ಶನಿವಾರ, ಮೇ 28, 2022
31 °C
ಮೀನು ಮಾರುಕಟ್ಟೆಯ ಒಳಗೆ ಮಾಂಸ ತ್ಯಾಜ್ಯ: ತೀವ್ರ ವಿರೋಧ

ಭಟ್ಕಳ: ‍ಪುರಸಭೆ ಕಚೇರಿ ಆವರಣದಲ್ಲಿ ಮೀನು ಎಸೆದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿರುವ ಮೀನು ಮಾರುಕಟ್ಟೆಯ ಒಳಗೆ ಕೋಳಿ ಹಾಗೂ ಮೀನಿನ ತ್ಯಾಜ್ಯ ಹಾಕಿ ವ್ಯಾಪಾರಕ್ಕೆ ಅಡಚಣೆ ಮಾಡಿದ್ದನ್ನು ಖಂಡಿಸಿ, ಮೀನು ಮಾರಾಟಗಾರ ಮಹಿಳೆಯರು ಬುಧವಾರ ಪುರಸಭೆಗೆ ಮುತ್ತಿಗೆ ಹಾಕಿದರು. ಪುರಸಭೆ ಆವರಣದೊಳಗೆ ಮೀನುಗಳನ್ನು ಎಸೆದು ಪ್ರತಿಭಟನೆ ನಡೆಸಿದರು.

ಮೀನು ಮಾರುಕಟ್ಟೆ ಒಳಗೆ ಕೋಳಿ ಮತ್ತು ಮೀನು ಮಾಂಸ ತ್ಯಾಜ್ಯ ಎಸೆದಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪುರಸಭೆ ಕಚೇರಿ ಮೆಟ್ಟಿಲಿನ ಮೇಲೆ ಧರಣಿ ಕುಳಿತರು. ಪುರಸಭೆ ಅಧಿಕಾರಿಗಳು ಮೀನು ಮಾರುಕಟ್ಟೆ ಸ್ವಚ್ಛ ಮಾಡಿಕೊಡುವವರೆಗೆ ಕದಲುವುದಿಲ್ಲ ಎಂದು ಪಟ್ಟುಹಿಡಿದರು. ಪ್ರತಿಭಟನೆ ನಡೆಸುತ್ತಿದ್ದರೂ ಅಧಿಕಾರಿಗಳು ಸ್ಪಷ್ಟನೆ ನೀಡಲು ವಿಳಂಬ ಮಾಡಿದರು ಎಂದು ಅಸಾಮಾಧಾನಗೊಂಡರು. ಮಹಿಳೆಯರು ಮಾರಾಟ ಮಾಡಲು ತಂದಿದ್ದ ಮೀನುಗಳನ್ನು ಪುರಸಭೆ ಕಚೇರಿಯ ಎದುರು ಹಾಗೂ ಒಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ನಾಳೆಯಿಂದ (ಏ.7) ಪುರಸಭೆ ಕಚೇರಿ ಎದುರು ಮೀನು ಮಾರಾಟ ಮಾಡುವುದಾಗಿ ಹೇಳಿದರು. ಪ್ರತಿಭಟನೆ ವಿಕೋಪಕ್ಕೆ ಹೋಗುವುದನ್ನು ಗ್ರಹಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಗುಂಪನ್ನು ಸಮಾಧಾನಪಡಿಸಿದರು.

ಹಿನ್ನೆಲೆ ಏನು?:

ಶಿಥಿಲಾವಸ್ಥೆಯಲ್ಲಿರುವ ಹಳೇ ಬಸ್ ನಿಲ್ದಾಣ ಮೀನು ಮಾರುಕಟ್ಟೆ ಮುಚ್ಚಿ ಸಂತೆ ಮಾರುಕಟ್ಟೆ ಬಳಿ ಹೊಸದಾಗಿ ನಿರ್ಮಿಸಿದ ಮೀನು ಮಾರುಕಟ್ಟೆ ಸ್ಥಳಾಂತರ ಮಾಡಲು ಪುರಸಭೆಯಿಂದ ಯೋಜನೆ ರೂಪಿಸಲಾಗಿತ್ತು. ಇದಕ್ಕೆ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದರು. ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಮೀನು ಮಾರುಕಟ್ಟೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಪುರಸಭೆಯ ಅಧಿಕಾರಿಗಳೇ ಮಾರುಕಟ್ಟೆಯಲ್ಲಿ ಮಾಂಸ ತ್ಯಾಜ್ಯ ಎಸೆದಿದ್ದಾರೆ ಎನ್ನುವುದು ಸ್ಥಳೀಯರ ಅನುಮಾನವಾಗಿದೆ.

ದೂರು ದಾಖಲು:

ಹಳೇ ಬಸ್ ನಿಲ್ದಾಣ ಮೀನು ಮಾರುಕಟ್ಟೆ ಒಳಗಡೆ ಕೋಳಿ ಹಾಗೂ ಮೀನಿನ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಬೇಕು. ಅವರನ್ನು ಬಂಧಿಬೇಕು ಎಂದು ಒತ್ತಾಯಿಸಿ ಭಟ್ಕಳ ಪುರಸಭೆಯಿಂದ ಬುಧವಾರ ಶಹರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಪುರಸಭೆಯವರು ತ್ಯಾಜ್ಯ ತಂದು ಹಾಕಿ ಮಾರಾಟಕ್ಕೆ ಅಡಚಣೆ ಮಾಡಿದ್ದಾರೆ ಎಂದು ಮೀನುಗಾರ ಮಹಿಳೆಯರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪುರಸಭೆಯವರು ದೂರು ದಾಖಲಿಸಿದ್ದು, ಮೀನು ಮಾರುಕಟ್ಟೆಯಲ್ಲಿದ್ದ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ಮಾರಾಟಕ್ಕೆ ಅನುಕೂಲ ಮಾಡಿಕೊಟ್ಟಿದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು