ಮಲೆನಾಡಿನ ಕ್ರೀಡೆ: ಮೀನು ಹಿಡಿಯುವ ಆಟ ಕೆರೆ ಬೇಟೆ

ಮಂಗಳವಾರ, ಜೂಲೈ 23, 2019
25 °C

ಮಲೆನಾಡಿನ ಕ್ರೀಡೆ: ಮೀನು ಹಿಡಿಯುವ ಆಟ ಕೆರೆ ಬೇಟೆ

Published:
Updated:
Prajavani

ಸಿದ್ದಾಪುರ: ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಕೆರೆ ಬೇಟೆ, ಕೇವಲ ಮೀನು ಹಿಡಿಯುವ ಕಾಯಕ ಅಲ್ಲ. ಅದಕ್ಕೆ  ಕ್ರೀಡೆಯ ರೂಪವೂ ಇದೆ.

ಮಲೆನಾಡಿನಲ್ಲಿ ಗಾಳ ಹಾಕಿ ಮೀನು ಹಿಡಿಯುವುದು ಹಲವರ ನೆಚ್ಚಿನ ಹವ್ಯಾಸ. ಅದರೊಂದಿಗೆ ಮೀನು ಪ್ರಿಯರ ಹಳ್ಳಿಗಳಲ್ಲಿ ಸಾಂಘಿಕವಾಗಿ ನಡೆಯುವ ಕೆರೆ ಬೇಟೆಯೂ ಅಷ್ಟೇ ರೋಚಕ. ಊರಿನ ಜನರೆಲ್ಲ ಕೆರೆಯಲ್ಲಿ ಇಳಿದು, ನೀರಿನಲ್ಲಿ ಮೀನುಗಳನ್ನು ಹುಡುಕಿ, ಹಿಡಿಯುವುದೇ ಕೆರೆ ಬೇಟೆ.

ಕೆರೆಗಳಲ್ಲಿ ನೀರಿನ ಪ್ರಮಾಣ ಅತ್ಯಂತ ಕಡಿಮೆ ಇರುವ ಮೇ ತಿಂಗಳ ಕೊನೆ ಅಥವಾ ಜೂನ್ ಮೊದಲ ವಾರ ಕೆರೆ ಬೇಟೆ ಆಯೋಜಿಸಲಾಗುತ್ತದೆ. ಕೆರೆ ಬೇಟೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಊರಿನ ಗ್ರಾಮ ಸಮಿತಿ ಶುಲ್ಕ ನಿಗದಿ ಮಾಡುತ್ತದೆ. ಈ ಶುಲ್ಕ ಪಾವತಿ ಮಾಡಿದ ನಂತರ ಕೆರೆಗಿಳಿಯುವ ವ್ಯಕ್ತಿ ಎಷ್ಟು ಬೇಕಾದರೂ ಮೀನು ಹಿಡಿಯಬಹುದು. ಕೆರೆ ಬೇಟೆಯಲ್ಲಿ ಸಂಗ್ರಹವಾದ ಶುಲ್ಕವನ್ನು ಕೆರೆಯ ಸುಧಾರಣೆಗೆ ಅಥವಾ ಊರಿನ ಅಭಿವೃದ್ಧಿಗೆ ಉಪಯೋಗಿಸುವುದು ವಾಡಿಕೆ.

ಒಬ್ಬ ವ್ಯಕ್ತಿಗೆ ಇಷ್ಟು ಶುಲ್ಕ ಅಥವಾ ಒಂದು ‘ಕೂಣಿ’ಗೆ (ಮೀನು ಹಿಡಿಯಲು ಬಳಕೆಯಾಗುವ ಬುಟ್ಟಿಯಂತಹ ಸಾಧನ) ಇಷ್ಟು ಎಂದು ಶುಲ್ಕ ನಿಗದಿ ಮಾಡುತ್ತಾರೆ.ಇದು ಸಾಮಾನ್ಯವಾದ ಕೆರೆ ಬೇಟೆಯ ನಿಯಮಾವಳಿ ಎಂದು ಹಳ್ಳಿಗರು ಹೇಳುತ್ತಾರೆ.

‘ಕೆರೆ ಬೇಟೆ ಮೀನು ಬೇಟೆಯ ಒಂದು ವಿಧಾನ. ಆದರೂ ಅದೊಂದು ಕ್ರೀಡೆಯೂ ಹೌದು. ಈಗ ಹಳ್ಳಿಗಳಲ್ಲಿ ಸಾಂಪ್ರದಾಯಿಕ ಕೆರೆ ಬೇಟೆ ಕಡಿಮೆಯಾಗಿದೆ. ಹಿಂದಿನ ಕಾಲದಲ್ಲಿ ನಡೆಯುತ್ತಿದ್ದಂತಹ ರೀತಿಯ ಕೆರೆ ಬೇಟೆ ಈಗ ಕಾಣುವುದಿಲ್ಲ. ಈಗಲೂ ಕೆರೆ ಬೇಟೆ ಸಾಗರ (ಶಿವಮೊಗ್ಗ ಜಿಲ್ಲೆ) ತಾಲ್ಲೂಕಿನಲ್ಲಿ ಅದ್ಧೂರಿಯಾಗಿ ನಡೆಯುತ್ತದೆ. ಅಲ್ಲಿ ನಡೆಯುವ ಒಂದು ಕೆರೆಬೇಟೆಯಲ್ಲಿ 500 ಜನ ಸೇರುವುದೂ ಉಂಟು’ ಎನ್ನುತ್ತಾರೆ ಪತ್ರಕರ್ತ ಕನ್ನೇಶ ಕೋಲಸಿರ್ಸಿ.

ಬದಲಾದ ‘ಬೇಟೆ’ಯ ಸ್ವರೂ‍ಪ: ಈಗ ಹಳ್ಳಿಗಳಲ್ಲಿ ಕೆರೆ ಬೇಟೆಯ ಸ್ವರೂಪವೂ ಬದಲಾಗಿದೆ. ಸ್ಥಳೀಯ ಆಡಳಿತ ಕೆರೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವುದೂ ಉಂಟು. ಅವರಿಂದ ಕೆರೆಯನ್ನು ಗುತ್ತಿಗೆ ಪಡೆದವರು ಮೀನು ಹಿಡಿಸುವ ಸಂದರ್ಭ ಕೆರೆಬೇಟೆಯಂತೆ ಕಂಡು ಬರುತ್ತದೆ. ಆದರೆ,  ಅದು ಸಾಂಪ್ರದಾಯಿಕ ಕೆರೆ ಬೇಟೆ ಅಲ್ಲ ಎಂಬುದು ಗ್ರಾಮೀಣ ಜನರ ಅಭಿಪ್ರಾಯ.

ಸಿದ್ದಾಪುರ ತಾಲ್ಲೂಕಿನ ಬೇಡ್ಕಣಿಯಲ್ಲಿ ಇತ್ತೀಚೆಗೆ ಕೆರೆಯ ಗುತ್ತಿಗೆದಾರರು ಮೀನು ಹಿಡಿಸಿದರು. ಆ ಸಂದರ್ಭದಲ್ಲಿ ಏಳು ದೊಡ್ಡ ಮೀನುಗಳು ಸಿಕ್ಕವು. ಅವುಗಳಲ್ಲಿ 12 ಕೆ.ಜಿಯಿಂದ 17 ಕೆ.ಜಿ ಭಾರದ ಮೀನುಗಳಿದ್ದವು. ಅವುಗಳಲ್ಲಿ ಒಂದು ಮೀನಂತೂ 20 ಕೆ.ಜಿ ತೂಕವಿತ್ತಂತೆ! 

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !