ಸೋಮವಾರ, ಮೇ 23, 2022
28 °C
13ನೇ ಬ್ಯಾಚ್‍ನ ನಿರ್ಗಮನ ಪಥ ಸಂಚಲನದಲ್ಲಿ ನ್ಯಾಯಾಧೀಶರ ಕಿವಿಮಾತು

‘ಪೊಲೀಸ್ ಇಲಾಖೆಯ ಗೌರವ ಹೆಚ್ಚಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಸರ್ಕಾರದಲ್ಲಿ ಉದ್ಯೋಗ ಪಡೆಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಲಕ್ಷಾಂತರ ಮಂದಿಯ ಪೈಪೋಟಿಯ ನಡುವೆ ಸರ್ಕಾರಿ ಉದ್ಯೋಗ ಪಡೆದ ನೀವೇ ಧನ್ಯರು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್ ನ್ಯಾಯಾಧೀಶ ಸಿ.ರಾಜಶೇಖರ ಹೇಳಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ 13ನೇ ಬ್ಯಾಚ್‍ನ ನಿರ್ಗಮನ ಪಥ ಸಂಚಲನದಲ್ಲಿ ಅವರು ಮಾತನಾಡಿದರು. ರಾಜ್ಯದ 12 ಜಿಲ್ಲೆಗಳ 72 ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‍ಗಳು ಇಲ್ಲಿನ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ಎಂಟು ತಿಂಗಳಿಂದ ತರಬೇತಿ ಪಡೆದಿದ್ದರು.

‘ಪೊಲೀಸ್ ಇಲಾಖೆಯ ಬಗ್ಗೆ ಹಲವರಿಗೆ ಅಸಡ್ಡೆಯಿದೆ. ಅದನ್ನು ದೂರ ಮಾಡುವ ನಿಟ್ಟಿನಲ್ಲಿ ನೀವೆಲ್ಲ ಕಾರ್ಯ ನಿರ್ವಹಿಸಬೇಕು.  ಪೊಲೀಸ್ ಇಲಾಖೆಯ ಗೌರವ ಹೆಚ್ಚುವಂತೆ ಮಾಡಿ, ಕೆಟ್ಟದಾಗಿ ಮಾತನಾಡುವವರ ಬಾಯಿ ಮುಚ್ಚಿಸಿ. ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಿ. ಉದ್ಯೋಗಕ್ಕೆ ನ್ಯಾಯ ಒದಗಿಸಿ, ಸರ್ಕಾರದ ಋಣ ತೀರಿಸಿ’ ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಗಮನ ಸೆಳೆಯಿತು. ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರೂ ಆಗಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ್ ವರದಿ ವಾಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಸ್ವಾಗತಿಸಿದರು. ಉಪ ಪ್ರಾಂಶುಪಾಲ ದಿಲೀಪ ಎಸ್.ಪಿ. ವಂದಿಸಿದರು.

12 ಜಿಲ್ಲೆಗಳ ಸಿಬ್ಬಂದಿ: ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ 2020ರ ಜೂನ್ 10ರಿಂದ ತರಬೇತಿ ನೀಡಲಾಗಿತ್ತು. ಉತ್ತರ ಕನ್ನಡದ 22, ಮಂಗಳೂರು ನಗರ ಹಾಗೂ ರೈಲ್ವೆ ಇಲಾಖೆಯ ತಲಾ 10, ಚಿತ್ರದುರ್ಗದ 9, ಧಾರವಾಡ ಹಾಗೂ ಕೆ.ಜಿ.ಎಫ್‍.ಗೆ ತಲಾ ಐವರು, ಮೈಸೂರಿನ ನಾಲ್ವರು, ಶಿವಮೊಗ್ಗ, ಕೋಲಾರಕ್ಕೆ ತಲಾ ಇಬ್ಬರು, ಯಾದಗಿರಿ, ತುಮಕೂರು, ಬೆಳಗಾವಿ ನಗರ ವಿಭಾಗಗಳಿಗೆ ಆಯ್ಕೆಯಾದ ತಲಾ ಒಬ್ಬರು ಮಹಿಳಾ ಕಾನ್‌ಸ್ಟೆಬಲ್ ಇಲ್ಲಿದ್ದರು.

ಪ್ರಶಸ್ತಿ ಪ್ರದಾನ: ಎಂಟು ತಿಂಗಳ ತರಬೇತಿಯ ಅವಧಿಯಲ್ಲಿ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿದ ಪ್ರಶಿಕ್ಷಣಾರ್ಥಿಗಳನ್ನು ವಿಶೇಷವಾಗಿ ಗುರುತಿಸಲಾಯಿತು.

ಹೊರಾಂಗಣ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೆಂಜಾರು ಗ್ರಾಮದ ಕಾವೇರಿ ಅಂಬರೀಶ್ ಮೊದಲ ಸ್ಥಾನ ಪಡೆದರು. ತರಬೇತಿಯ ಅವಧಿಗೆ ಅವರು ‘ಸರ್ವೋತ್ತಮ ಸೇವಾ ಪ್ರಶಸ್ತಿ’ಯನ್ನು ಪಡೆದುಕೊಂಡರು.

ಒಳಾಂಗಣ ವಿಭಾಗದಲ್ಲಿ ರಸಪ್ರಶ್ನೆ ಹಾಗೂ ಶೂಟಿಂಗ್ (ಗುಂಡು ಹಾರಿಸುವುದು) ಸ್ಪರ್ಧೆಯಲ್ಲಿ ಹಾಸನದ ಅನ್ನಪೂರ್ಣಾ ರಮೇಶ್ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು. ಬಿ.ಇ ಪದವೀಧರೆಯಾಗಿರುವ ಅವರು, ಪೊಲೀಸ್ ಸಿಬ್ಬಂದಿಯಾಗಿ ನೇಮಕವಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು