ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಚಿಪ್ಪೆಕಲ್ಲು ಗಣಿಗಾರಿಕೆ: ಪರವಾನಗಿ ನೀಡದಂತೆ ಆಗ್ರಹ

Last Updated 6 ಜನವರಿ 2022, 13:11 IST
ಅಕ್ಷರ ಗಾತ್ರ

ಕಾರವಾರ: ‘ಅಘನಾಶಿನಿ ನದಿಯಲ್ಲಿ ಚಿಪ್ಪೆಕಲ್ಲು ಗಣಿಗಾರಿಕೆಗೆ ಕೊಟ್ಟಿರುವ ಪರವಾನಗಿಯನ್ನು ಶಾಶ್ವತವಾಗಿ ರದ್ದು ಪ‍ಡಿಸಬೇಕು. ಗಣಿಗಾರಿಕೆ ಮಾಡುವವರಿಗೆ ಪರವಾನಗಿ ನವೀಕರಣ ಮಾಡಬಾರದು’ ಎಂದು ಕುಮಟಾ ತಾಲ್ಲೂಕಿನ ಮೀನುಗಾರರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಮೊದಲು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮಸ್ಯೆಗಳನ್ನು ವಿವರಿಸಿದರು.

ಜಗದೀಶ ಹರಿಕಾಂತ ಮಾತನಾಡಿ, ‘ಚಿಪ್ಪೆಕಲ್ಲು ಗಣಿಗಾರಿಕೆ ಮಾಡುತ್ತಿರುವವರ ಪರವಾನಗಿಯು ಜ.7ರಂದು ಮುಕ್ತಾಯವಾಗುತ್ತದೆ. ಅವರಿಗೆ ಪುನಃ ಅನುಮತಿ ನೀಡಲೇಬಾರದು’ ಎಂದು ಆಗ್ರಹಿಸಿದರು.

‘ಅಘನಾಶಿನಿಯಲ್ಲಿ ಎಲ್ಲ ರೀತಿಯ ಮೀನುಗಳನ್ನು ಹಿಡಿದು ಮೀನುಗಾರರು ಜೀವನ ನಡೆಸುತ್ತಿದ್ದರು. ಆದರೆ, ಸರ್ಕಾರ ಚಿಪ್ಪಿ ಗಣಿಗಾರಿಕೆಗೆ ಪರವಾನಗಿ ನೀಡುವ ಮೂಲಕ ಮೀನುಗಾರರ ಸಮುದಾಯ ಬೀದಿಗೆ ಬೀಳುವಂತೆ ಮಾಡಿದೆ. ನದಿಯು ಸಮುದ್ರಕ್ಕೆ ಸೇರುವ ಅಳಿವೆ ಭಾಗವು ಗಣಿಗಾರಿಕೆ ಮಾಡುವ ಸ್ಥಳವಲ್ಲ. ಅದು ಮೀನುಗಾರಿಕೆಯ ಪ್ರದೇಶವಾಗಿದೆ. ಸರ್ಕಾರವು ಉದ್ಯಮಿಗಳ ಮಾತು ಕೇಳಿ ಅನುಮತಿ ನೀಡಿದೆ’ ಎಂದು ದೂರಿದರು.

‘ನದಿಯಲ್ಲಿ ಗಣಿಗಾರಿಕೆಗೆಂದು 10– 15 ಅಡಿಗಳಷ್ಟು ಆಳಕ್ಕೆ ಹೊಂಡ ತೆಗೆಯುವ ಕಾರಣ ನೈಸರ್ಗಿಕ ವ್ಯವಸ್ಥೆ ಮಾಯವಾಗಿದೆ. ನದಿಯಲ್ಲಿ ಬೇರೆ ಬೇರೆ ವಿಧಗಳ ಚಿಪ್ಪಿ ಬೆಳೆಯುತ್ತಿಲ್ಲ. ಇದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಒಂದು ವೇಳೆ ಪರವಾನಗಿ ಮುಂದುವರಿಸಿದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು’ ಎಂದರು.

ಮಂಜುನಾಥ ಹರಿಕಾಂತ ಮಾತನಾಡಿ, ‘ನದಿಯಲ್ಲಿ ಬೆಳಚು, ಚಿಪ್ಪಿ ಹಿಡಿಯುವ ಅವಧಿ ಇದು. ಮುಂಜಾನೆ ಗಣಿಗಾರಿಕೆ ನಡೆಯುತ್ತಿದ್ದಾಗ ಮೀನುಗಾರರ ಕುಟುಂಬದ ಮಹಿಳೆಯರು ಹೋದಾಗ ವಾಗ್ವಾದಗಳಾಗುತ್ತವೆ. ಪೊಲೀಸ್ ಪ್ರಕರಣ ದಾಖಲಿಸಿ ಬೆದರಿಸುತ್ತಾರೆ’ ಎಂದು ದೂರಿದರು.

ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಸಹಕಾರ ಫೆಡರೇಷನ್‌ನ ಮಾಜಿ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ, ‘ನದಿಯಲ್ಲಿ ಚಿಪ್ಪೆಗಳು ಒಡೆದ ಮೇಲೆ ಅದರ ಮಾಂಸವು ಇತರ ಜಲಚರಗಳಿಗೆ ಆಹಾರವಾಗುತ್ತದೆ. ಈ ಬಗ್ಗೆ ತಜ್ಞರನ್ನು ಕರೆದು ಜಿಲ್ಲಾಧಿಕಾರಿ ಸಭೆ ನಡೆಸಲಿ. ಗಣಿಗಾರಿಕೆಯನ್ನು ‍ವಿರೋಧಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ ಹಲವರು ಕುಮಟಾ ಬಿಟ್ಟು ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ಅವರ ಕುಟುಂಬದವರು ಭಯದಿಂದ ಇದ್ದಾರೆ. ಮೀನುಗಾರರಿಗೆ ನ್ಯಾಯ ಕೊಡಬೇಕು’ ಎಂದು ಒತ್ತಾಯಿಸಿದರು.

ಮಂಜುನಾಥ ಹರಿಕಾಂತ, ಬೀರಪ್ಪ ಈರ ಹರಿಕಂತ್ರ, ಜಗದೀಶ ಹರಿಕಾಂತ, ಜಗದೀಶ ತಾಂಡೇಲ, ಮೋಹನ ಎಂ.ಮೂಡಂಗಿ, ಶಾರದಾ ಮೂಡಂಗಿ, ಮಂಜುಳಾ ಈಶ್ವರ ಮೂಡಂಗಿ, ಸಮೀಕ್ಷಾ, ರಾಮಚಂದ್ರ ಎಸ್.ಹರಿಕಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT