಾಸಿಯಾಗಿದ್ದು, ಅಂಕೋಲಾದಲ್ಲಿ ನೆಲೆಸಿರುವ ಗೌರವ ದೇವರಾಜ ಗೋಳಿಕಟ್ಟೆ (25) ಮೃತಪಟ್ಟವರು. ತಮ್ಮ ಮೂವರು ಗೆಳೆಯರೊಂದಿಗೆ ಅಗರಗೋಣದಿಂದ ಅಂಕೋಲಾಕ್ಕೆ ತಿರುಗಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಎಲ್ಲಾ ಘಟನೆ ಸಿನಿಮೀಯ ರೀತಿಯಲ್ಲಿ ನಡೆದಿದ್ದು, ಗೌರವ ಅವರೇ ಕಾರು ಚಲಾಯಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಅತಿ ವೇಗದಲ್ಲಿದ್ದ ಕಾರನ್ನು  ಚೌಡಗೇರಿಯ ಶಾಲೆಯ ಬಳಿ ತಿರುಗಿಸಲು ಪ್ರಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿತು. 10 ಅಡಿಗಿಂತ ಎತ್ತರಕ್ಕೆ ಹಾರಿ ಮರದ ಎರಡು ಟೊಂಗೆಗಳ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಟೊಂಗೆ ಮರಿದು, ನೀರಿನಿಂದ ತುಂಬಿದ್ದ ಕಲ್ಲು ಕ್ವಾರಿಯಲ್ಲಿ ಕಾರು ಉಲ್ಟಾ ಬಿದ್ದಿದೆ.

ಗೌರವ ಹೊರತು ಪಡಿಸಿ ಉಳಿದ ಮೂವರಾದ ಹನೀಶ ನಾಯಕ, ವರುಣ ನಾಯಕ ಮತ್ತು ರಜತ ನಾಯಕ ಮೇಲೆದ್ದು ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಪಿ.ಎಸ್. ಐ. ನವೀನ್ ನಾಯ್ಕ ಮತ್ತು ಸಿಬ್ಬಂದಿ ಹರಸಾಹಸ ಪಟ್ಟು ಕ್ರೇನಿನ ಮುಖಾಂತರ ಕಾರನ್ನು ತೆಗೆದರು. ಎರಡು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ಮಾಡಲಾಯಿತು.

ತಂದೆಗೆ ಕೋವಿಡ್: ಮೃತಪಟ್ಟ ಗೌರವನ ತಂದೆ ಶಿಕ್ಷಕರಾಗಿದ್ದು, ಕೋವಿಡ್‌ನಿಂದ ಮಂಗಳೂರಿನ ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ತಾಯಿ ಮತ್ತು ತಂಗಿ ಮನೆಯಲ್ಲಿಯೇ ಕ್ವಾರೆಂಟೈನ್ ನಲ್ಲಿದ್ದಾರೆ. ಗೌರವನಿಗೂ ಕೋವಿಡ್ ಇರಬಹುದೆಂದು ಅನುಮಾನವಿದ್ದು, ಶವದ ಕೋವಿಡ್ ಪರೀಕ್ಷೆ ನಡೆಸಿಯೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಿ.ಎಸ್.ಐ. ನವೀನ್ ನಾಯ್ಕ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು