ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ವಿರುದ್ಧ ಸುಳ್ಳು ಪ್ರಕರಣ

ಹೊನ್ನಾವರದ ಕಾಸರಕೋಡು ಖಾಸಗಿ ಬಂದರು ವಿರೋಧಿ ಹೋರಾಟಗಾರರ ಆರೋಪ
Last Updated 15 ಸೆಪ್ಟೆಂಬರ್ 2021, 15:50 IST
ಅಕ್ಷರ ಗಾತ್ರ

ಕಾರವಾರ: ‘ಕಾಸರಕೋಡಿನಲ್ಲಿ ಖಾಸಗಿ ಬಂದರು ನಿರ್ಮಾಣದ ವಿರುದ್ಧ ಶಾಂತರೀತಿಯಲ್ಲಿ ಹೋರಾಡುತ್ತಿರುವ ಮೀನುಗಾರರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ವಿರೋಧವನ್ನು ಹತ್ತಿಕ್ಕುವ ಪ್ರಯತ್ನಗಳು ಖಾಸಗಿ ಕಂಪನಿ ಮತ್ತು ಸ್ಥಳೀಯ ಆಡಳಿತದಿಂದ ಆಗುತ್ತಿದೆ’ ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ದೂರಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂತಹ ಹಿಂಬಾಗಿಲ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ. ಇಲ್ಲಿ ಸ್ಥಳೀಯರ ಮಾನವಹಕ್ಕುಗಳನ್ನು ಸರ್ಕಾರವು ಮೊಟಕುಗೊಳಿಸುತ್ತಿದೆ. ಕರಾವಳಿ ಪ್ರದೇಶದ ಬಹುತೇಕ ಸಮುದ್ರ ತೀರಗಳು ಈಗಾಗಲೇ ಸರ್ಕಾರದ ವಿವಿಧ ಯೋಜನೆಗಳಿಗೆ ಪರಭಾರೆಯಾಗಿದ್ದು, ಮೀನುಗಾರರ ಬದುಕು ಮೂರಾಬಟ್ಟೆಯಾಗಿದೆ. ಆದರೂ ಸರ್ಕಾರಕ್ಕೆ ತೃಪ್ತಿಯಾದಂತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರದ ಇಂತಹ ತಪ್ಪು ನಡೆಯಿಂದ ಕರಾವಳಿಯ ಸಾಂಪ್ರದಾಯಿಕ ಮೀನುಗಾರಿಕೆ ಸಂಪೂರ್ಣ ನಶಿಸಿ ಹೋಗುವ ಸ್ಥಿತಿಯಲ್ಲಿದೆ. ಇಲ್ಲಿ ಪೊಲೀಸ್ ಬಲಪ್ರಯೋಗದ ಮೂಲಕ ಸ್ಥಳೀಯರಲ್ಲಿ ಭಯ ಹುಟ್ಟಿಸಲಾಗುತ್ತಿದೆ. ಸಾರ್ವಜನಿಕರ ಹಿತವನ್ನು ಕಡೆಗಣಿಸಿ ಪರಿಸರ ಮಾಲಿನ್ಯ ಉಂಟುಮಾಡುವ ಯೋಜನೆಯನ್ನು ಜಾರಿಗೆ ತರಲು ಹೊರಟಿರುವುದು ಸರಿಯಲ್ಲ’ ಎಂದು ಹೇಳಿದರು.

ಹೋರಾಟದ ಎಚ್ಚರಿಕೆ:‘ಬಂದರು, ರಸ್ತೆ ಮತ್ತು ರೈಲು ಮಾರ್ಗದ ಕಾಮಗಾರಿಗಾಗಿ ಸಂತ್ರಸ್ತರಾಗುವವರ ಪುನರ್ವಸತಿಗೆ ಬದಲಿ ವ್ಯವಸ್ಥೆ ಮಾಡಿಲ್ಲ. ಸ್ಥಳೀಯ ಆಡಳಿತದಿಂದ ಇನ್ನಷ್ಟು ಮಾನವ ಹಕ್ಕುಗಳನ್ನು ದಮನಿಸುವ ಆತಂಕ ಮತ್ತು ಬೆದರಿಕೆಗಳಿವೆ. ಹಾಗಾಗಿ ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷದ ನಾಯಕರು ಕೂಡಲೇ ಮಧ್ಯಪ್ರವೇಶ ಮಾಡಬೇಕು. ಮೀನುಗಾರರ ಹಿತರಕ್ಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ಯೋಜನೆಯ ವಿಚಾರವಾಗಿ ಕೆಲವು ಸಂದೇಹ ಮತ್ತು ಪ್ರಶ್ನೆಗಳನ್ನು ಸರ್ಕಾರ, ಕಂಪನಿ ಮತ್ತು ಬಂದರು ಇಲಾಖೆಗೆ ಕೇಳಲಾಗಿತ್ತು. ಅವುಗಳಿಗೆ ಲಿಖಿತ ಉತ್ತರವನ್ನು ಬಯಸಿದ್ದೆವು. ಆದರೆ, ಸಾರ್ವಜನಿಕ ಹಿತಾಸಕ್ತಿಯ ಈ ವಿಚಾರವಾಗಿ ಈವರೆಗೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮೀನುಗಾರರ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ಕಡಲಜೀವ ವಿಜ್ಞಾನಿ ಪ್ರಕಾಶ ಮೇಸ್ತ, ಹೊನ್ನಾವರ ಪರ್ಸೀನ್ ಬೋಟ್ ಮಾಲೀಕರ ಸಂಘದ ಕಾರ್ಯದರ್ಶಿ ವಿವನ್ ಫರ್ನಾಂಡಿಸ್,
ಹೊನ್ನಾವರ ತಾಲ್ಲೂಕು ಹಸಿ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಣಪತಿ ತಾಂಡೇಲ, ಹೊನ್ನಾವರ ಬಂದರು ವಿರೋಧಿ ಹೋರಾಟ ಸಮಿತಿಯ ಮಹಮದ್ ಕೋಯಾ, ರಾಜು ಡಿ.ತಾಂಡೇಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT