ಶುಕ್ರವಾರ, ಮಾರ್ಚ್ 5, 2021
30 °C
ಕಾರವಾರ ನಗರಸಭೆ ಕಚೇರಿಯ ನೂತನ ಕಟ್ಟಡ ಉದ್ಘಾಟನೆ

ಟ್ಯಾಗೋರ್ ಬೀಚ್‌ಗೂ ‘ಬ್ಲೂ ಫ್ಲ್ಯಾಗ್‌’ಗೆ ಯತ್ನ: ಸಚಿವ ಶಿವರಾಮ ಹೆಬ್ಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೂ ಪ್ರತಿಷ್ಠಿತ ಬ್ಲೂ ಫ್ಲ್ಯಾಗ್ ಪ್ರಮಾಣಪತ್ರ ಪಡೆಯಲು ಪ್ರಯತ್ನ ನಡೆದಿದೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರಸಭೆ ಕಚೇರಿಗೆ ₹ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಇನ್ನೊಂದು ತಿಂಗಳಲ್ಲಿ ಟುಪೆಲೋವ್ ಯುದ್ಧ ವಿಮಾನವು ಟ್ಯಾಗೋರ್ ಕಡಲತೀರಕ್ಕೆ ಬರಲಿದೆ. ಬಳಿಕ ಇಲ್ಲಿನ ವೈಭವ ಮತ್ತಷ್ಟು ಹೆಚ್ಚಲಿದೆ. ಕಡಲತೀರವನ್ನು ಅಭಿವೃದ್ಧಿ ಪಡಿಸಿದ ಬಳಿಕ ನಗರಸಭೆಗೆ ಹಸ್ತಾಂತರಿಸಲು ಕ್ರಮ ವಹಿಸಲಾಗುವುದು. ನಗರದ ಕಾಲುವೆಗಳ ಆಧುನೀಕರಣ ಆಗಬೇಕಿದ್ದು, ಅನುದಾನಕ್ಕೆ ವಿಶೇಷ ಆದ್ಯತೆಯೊಂದಿಗೆ ಪ್ರಯತ್ನಿಸಲಾಗುವುದು. ನಗರಸಭೆಗೆ ಬರಬೇಕಿರುವ ಬಾಕಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದ್ದು, ಸರ್ಕಾರದಿಂದ ಮಂಜೂರಾಗಬೇಕಿದೆ’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ನಗರದ ಹಿಂದುಳಿದ ವಾರ್ಡ್‌ಗಳಲ್ಲಿ ಆಗಬೇಕಿರುವ ಕೆಲಸಗಳಿಗೆ ಪಕ್ಷಾತೀತವಾಗಿ ಆದ್ಯತೆ ನೀಡಬೇಕು. ತ್ಯಾಜ್ಯ ವಿಲೇವಾರಿ ವಾಹನದ ಸಮಯವನ್ನು ಮೂರು ದಿನಗಳಿಗೆ ಒಮ್ಮೆ ಬದಲಿಸಿ ಎಲ್ಲೆಡೆ ತಲುಪುವಂತೆ ಮಾಡಬೇಕು. ಇದರಿಂದ ಪೌರಕಾರ್ಮಿಕರಿಗೂ ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದರು.

ಬೇಡಿಕೆಗಳ ಮಂಡನೆ: ನಗರಸಭೆ ಅಧ್ಯಕ್ಷ ಡಾ.ನಿತಿನ್ ‍ಪಿಕಳೆ ಅವರು ನಗರಸಭೆಯ ವಿವಿಧ ಬೇಡಿಕೆಗಳನ್ನು ಸಚಿವರು ಹಾಗೂ ಶಾಸಕರಿಗೆ ಸಲ್ಲಿಸಿದರು.

* ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧೀನದಲ್ಲಿರುವ ಟ್ಯಾಗೋರ್ ಕಡಲತೀರವನ್ನು ನಗರಸಭೆಗೆ ಹಸ್ತಾಂತರಿಸಬೇಕು. ಅದರ ಸಂಪೂರ್ಣ ನಿರ್ವಹಣೆ ಮಾಡಲಾಗುವುದು.

* ನಗರದಲ್ಲಿರುವ ಎಂಟು ಕಿ.ಮೀ ನಾಲೆಗಳಿಗೆ ತಡೆಗೋಡೆ, ಕಾಂಕ್ರೀಟ್ ನಿರ್ಮಾಣ ಮಾಡಬೇಕು. ಇದಕ್ಕೆ ₹ 10 ಕೋಟಿ ಮಂಜೂರು ಮಾಡಬೇಕು.

* 2016 –17ರಲ್ಲಿ ನಗರೋತ್ಥಾನ ಯೋಜನೆಯಡಿ ಬಾಕಿಯಿರುವ ₹ 13 ಕೋಟಿ ಬಿಡುಗಡೆಯಾಗಲಿ. ಅದರಲ್ಲಿ ಮಳೆಗಾಲಕ್ಕೂ ಮೊದಲು ಹಲವು ಕಾಮಗಾರಿ ನಡೆಸಲು ಸಾಧ್ಯ.

* ಕಾಳಿ ನದಿ ಸೇತುವೆಗಳಲ್ಲಿ ಬೀದಿದೀಪಗಳಿಲ್ಲ. ಹೆದ್ದಾರಿಯಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಬೇಕಿದೆ

ನಗರಸಭೆ ಪ್ರಭಾರ ಆಯುಕ್ತ ಆರ್.ಪಿ.ನಾಯ್ಕ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ, ನಗರಸಭೆ ಉಪಾಧ್ಯಕ್ಷ ‍ಪ್ರಕಾಶ ಪಿ.ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.

***

ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐ.ಆರ್.ಬಿ.ಯಿಂದ ಆಗಬೇಕಿರುವ ಕೆಲಸಗಳ ಪಟ್ಟಿ ಮಾಡಲಾಗಿದ್ದು, ಕರಾವಳಿಯ ಮೂರೂ ಶಾಸಕರೊಂದಿಗೆ ಸಭೆ ನಡೆಸಲಾಗುವುದು.

– ಶಿವರಾಮ ಹೆಬ್ಬಾರ, ಜಿಲ್ಲಾ ಉಸ್ತುವಾರಿ ಸಚಿವ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು