ಭಾನುವಾರ, ಜನವರಿ 26, 2020
28 °C

ಕಾರವಾರ | ಸಾಗರಮಾಲಾ ಯೋಜನೆಗೆ ವಿರೋಧ: 20ಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಮೀನುಗಾರರು ಹಾಗೂ ಇತರ ಸ್ಥಳೀಯರ ವಿರೋಧದ ನಡುವೆ ಸಾಗರಮಾಲಾ ಯೋಜನೆಯಡಿ ಇಲ್ಲಿನ ವಾಣಿಜ್ಯ ಬಂದರಿನ ವಿಸ್ತರಣೆ ಕಾಮಗಾರಿ ಸೋಮವಾರ ಮತ್ತೆ ಆರಂಭವಾಗಿದೆ. ಇದಕ್ಕೆ ಅಡ್ಡಿಪಡಿಸಲು ಮುಂದಾದ 20ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಕಾಮಗಾರಿ ನಡೆಯುವ ಪ್ರದೇಶದ ಸುತ್ತ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು, ಒಳಗೆ ಪ್ರವೇಶಿಸಿದಂತೆ ನಿರ್ಬಂಧಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಯೋಜನೆಯ ಭಾಗವಾಗಿ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಮಕ್ಕಳ ಉದ್ಯಾನದ ಸಮೀಪದಲ್ಲಿ ಸುಮಾರು 800 ಮೀಟರ್ ಉದ್ದದ ಅಲೆ ತಡೆಗೋಡೆ ನಿರ್ಮಾಣವಾಗಲಿದೆ. ಇದರಿಂದ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ತೊಂದರೆಯಾಗಲಿದೆ. ವಾಣಿಜ್ಯ ಬಂದರಿನ ವಿಸ್ತರಣೆಯಿಂದ ಮೀನುಗಾರಿಕಾ ಉದ್ಯಮಕ್ಕೆ ಹೊಡೆತ ಬೀಳಲಿದೆ. ಅಲ್ಲದೇ ಕಾರವಾರದ ಏಕೈಕ ಕಡಲತೀರಕ್ಕೆ ಮತ್ತು ನಗರ ಸೌಂದರ್ಯಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿ ಮೀನುಗಾರರು ಕಾಮಗಾರಿಯನ್ನು ವಿರೋಧಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಕಾಮಗಾರಿ ಆರಂಭಿಸಿದಾಗಲೂ ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಬಳಿಕ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸಭೆ ನಡೆದಿತ್ತು. ಮೀನುಗಾರರ ಎಲ್ಲ ಆತಂಕಗಳನ್ನೂ ನಿವಾರಿಸಿ, ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಸಚಿವರು ಸಭೆಯಲ್ಲಿ ಭರವಸೆ ನೀಡಿದ್ದರು. 

ಯೋಜನೆಯನ್ನು ವಿರೋಧಿಸಿ ಭಾನುವಾರ ಸಂಜೆ ಟ್ಯಾಗೋರ್ ಕಡಲತೀರದಲ್ಲಿ ಮೀನುಗಾರರು ಹಾಗೂ ನೂರಾರು ಸ್ಥಳೀಯರು ಸುಮಾರು ಎರಡು ಕಿಲೋಮೀಟರ್ ಉದ್ದದ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.


ಪೊಲೀಸರ ವಶಕ್ಕೆ ಪ್ರತಿಭಟನಾಕಾರರು

 


ಪೊಲೀಸರ ವಶಕ್ಕೆ ಪ್ರತಿಭಟನಾಕಾರರು

 


ಕಾಮಗಾರಿ ನಡೆಯುವ ಪ್ರದೇಶದ ಸುತ್ತ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು