ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ: ಸಚಿವ ಅಶೋಕ ಭರವಸೆ

ಮೂರು ಎಕರೆ ಜಮೀನಿಗೆ ಒಂದು ತಿಂಗಳಲ್ಲಿ ಮಂಜೂರಾತಿ
Last Updated 7 ಆಗಸ್ಟ್ 2020, 14:24 IST
ಅಕ್ಷರ ಗಾತ್ರ

ಹೊನ್ನಾವರ: ‘ಶರಾವತಿ ನದಿಯ ಪ್ರವಾಹದಿಂದ ಸಂತ್ರಸ್ತರಾದವರಿಗೆ ಮನೆ ನಿರ್ಮಿಸಲು ಪರ್ಯಾಯ ಜಮೀನನ್ನು ಗುರುತಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಪ್ರಸ್ತಾವ ಸಲ್ಲಿಸಿದ ಒಂದು ತಿಂಗಳ ಒಳಗೇ ಮಂಜೂರಾತಿ ನೀಡಲಾಗುವುದು’ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ತಾಲ್ಲೂಕಿನ ಚಿಕ್ಕನಕೋಡ ಹಾಗೂ ಕಡಗೇರಿ ಭಾಗದಲ್ಲಿ ಪ್ರವಾಹ ‍ಪೀಡಿತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘30 ವರ್ಷಗಳಿಂದಲೂ ಇಲ್ಲಿನ ಜನ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ತಮಗೆ ಶಾಶ್ವತ ನೆಲೆ ಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಇಲ್ಲಿರುವ ಸರ್ಕಾರದ ಮೂರು ಎಕರೆ ಜಮೀನನ್ನು ವಿಂಗಡಣೆ ಮಾಡಿ ನಿವೇಶನಗಳನ್ನು ಸಂತ್ರಸ್ತರಿಗೆ ಕೊಡಲು ಪ್ರಸ್ತಾವ ಕಳುಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಅದಕ್ಕೆ ತಕ್ಷಣವೇ ಮಂಜೂರಾತಿ ಕೊಡುವುದಾಗಿಯೂ ಹೇಳಿದ್ದೇನೆ’ ಎಂದು ಭರವಸೆ ನೀಡಿದರು.

ಕಳೆದ ಬಾರಿ ನೆರೆಯಿಂದ ಸಂತ್ರಸ್ತರಾದ ಕೆಲವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಸುದ್ದಿಗಾರರು ಗಮನ ಸೆಳೆದಾಗ, ‘ಅರಣ್ಯ ಪ್ರದೇಶದಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಮನೆ ನಿರ್ಮಿಸುತ್ತಿರುವವರು ಮೊದಲ ಹಂತದ ಕಾಮಗಾರಿ ಆದ ಬಳಿಕ ಪರಿಹಾರದ ಎರಡನೇ ಕಂತು ತೆಗೆದುಕೊಳ್ಳಬೇಕು. ಎರಡನೇ ಕಂತು ತೆಗೆದುಕೊಂಡವರು ಮೂರನೇ ಕಂತು ಪಡೆಯಬೇಕು. ಈ ಕಾರಣಕ್ಕಾಗಿಯೇ ರಾಜ್ಯ ಸರ್ಕಾರವು ಗುರುವಾರ ₹340 ಕೋಟಿ ಬಿಡುಗಡೆ ಮಾಡದೆ’ ಎಂದು ಮಾಹಿತಿ ನೀಡಿದರು.

‘ಕಡಲ್ಕೊರೆತ ತಡೆಯಲು ತಡೆಗೋಡೆ ನಿರ್ಮಿಸುವ ನಿಟ್ಟಿನಲ್ಲಿ ಅಂದಾಜುಪಟ್ಟಿ ಕಳುಹಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಪ್ರವಾಹ ಸಂದರ್ಭದ ಕಾಮಗಾರಿಗಳಾಗಿ ಕೇಂದ್ರ ಸರ್ಕಾರವು ಈ ಬಾರಿ ₹310 ಕೋಟಿ ಬಿಡುಗಡೆ ಮಾಡಿದೆ. ಕಳೆದ ಸಲ ₹110 ಕೋಟಿ ನೀಡಿತ್ತು. ಹಾಗಾಗಿ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ’ ಎಂದರು.

ಪರಿಹಾರ ಕೇಂದ್ರ

‘ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾಗುವವರಿಗೆ ₹10 ಕೋಟಿ ವೆಚ್ಚದಲ್ಲಿ ಶಾಶ್ವತ ಪರಿಹಾರ ಕೇಂದ್ರಗಳನ್ನು ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

‘ಈ ಸಂಬಂಧ ಒಂದು ತಿಂಗಳಲ್ಲಿ ಅನುಮೋದನೆ ಕೊಡಲಾಗುವುದು. ಪರಿಹಾರ ಕೇಂದ್ರದಲ್ಲಿ ಎಲ್ಲ ವ್ಯವಸ್ಥೆ ಇರುವಂತೆ ವಿನ್ಯಾಸ ಮಾಡಲಾಗುವುದು. ನೆರೆ ಸಂತ್ರಸ್ತರಿಗೆ ಪರಿಹಾರ ಸಂಬಂಧ ಜಿಲ್ಲಾಧಿಕಾರಿ ಪಿ.ಡಿ ಖಾತೆಯಲ್ಲಿ ಹಣವಿದೆ. ಹೆಚ್ಚುವರಿಯಾಗಿ ₹5 ಕೋಟಿ ಬಿಡುಗಡೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ₹5 ಲಕ್ಷ, ಮನೆ ಭಾಗಶಃ ಕುಸಿದವರಿಗೆ ₹3 ಲಕ್ಷ, ಮನೆಗೆ ನೀರು ನುಗ್ಗಿ ಹಾನಿಯಾದರೆ ₹10 ಸಾವಿರ ಪರಿಹಾರ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ‘ಜಿಲ್ಲೆಯಲ್ಲಿ ವಾಡಿಕೆಯಂತೆ ಪೂರ್ಣಾವಧಿ ಮಳೆ ಇನ್ನೂ ಆಗಿಲ್ಲ. ಮುಂಗಾರು ಅವಧಿಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಅಂಕೋಲಾ ತಾಲ್ಲೂಕಿನ ಬೆಳಸೆ, ಅಗಸೂರು, ಸುಂಕಸಾಳ, ಡೊಂಗ್ರಿ ಸುತ್ತಮುತ್ತ ಪ್ರವಾಹದಿಂದ ಆಗಿರುವ ತೊಂದರೆಯ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಲ್ಲಿದ್ದರೂ ದೂರವಾಣಿ ಮುಖಾಂತರ ನಮ್ಮ ಜೊತೆ ಮಾತನಾಡಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ’ ಎಂದರು.

ಶಾಸಕರಾದ ಸುನೀಲ ನಾಯ್ಕ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಇದ್ದರು.

***

ಪರಿಹಾರ ಕಾಮಗಾರಿಗಳ ಸಂದರ್ಭದಲ್ಲಿ ಅಧಿಕಾರಿಗಳು ವಿನಾ ಕಾರಣ ರಜೆ ಹೋಗುವಂತಿಲ್ಲ. ತಪ್ಪಿದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳಿಸಲೂ ಸರ್ಕಾರ ಹಿಂಜರಿಯುವುದಿಲ್ಲ.

- ಆರ್.ಅಶೋಕ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT