ಶುಕ್ರವಾರ, ಆಗಸ್ಟ್ 19, 2022
25 °C
ಮೀನುಗಾರಿಕೆಗೆ ತೊಂದರೆ

ಹವಾಮಾನ ವೈಪರಿತ್ಯ, ಕಡಲು ಪ್ರಕ್ಷುಬ್ಧ: ದಡ ಸೇರಿದ ಹತ್ತಾರು ದೋಣಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಹವಾಮಾನ ವೈಪರೀತ್ಯದಿಂದಾಗಿ ದಡಕ್ಕೆ ಮರಳಿವೆ. ಬೈತಖೋಲ್, ಮುದಗಾ, ತದಡಿ ಮೀನುಗಾರಿಕಾ ಬಂದರುಗಳಲ್ಲಿ ದೋಣಿಗಳನ್ನು ಲಂಗರು ಹಾಕಲಾಗಿದೆ.

ಕಾರವಾರದ ಬೈತಖೋಲ್ ಬಂದರಿನಲ್ಲಿ ಸ್ಥಳೀಯ ದೋಣಿಗಳಿಗೇ ಜಾಗ ಇಕ್ಕಟ್ಟಾಗುತ್ತದೆ. ಸಮುದ್ರ ಪ್ರಕ್ಷುಬ್ಧಗೊಂಡ ಕಾರಣ ಹೊರ ಜಿಲ್ಲೆ, ರಾಜ್ಯಗಳ ದೋಣಿಗಳನ್ನೂ ಮೀನುಗಾರರು ಇಲ್ಲಿಗೆ ತಂದರು. ಇದರಿಂದ ಜಾಗದ ಕೊರತೆ ಮತ್ತಷ್ಟು ಹೆಚ್ಚಾಯಿತು. ಅಲ್ಲದೇ ವಾಣಿಜ್ಯ ಬಂದರಿನತ್ತ ಹಡಗುಗಳು ಸಾಗಲು ಸಮಸ್ಯೆಯಾಯಿತು.

ಇದನ್ನರಿತ ಅಧಿಕಾರಿಗಳು ಮೀನುಗಾರಿಕಾ ದೋಣಿಗಳನ್ನು ಬೈತಖೋಲ್‌ನಿಂದ ಹೊರಗೆ ನಿಲ್ಲಿಸಲು ಸೂಚಿಸಿದರು. ಅದರಂತೆ, ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸಮೀಪ ಲಂಗರು ಹಾಕಿದರು. ಮಂಗಳೂರು, ಉಡುಪಿ ಜಿಲ್ಲೆಯ ಮಲ್ಪೆ, ಗೋವಾ ಮುಂತಾದ ಊರುಗಳ ಸುಮಾರು 80 ದೋಣಿಗಳು ದಡ ಸೇರಿವೆ.

ರಾಜ್ಯದ ಕರಾವಳಿಯಲ್ಲಿ ಇನ್ನೆರಡು ದಿನ ರಭಸದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಮೂರು ಮೀಟರ್‌ಗಳಷ್ಟು ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉಪ ಆದಾಯಕ್ಕೆ ಸಮಸ್ಯೆ: ಕೊರೊನಾ ಕಾರಣದಿಂದ ಈ ಬಾರಿ ಮೀನುಗಾರಿಕೆಗೆ ತೆರಳಿದ ದೋಣಿಗಳ ಸಂಖ್ಯೆ ಕಡಿಮೆಯಿದೆ. ಹೊರರಾಜ್ಯಗಳ ಕಾರ್ಮಿಕರ ಕೊರತೆಯೂ ಇದಕ್ಕೆ ಮುಖ್ಯ ಕಾರಣವಾಗಿದೆ. ಹವಾಮಾನ ವೈಪರೀತ್ಯವಾದಾಗ ನೂರಾರು ದೋಣಿಗಳು ಬಂದರಿನಲ್ಲಿ ಲಂಗರು ಹಾಕುತ್ತಿದ್ದವು.

ಕಳೆದ ವರ್ಷ 200ಕ್ಕೂ ಹೆಚ್ಚು ದೋಣಿಗಳು ದಡ ಸೇರಿದ್ದವು. ಇದರಿಂದ ಬಂದರಿನಲ್ಲಿ ಕೆಲಸ ಮಾಡುವ ತಾಂತ್ರಿಕ ಪರಿಣಿತರಿಗೆ, ಕೂಲಿ ಕಾರ್ಮಿಕರಿಗೆ, ಸುತ್ತಮುತ್ತಲಿನ ಅಂಗಡಿಗಳಿಗೆ ಸ್ವಲ್ಪ ಆದಾಯ ಸಿಗುತ್ತಿತ್ತು. ಆದರೆ, ಈ ಬಾರಿ ಅವುಗಳಿಗೆ ಸಮಸ್ಯೆಯಾಗಿದೆ. ಇದರಿಂದಾಗಿ ಸ್ಥಳೀಯರಿಗೂ ಕೆಲಸವಿಲ್ಲದಂತಾಗಿದೆ ಎಂದು ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ ಬೇಸರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು