ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಳಿಗೆ ಮೇವಾದ ರಸಭರಿತ ಕಲ್ಲಂಗಡಿ

‘ತೌತೆ’ಯಿಂದ ಮಣ್ಣಿನಲ್ಲಿ ಹೆಚ್ಚಿದ ತೇವಾಂಶ: ಹೊಲದಲ್ಲೇ ಕೊಳೆತ ಫಸಲು
Last Updated 30 ಮೇ 2021, 16:22 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಮೇ 15ರಂದು ಹಾದು ಹೋಗಿದ್ದ ‘ತೌತೆ’ ಚಂಡಮಾರುತದ ಪರಿಣಾಮಗಳು ಈಗಲೂ ಮುಂದುವರಿದಿವೆ. ಸಮುದ್ರದ ನೀರು ಕರಾವಳಿಯ ಮಣ್ಣಿನಲ್ಲಿ ಸೇರಿಕೊಂಡು ತೇವಾಂಶ ಹೆಚ್ಚಾಗಿದೆ. ಇದರಿಂದ ಜಿಲ್ಲೆಯಲ್ಲಿ ಸುಮಾರು 60 ಹೆಕ್ಟೇರ್‌ಗಳಷ್ಟು ಕಲ್ಲಂಗಡಿ ಬೆಳೆ ಹಾನಿಗೀಡಾಗಿದೆ.

ಫಸಲು ಇನ್ನೇನು ಕಟಾವಿಗೆ ಬರುವ ದಿನಗಳಾದವು ಎನ್ನುವಷ್ಟರಲ್ಲಿ ಚಂಡಮಾರುತ ಅಬ್ಬರಿಸಿತು. ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಮಣ್ಣು ಒಣಗಿರಬೇಕು. ಇಲ್ಲದಿದ್ದರೆ ಹಣ್ಣು ಕೊಳೆಯುತ್ತವೆ. ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿಯಲ್ಲಿ ಇದೇ ರೀತಿಯಾಗಿದ್ದು, ರಸಭರಿತ ಕಲ್ಲಂಗಡಿ ಹಣ್ಣುಗಳನ್ನು ಜಾನುವಾರಿಗೆ ಮೇವಿನ ರೀತಿಯಲ್ಲಿ ತಿನ್ನಿಸುತ್ತಿದ್ದಾರೆ. ತಾವೇ ಬೆಳೆದ ಹಣ್ಣುಗಳನ್ನು ಕತ್ತರಿಸಿ ಹಾಕುತ್ತಿದ್ದಾರೆ. ಬೆಳೆ ನಷ್ಟವಾಗಿದ್ದಕ್ಕೆ ಬೇಸರಿಸುತ್ತಲೇ ಆಕಳ ಹಿಂಡನ್ನು ನೇರವಾಗಿ ಹೊಲಕ್ಕೆ ಅಟ್ಟುತ್ತಿದ್ದಾರೆ.

‘ಅಂಕೋಲಾ ತಾಲ್ಲೂಕಿನಲ್ಲಿ ಫಸಲು ಸ್ವಲ್ಪ ತಡವಾಗಿ ಸಿಗುತ್ತದೆ. ಸ್ವಲ್ಪ ದಿನ ಬಿಟ್ಟಿದ್ದರೂ ಎಲ್ಲ ಹಣ್ಣುಗಳು ಮಾರಾಟವಾಗುತ್ತಿದ್ದವು. ಆದರೆ, ಒಂದೆಡೆ ಚಂಡಮಾರುತ, ಮತ್ತೊಂದೆಡೆ ಲಾಕ್‌ಡೌನ್. ಇವುಗಳಿಂದಾಗಿ ಕಲ್ಲಂಗಡಿಗೆ ಹಾಕಿದ ನಯಾಪೈಸೆ ವಾಪಸ್ ಸಿಗುತ್ತಿಲ್ಲ. ಪ್ರತಿವರ್ಷ ಈ ಸಂದರ್ಭದಲ್ಲಿ ಕೆ.ಜಿಗೆ ₹ 10ರಿಂದ ₹ 12ರಂತೆ ಮಾರಾಟ ಮಾಡುತ್ತಿದ್ದೆವು. ಈ ಬಾರಿ ₹2ಕ್ಕೂ ಕೇಳುವವರಿಲ್ಲ’ ಎಂದು ಹಟ್ಟಿಕೇರಿಯ ಬೆಳೆಗಾರ ವಾಮ ನಾಯ್ಕ ದುಃಖಿತರಾದರು.

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ತಾಲ್ಲೂಕುಗಳಲ್ಲಿ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತದೆ. ಕರಾವಳಿ ಭಾಗದಲ್ಲಿ ಫೆಬ್ರುವರಿಯಿಂದ ಜೂನ್ ಮೊದಲ ವಾರದವರೆಗೂ ಕಲ್ಲಂಗಡಿ ಬೆಳೆಯಲಾಗುತ್ತದೆ. ರಾಜ್ಯದ ಮಾರುಕಟ್ಟೆಯ ಜೊತೆಗೆ ಗೋವಾ, ಕೇರಳಕ್ಕೂ ರವಾನೆಯಾಗುತ್ತದೆ. ಮೊದಲ ಫಸಲನ್ನು ರವಾನಿಸಿದ್ದ ರೈತರಿಗೆ, ಎರಡನೇ ಫಸಲಿನ ವೇಳೆ ಚಂಡಮಾರುತ ಮತ್ತು ಲಾಕ್‌ಡೌನ್ ಅಡ್ಡಿಯಾಗಿವೆ.

‘ಮಳೆ ಬಂದ ನಂತರ ಕಲ್ಲಂಗಡಿ ಸೇವಿಸಿದರೆ ಶೀತ, ಜ್ವರ ಬರುತ್ತದೆ ಎಂಬ ಆತಂಕ ಹಲವರಲ್ಲಿದೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಕೂಡ ಬೇಡಿಕೆಯಿಲ್ಲ. ಸಾಗಣೆ ಮತ್ತು ಮಾರಾಟಕ್ಕೆ ತೊಂದರೆ ಎಂದು ದೊಡ್ಡ ವರ್ತಕರೂ ಖರೀದಿಸುತ್ತಿಲ್ಲ. ಮಾಡಿದ್ದ ಸಾಲವನ್ನು ಭರಿಸುವುದು ಹೇಗೆ ಎಂಬ ಚಿಂತೆಯಾಗಿದೆ’ ಎನ್ನುತ್ತಾರೆ ಭಾವಿಕೇರಿ ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ರೈತ ಶುಭನ್ ನಾಯಕ.

ಗೇಣಿ ಜಮೀನಿನ ಸಮಸ್ಯೆ:

ಕರಾವಳಿಯಲ್ಲಿ ತುಂಡು ಜಮೀನುಗಳನ್ನು ಗೇಣಿಗೆ ಪಡೆದುಕೊಂಡು ಕೃಷಿ ಮಾಡುವವರೇ ಅಧಿಕ. ಹಾಗಾಗಿ ಪ್ರಾಕೃತಿಕ ವಿಕೋಪದಂಥ ಸಂದರ್ಭಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಪರಿಹಾರ ನೀಡಲು ತೊಡಕಾಗುತ್ತಿದೆ. ತೌತೆ ಚಂಡಮಾರುತದಿಂದ ಹಾನಿಯಾದ ರೈತರಿಗೂ ಇದೇ ಸಮಸ್ಯೆ ಕಾಡುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT