ಶನಿವಾರ, ಸೆಪ್ಟೆಂಬರ್ 26, 2020
24 °C
ರುಚಿಯಾದ ಕಾಡಣಬೆ, ಎಳೆ ಬಿದಿರು ಲಗ್ಗೆ

ಮಾರುಕಟ್ಟೆಯಲ್ಲಿ ‘ಕಾಡಿನ ಫಸಲಿನ’ ಆಕರ್ಷಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಮಳೆಗಾಲದ ಮಧ್ಯಭಾಗ ಬರುತ್ತಿದ್ದಂತೆ ಜಿಲ್ಲೆಯಲ್ಲಿ ದೇಸಿ ತರಕಾರಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ವ್ಯಾಪಾರಕ್ಕೆ ಕುಳಿತ ಮಹಿಳೆಯರ ಬಳಿ ಕಾಡಿನ ಅಣಬೆ, ಎಳೆ ಬಿದಿರು, ಅಮಟೆಕಾಯಿ, ಬೇರಲಸು ಮುಂತಾದ ತರಹೇವಾರಿ ತರಕಾರಿಗಳು ಆಕರ್ಷಿಸುತ್ತವೆ.

ದಟ್ಟವಾದ, ಬಿಸಿಲು ಹೆಚ್ಚಾಗಿ ಬೀಳದ ಅರಣ್ಯ ಪ್ರದೇಶದಲ್ಲಿ ತನ್ನಿಂತಾನೇ ಬೆಳೆಯುವ ಕಾಡು ಅಣಬೆಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಅವುಗಳನ್ನು ಕಷ್ಟಪಟ್ಟು ಸಂಗ್ರಹಿಸಿ ತಂದು ಮಾರಾಟ ಮಾಡುವುದು ಮಹಿಳೆಯರಿಗೆ ಒಂದಷ್ಟು ಆದಾಯವನ್ನೂ ತಂದುಕೊಡುತ್ತದೆ.

ಅಣಬೆಯ ಗಾತ್ರಕ್ಕೆ ಅನುಗುಣವಾಗಿ ದರ ನಿಗದಿ ಮಾಡಲಾಗುತ್ತದೆ. ಭರಪೂರ ಪೌಷ್ಟಿಕಾಂಶಗಳಿಂದ ಕೂಡಿರುವ ಈ ಅಣಬೆಯ ಪದಾರ್ಥ ಬಹಳ ರುಚಿಕರವಾಗಿರುತ್ತದೆ ಎನ್ನುತ್ತಾರೆ ನಗರದ ರಮೇಶ ನಾಯ್ಕ.

100 ಅಣಬೆಗಳಿರುವ ಒಂದು ಪೊಟ್ಟಣಕ್ಕೆ ₹ 400ರಿಂದ ₹ 800ರವರೆಗೂ ದರವಿದೆ. ಅವು ಹುಟ್ಟಿ ಒಂದೆರಡು ದಿನಗಳಲ್ಲಿ ಹಾಳಾಗುತ್ತವೆ. ಅವುಗಳನ್ನು ಹುಡುಕಿ ತರುವುದೇ ದೊಡ್ಡ ಕೆಲಸ ಎನ್ನುತ್ತಾರೆ ಬೀದಿ ಬದಿ ವ್ಯಾಪಾರಿ ಸುವರ್ಣಾ ಶಂಕರ ನಾಯ್ಕ.

ಋತುಮಾನಕ್ಕೆ ಅನುಗುಣವಾಗಿ ಸಿಗುವ ತರಕಾರಿಗಳನ್ನು ಇಷ್ಟಪಡುವವರ ನಾಲಿಗೆ ರುಚಿ ತಣಿಸುವ ಎಳೆಯ ಬಿದಿರಿನ ಮೆಳೆಗಳೂ ವಿವಿಧೆಡೆ ಮಾರಾಟಕ್ಕೆ ಇಡಲಾಗಿದೆ. ಬಿದಿರಿನ ಹಿಂಡಿನಿಂದ ಅವುಗಳನ್ನು ಮುರಿದು ತರುವುದು ಕೂಡ ಕಷ್ಟದ ಕೆಲಸ ಎನ್ನುತ್ತಾರೆ ಅವರು.

‘ಈ ಬಾರಿ ಬಿದಿರಿನ ಒಂದು ಮೆಳೆಯನ್ನು ₹ 125ರಿಂದ ₹ 150ರಂತೆ ಮಾರಾಟ ಮಾಡಲಾಗುತ್ತಿದೆ. ಪಲ್ಯ, ಸಾಂಬಾರು ಸಿದ್ಧಪಡಿಸಲು ಇದಕ್ಕೆ ಭಾರಿ ಬೇಡಿಕೆಯಿದೆ. ಇದರ ಉಪ್ಪಿನಕಾಯಿ ತಯಾರಿಸುವವರು ಗಜಲಿಂಬೆ ಕಾಯಿಯನ್ನೂ ಮಿಶ್ರಣ ಮಾಡುತ್ತಾರೆ. ಅದೂ ಮಾರುಕಟ್ಟೆಯಲ್ಲಿದ್ದು ಒಂದಕ್ಕೆ ₹ 50ರಂತೆ ಮಾರಾಟವಾಗುತ್ತಿದೆ’ ಎಂದರು.

ಇದೇ ರೀತಿ ವಿವಿಧ ರೀತಿಯ ಸಾರು, ಸಾಂಬಾರು, ಗೊಜ್ಜುಗಳಿಗೆ ಮಿಶ್ರಣ ಮಾಡಲು ಬಳಸುವ ಅಮಟೆಕಾಯಿಯೂ ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿವೆ. ಉಳಿದಂತೆ, ಪಲ್ಯ, ಸಾಂಬಾರು, ಬಜ್ಜಿ, ಚಿಪ್ಸ್‌ಗೆ ಪ್ರಸಿದ್ಧವಾಗಿರುವ ಬೇರಲಸು ದೊಡ್ಡ ಗಾತ್ರದ್ದು ₹ 100ಕ್ಕೆ ಒಂದರಂತೆ ಮಾರಾಟವಾಗುತ್ತಿದೆ.

‘ಈ ಬಾರಿ ಕಳೆದ ವರ್ಷಕ್ಕಿಂತ ದರ ಸ್ವಲ್ಪ ಹೆಚ್ಚಿದೆ. ಆದರೆ, ಇವೆಲ್ಲ ಮಳೆಗಾಲದಲ್ಲಿ ಮಾತ್ರ ಸಿಗುವ ತರಕಾರಿ ಎಂಬ ಕಾರಣಕ್ಕೆ ಖರೀದಿಸಿ ಅಡುಗೆ ಮಾಡಿ ಸೇವಿಸಿ ಸಂಭ್ರಮಿಸುತ್ತೇವೆ’ ಎನ್ನುತ್ತಾರೆ ಗ್ರಾಹಕಿ ಸಂಯುಕ್ತಾ ರಾವ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು