‘ಇ–ಆಸ್ತಿ: ತಿಂಗಳ ಗುರಿ ಮುಟ್ಟದಿದ್ದರೆ ಕ್ರಮ’

ಶನಿವಾರ, ಜೂಲೈ 20, 2019
24 °C
ಶಿರಸಿ ನಗರವೊಂದರಲ್ಲೇ 14 ಸಾವಿರ ಆಸ್ತಿಗಳಿಗೆ ಸಿಗದ ‘ಇ–ಖಾತೆ’

‘ಇ–ಆಸ್ತಿ: ತಿಂಗಳ ಗುರಿ ಮುಟ್ಟದಿದ್ದರೆ ಕ್ರಮ’

Published:
Updated:
Prajavani

ಕಾರವಾರ: ‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳಿಗೆ ನಿಗದಿತ ಅವಧಿಯಲ್ಲಿ ಫಾರ್ಮ್ ನಂಬರ್ 3 ನೀಡಲು ವಿಳಂಬವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಆದ್ದರಿಂದ ಒಟ್ಟು ಆಸ್ತಿಗಳ ಶೇ 5ರಷ್ಟನ್ನು ಪ್ರತಿ ತಿಂಗಳು ಇ–ಆಸ್ತಿ ತಂತ್ರಾಂಶದಲ್ಲಿ ಅಳವಡಿಸಬೇಕು’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಜಿಲ್ಲೆಯ ಎಲ್ಲ ಪೌರಾಯುಕ್ತರಿಗೆ ಆದೇಶಿಸಿದ್ದಾರೆ.

‘ಈ ಹಿಂದೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೂಡ ಆಸ್ತಿಗಳನ್ನು ತಂತ್ರಾಂಶದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿತ್ತು. ತಮ್ಮ ಸ್ಥಳೀಯ ಸಂಸ್ಥೆಗಳಿಗೆ ನಿಗದಿಪಡಿಸಿದ ಪ್ರತಿ ತಿಂಗಳ ಗುರಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಅಲ್ಲದೇ ಕಚೇರಿಯಿಂದ ಒದಗಿಸಿದ ಗೂಗಲ್ ಶೀಟ್‌ನಲ್ಲಿ ಪ್ರತಿ ದಿನ ಸಂಜೆ 5ರ ಮೊದಲು ಮಾಹಿತಿ ಸಲ್ಲಿಸಬೇಕು. ಇದಕ್ಕೆ ತಪ್ಪಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ. 

‘ಫಾರ್ಮ್ ನಂಬರ್ 3 ಕೊಡಿ’: ‘2015ರಲ್ಲಿ ಇ–ಖಾತಾ ತಂತ್ರಾಂಶ ಜಾರಿಯಾದ ಬಳಿಕ ಸಮಸ್ಯೆ ಉಲ್ಬಣಗೊಂಡಿದೆ. ಫಾರ್ಮ್ ನಂಬರ್ 3 ಸಿಗದೇ ಜಿಲ್ಲೆಯಲ್ಲಿ 1.02 ಲಕ್ಷಕ್ಕೂ ಅಧಿಕ ಆಸ್ತಿಗಳು ಅಕ್ರಮ ಎಂದಾಗಿದೆ. ಈ ಪೈಕಿ ಶಿರಸಿ ನಗರವೊಂದರಲ್ಲೇ 14 ಸಾವಿರ ಆಸ್ತಿಗಳಿವೆ’ ಎಂದು ಇ–ಖಾತಾ ಸಮಸ್ಯೆ ಪರಿಹಾರ ಹೋರಾಟ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಆನವಟ್ಟಿ ಸಮಸ್ಯೆಯನ್ನು ವಿವರಿಸಿದರು. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲು ಪಹಣಿ ಪತ್ರ ಕೊಡಲಾಗುತ್ತಿತ್ತು. ಆದರೆ, ಈಗ ತಂತ್ರಾಂಶ ಆಧಾರಿತ ವ್ಯವಸ್ಥೆ ಬಂದ ಮೇಲೆ ಫಾರ್ಮ್ ನಂಬರ್ 3 ಕೊಡಬೇಕು. ಆದರೆ, ಅದು ಸಿಗದೇ ಆಸ್ತಿ ಮಾಲೀಕರಿಗೆ ಮನೆ ಕಟ್ಟಲು, ಖರೀದಿಸಲು, ಮಾರಾಟ ಮಾಡಲು ಆಗುತ್ತಿಲ್ಲ. ಎಲ್ಲವೂ ಅನಧಿಕೃತ ಎಂದು ತೋರಿಸುತ್ತಿದೆ. ತಮ್ಮ ಆಸ್ತಿ ಎಲ್ಲಿದೆ ಎಂದು ಮಾಲೀಕರು ಹುಡುಕುತ್ತಿದ್ದಾರೆ’ ಎಂದು ದೂರಿದರು.‌

‘ಆಸ್ತಿ ನೋಂದಣಿ ಕಾರ್ಯ ಸ್ಥಗಿತಗೊಂಡ ಕಾರಣ ಸರ್ಕಾರಕ್ಕೆ ರಾಜಸ್ವ ಸಿಗುತ್ತಿಲ್ಲ. ಬ್ಯಾಂಕ್‌ಗಳು ಆಸ್ತಿ ಮಾಲೀಕರಿಗೆ ಸಾಲ ಕೊಡುತ್ತಿಲ್ಲ. ಅಲ್ಲದೇ ಸಾಲ ವಸೂಲಾತಿಗೆ ಆಸ್ತಿ ಹರಾಜು ಮಾಡಲೂ ಆಗುತ್ತಿಲ್ಲ. ನೂತನವಾಗಿ ನಿರ್ಮಿಸಿದ ಮನೆ, ಬಡಾವಣೆಗಳಿಗೆ ಆಸ್ತಿ ಗುರುತಿನ ಸಂಖ್ಯೆ ಸಿಗುತ್ತಿಲ್ಲ’ ಎಂದರು.

ಸಮಿತಿಯ ಪ್ರಮುಖರಾದ ಪ್ರಶಾಂತ ಎನ್.ಎಸ್. ಮಾತನಾಡಿ, ‘ರಾಜ್ಯದ 213 ಸ್ಥಳೀಯ ಸಂಸ್ಥೆಗಳಿಗೆ ಈ ಸಮಸ್ಯೆಯಾಗಿದೆ. ಅದರಲ್ಲೂ ಮಲೆನಾಡು, ಗುಡ್ಡಗಾಡು ಜಿಲ್ಲೆಗಳಲ್ಲಿ ಹೆಚ್ಚಾಗಿದೆ. ಈ ಸಮಸ್ಯೆಯಿಂದ ಕಟ್ಟಡ ಕಾಮಗಾರಿಗಳೂ ನಡೆಯುತ್ತಿಲ್ಲ. ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ ಆಸ್ತಿ ಅಕ್ರಮವಾದ ತಲೆಬಿಸಿ ಒಂದೆಡೆ. ಕಾರ್ಮಿಕರಿಗೆ ಕೆಲಸವಿಲ್ಲ, ಉದ್ಯಮ ವರ್ಗಕ್ಕೆ ವ್ಯಾಪಾರವಿಲ್ಲದೇ ಪರದಾಡಬೇಕಾದ ಪರಿಸ್ಥಿತಿ ಮತ್ತೊಂದೆಡೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅರುಣ ಪ್ರಭು, ಗೋಪಾಲಕೃಷ್ಣ ಮುರೇಗಾರ, ರಾಜಾರಾಮ ಹೆಗಡೆ, ರಾಜು ಪೈ, ದೇವರಾಜ ಹೊಸೂರು, ಪ್ರಕಾಶ ಸಾಲೇರ, ಭಾಸ್ಕರ ಮಡಿವಾಳ, ತೌಸೀಫ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !