ಶನಿವಾರ, ಮೇ 15, 2021
24 °C
‘ಒಂದು ಭಾರತ ಒಂದು ತುರ್ತು ಕರೆಸಂಖ್ಯೆ’ ಪರಿಕಲ್ಪನೆಯಡಿ ಯೋಜನೆ ಜಾರಿ

‘100’ರ ಬದಲು ‘112’ ಕಾರ್ಯ ನಿರ್ವಹಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೇಂದ್ರ ಸರ್ಕಾರವು ‘ಒಂದು ಭಾರತ ಒಂದು ತುರ್ತು ಕರೆಸಂಖ್ಯೆ’ ಪರಿಕಲ್ಪನೆಯಡಿ ದೇಶದಾದ್ಯಂತ ‘ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ 112’ (ಇ.ಆರ್.ಆರ್.ಎಸ್.ಎಸ್) ಯೋಜನೆ ಜಾರಿಗೊಳಿಸಿದೆ. ಹಾಗಾಗಿ ಜಿಲ್ಲೆಯಲ್ಲಿ ಇನ್ನುಮುಂದೆ ಎಲ್ಲ ರೀತಿಯ ತುರ್ತು ಸೇವೆಗಳಿಗಾಗಿ ‘100’ ಸಂಖ್ಯೆಯ ಬದಲಾಗಿ ‘112’ ಸಂಪರ್ಕಿಸಬಹುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಶನಿವಾರ ‘ಇ.ಆರ್.ಆರ್.ಎಸ್.ಎಸ್’ ವಾಹನಗಳ ಚಾಲನೆಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

‘ಇದು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಪೊಲೀಸ್ ಇಲಾಖೆಯು ಹಂತ ಹಂತವಾಗಿ ವಾಹನಗಳನ್ನು ಜಿಲ್ಲಾವಾರು ನಿಯೋಜಿಸುತ್ತಿದೆ. ಈಗ ಪೊಲೀಸ್ ಪ್ರಧಾನ ಕಚೇರಿಂದ ಉತ್ತರ ಕನ್ನಡ ಜಿಲ್ಲೆಗೆ ಒಟ್ಟು 16 ವಾಹನಗಳನ್ನು ಹಂಚಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಈ ವಾಹನಗಳನ್ನು ಈ ಹಿಂದೆ 100 ಸಂಖ್ಯೆಗೆ ಬರುತ್ತಿದ್ದ ಕರೆಗಳು ಮತ್ತು ಅಪರಾಧ ಘಟಿಸಿದ ಸ್ಥಳಗಳ ಆಧಾರದ ಮೇಲೆ ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ಮೂಲಕ ತುರ್ತು ಸೇವೆ ಅಗತ್ಯವಿರುವ ವ್ಯಕ್ತಿಯ ಅತಿ ಹತ್ತಿರ ಲಭ್ಯವಿರುವ ತುರ್ತು ಸೇವಾ ವಾಹನಕ್ಕೆ ಸೂಚನೆಗಳನ್ನು ನೀಡಲಾಗುತ್ತದೆ’ ಎಂದರು.

‘112ಕ್ಕೆ ಬರುವ ಕರೆ, ಸಂದೇಶಗಳು, 112 ಇಂಡಿಯಾ ಆ್ಯಪ್‌ಗೆ ಮನವಿಗಳು, erss112ktk@ksp.gov.inಗೆ ಬರುವ ಇಮೇಲ್‌ಗಳು, https://ka.need.in ಮೂಲಕ ಬರುವ ವಿನಂತಿಗಳಿಗೆ ಅತಿ ಶೀಘ್ರವಾಗಿ ಸ್ಪಂದಿಸುವ ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆಗಳನ್ನು ಅಳವಡಿಕೆ ಮಾಡಲಾಗಿದೆ. ವಾರದಾದ್ಯಂತ ದಿನಪೂರ್ತಿ ಸೇವೆ ಲಭ್ಯವಿದ್ದು, ಕರೆ ಮಾಡಿದವರ ಪ್ರತಿಕ್ರಿಯೆಗಳನ್ನು ಆಧರಿಸಿ ವಿಸ್ತರಿಸಲಾಗುತ್ತದೆ’ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿ.ವೈ.ಎಸ್‌.ಪಿ ಆರ್.ದಿಲೀಪ್, ಡಿ.ವೈ.ಎಸ್‌.ಪಿ ಅರವಿಂದ ಕಲಗುಜ್ಜಿ, ಸಿ.ಪಿ.ಐ ಸಂತೋಷ ಶೆಟ್ಟಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು