ಬುಧವಾರ, ಏಪ್ರಿಲ್ 21, 2021
30 °C
ಜಿಲ್ಲೆಯ ವಿಷಯ ತಜ್ಞರ ಪ್ರಶ್ನೆಗೆ ಕೇಂದ್ರ ಸರ್ಕಾರದ ಮೆಚ್ಚುಗೆ

ಸಮುದ್ರ ಅಧ್ಯಯನಕ್ಕೆ ಅನುಕೂಲ: ವಿಶೇಷ ವಿ.ವಿ ಸ್ಥಾಪನೆ ನಿರೀಕ್ಷೆಗೆ ಬಲ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

ಕಾರವಾರ: ಸಮುದ್ರ ಅಧ್ಯಯನಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳನ್ನೂ ಒಗ್ಗೂಡಿಸಿ, ಕೇಂದ್ರ ಸರ್ಕಾರವು ವಿಶೇಷ ವಿಶ್ವವಿದ್ಯಾಲಯ ಸ್ಥಾಪಿಸುವ ನಿರೀಕ್ಷೆ ಗರಿಗೆದರಿದೆ. ಈ ಬಗ್ಗೆ ಜಿಲ್ಲೆಯ ವಿಷಯ ತಜ್ಞರೊಬ್ಬರು ನೀಡಿದ್ದ ಸಲಹೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ.

ವಿದೇಶಾಂಗ ಸಚಿವಾಲಯವು ಮಾರ್ಚ್ 4ರಂದು, ‘ಭಾರತೀಯ ವಿಚಾರ ಸಂಕಿರಣ’ದ ಅಡಿಯಲ್ಲಿ ‘ಬಂದರು ಮೂಲಸೌಕರ್ಯ ಅಭಿವೃದ್ಧಿ’ ವಿಷಯವಾಗಿ ಆನ್‌ಲೈನ್‌ನಲ್ಲಿ ಸಂವಾದ ಏರ್ಪಡಿಸಿತ್ತು. ಅಂತರರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿವಿಧ ಉನ್ನತ ಅಧಿಕಾರಿಗಳು, ಹಣಕಾಸು ಸಂಸ್ಥೆಗಳ ಮುಖ್ಯಸ್ಥರು, ದೇಶ, ವಿದೇಶಗಳ ಆಸಕ್ತರು ಭಾಗವಹಿಸಿದ್ದರು. 

ಸಂವಾದದಲ್ಲಿ ಭಾಗವಹಿಸಿದ್ದ ಕುಮಟಾದ ಕಡಲಜೀವ ವಿಜ್ಞಾನಿ ಡಾ.ಪ್ರಕಾಶ ಮೇಸ್ತ, ‘ಸಮುದ್ರ ಅಧ್ಯಯನಕ್ಕೆ ಮೀಸಲಾಗಿರುವ ಪ್ರಪಂಚದ ಎಲ್ಲ ವಿಶ್ವವಿದ್ಯಾಲಯಗಳು, ಗ್ರಂಥಾಲಯಗಳು ಹಾಗೂ ಇತರ ಅಧ್ಯಯನ ಕೇಂದ್ರಗಳಿಗೆ ಸಂಪರ್ಕವಿರುವಂತೆ ನೂತನ ವಿಶ್ವವಿದ್ಯಾಲಯವನ್ನು ನಮ್ಮ ದೇಶದಲ್ಲಿ ಸ್ಥಾಪಿಸಲು ಸಾಧ್ಯವಿಲ್ಲವೇ’ ಎಂದು ಪ್ರಶ್ನಿಸಿದ್ದರು.

‘ಈ ವಿಶ್ವವಿದ್ಯಾಲಯವು ಸಮುದ್ರದ ವಿವಿಧ ರೀತಿಯ ಬಳಕೆದಾರರು, ಮೀನುಗಾರಿಕೆ ಇಲಾಖೆ, ನೌಕಾ ವಾಸ್ತು, ಹಡಗಿಗೆ ಸಂಬಂಧಿಸಿದ ಕೋರ್ಸ್‌ಗಳು, ನೌಕಾ ಎಂಜಿನಿಯರಿಂಗ್ ಮುಂತಾದ ಎಲ್ಲ ವಿಭಾಗಗಳೊಂದಿಗೆ ಸಂಪರ್ಕ ಹೊಂದಿರಬೇಕು. ದೇಶವು ಮುಂದಿನ ದಿನಗಳಲ್ಲಿ ಜಲಮಾರ್ಗ ಮತ್ತು ಸಾಗರ ಸಂಪತ್ತಿನ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ವಿಶ್ವಾಸವಿದೆ. ಹೊಸ ವಿಶ್ವವಿದ್ಯಾಲಯದ ಸ್ಥಾಪನೆಯಿಂದ ಈ ಹೆಗ್ಗುರಿ ತಲುಪಲು ಸಹಕಾರಿಯಾಗಲಿದೆ’ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವಾಲಯದ ಇರಾನ್ ವ್ಯವಹಾರಗಳ ಜಂಟಿ ಕಾರ್ಯದರ್ಶಿ ಜಿ.ಪಿ.ಸಿಂಗ್, ‘ಬಹಳ ಕುತೂಹಲಕಾರಿಯಾಗಿರುವ ಈ ಅಂಶದ ಬಗ್ಗೆ ನಾವು ಆಲೋಚನೆಯನ್ನೇ ಮಾಡಿರಲಿಲ್ಲ. ಸಮುದ್ರದ ಸದ್ಬಳಕೆ ಮೂಲಕ ಆರ್ಥಿಕ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯ ಅವಕಾಶಗಳತ್ತ ಬೆಳಕು ಚೆಲ್ಲುವುದೇ ಭಾರತೀಯ ವಿಚಾರ ಸಂಕಿರಣದ ಉದ್ದೇಶವಾಗಿದೆ. ಕರ್ನಾಟಕದ ಉತ್ತರ ಕನ್ನಡದಿಂದ ಬಂದಿರುವ ಈ ಸಲಹೆಯನ್ನು ಹಡಗು ಮತ್ತು ಜಲಮಾರ್ಗಗಳ ಸಚಿವಾಲಯಕ್ಕೆ ಕಳುಹಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಸಚಿವ ಮನ್‌ಸುಖ್ ಮಾಂಡವೀಯ ಹಾಗೂ ಇಲಾಖೆಯ ಕಾರ್ಯದರ್ಶಿ ಡಾ.ಸಂಜೀವ ರಂಜನ್ ಅವರ ಗಮನಕ್ಕೂ ಈ ವಿಚಾರವನ್ನು ತರಲಾಗುವುದು. ವಿಶ್ವವಿದ್ಯಾಲಯದ ಸ್ಥಾಪನೆಯ ನಿಟ್ಟಿನಲ್ಲಿ ಚಿಂತಿಸುವಂತೆ ಕೋರಲಾಗುವುದು’ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲೇ ಸ್ಥಾಪನೆಗೆ ಒತ್ತಾಯ: ವಿಚಾರ ಸಂಕಿರಣದಲ್ಲಿ ತಮ್ಮ ಪ್ರಶ್ನೆಯನ್ನು ಪರಿಗಣಿಸಿದ್ದಕ್ಕೆ ಡಾ.ಪ್ರಕಾಶ ಮೇಸ್ತ ಸಂತಸ ವ್ಯಕ್ತಪಡಿಸಿದ್ದಾರೆ. ‘ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಸ್ತಾಪವಾದ ಅಂಶಗಳನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸುತ್ತದೆ. ಹಾಗಾಗಿ ನೂತನ ವಿಶ್ವವಿದ್ಯಾಲಯ ಸ್ಥಾಪನೆಯಾಗುವ ವಿಶ್ವಾಸವಿದೆ. ಉತ್ತರ ಕನ್ನಡದಲ್ಲೇ ಸ್ಥಾಪಿಸುವಂತೆಯೂ ಒತ್ತಾಯಿಸಿದ್ದೇನೆ. ಹೊಸ ವಿಶ್ವವಿದ್ಯಾಲಯದಿಂದ ಇಡೀ ವಿಶ್ವದ ಗಮನವನ್ನು ದೇಶದತ್ತ ಸೆಳೆಯಲು ಸಾಧ್ಯವಿದೆ’ ಎಂದು ಹೇಳಿದ್ದಾರೆ.

ಈಡೇರದ ಭರವಸೆ: ಸಮುದ್ರದಲ್ಲಿ ಉದ್ಯೋಗಾವಕಾಶಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ‘ಡಿ.ಜಿ.ಶಿಪ್ಪಿಂಗ್ ಕೋರ್ಸ್‌’‌ಗಳ ಕಾಲೇಜುಗಳು ರಾಜ್ಯದಲ್ಲಿ ಇಲ್ಲದಿರುವ ಬಗ್ಗೆ ‘ಪ್ರಜಾವಾಣಿ’ಯ 2020ರ ಜ.29ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, ಕೋರ್ಸ್‌ಗಳ ಆರಂಭಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಬಳಿಕ ಹೆಚ್ಚಿನ ಪ್ರಗತಿ ಕಾಣಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು