ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಕೇಂದ್ರೀಯ ಸೇವೆಗೆ ನಾಲ್ವರ ಲಗ್ಗೆ; ಯುವಕರಿಂದ ಗಮನಾರ್ಹ ಸಾಧನೆ

ಯುಪಿಎಸ್‌ಸಿ ಫಲಿತಾಂಶ ಪ್ರಕಟ
Last Updated 4 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕಾರವಾರ: ಈ ಬಾರಿಯ ಯು.ಪಿ.ಎಸ್.ಸಿ ‍ಪ‍ರೀಕ್ಷಾ ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ನಾಲ್ವರು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಕೇಂದ್ರ ಲೋಕಸೇವಾ ಆಯೋಗದ (ಯು.ಪಿ.ಎಸ್.ಸಿ) ಕರ್ತವ್ಯಕ್ಕೆ ಸಜ್ಜಾಗಿದ್ದಾರೆ.

ಎಸ್.ಸಚಿನ್ ಹಿರೇಮಠ:‘ನಮ್ಮ ಮಗ ಮೂರನೇ ಪ್ರಯತ್ನದಲ್ಲಿ ಯು.ಪಿ.ಎಸ್.ಸಿ ಉತ್ತೀರ್ಣನಾದ. ಅವನ ಶ್ರಮಕ್ಕೆ ತಕ್ಕುದಾದ ಪ್ರತಿಫಲ ಸಿಕ್ಕಿದೆ. ಈ ಬಾರಿ ಅವನಿಗೆ ರ‍್ಯಾಂಕ್ ಬರುವ ದೃಢವಾದ ವಿಶ್ವಾಸವಿತ್ತು’ ಎಂದು ಮುಗುಳ್ನಗುತ್ತ ಹೇಳಿದವರು 213ನೇ ರ‍್ಯಾಂಕ್ ಪಡೆದುಕೊಂಡ, ದಾಂಡೇಲಿಯ ಎಸ್.ಸಚಿನ್ ಹಿರೇಮಠ ಅವರ ತಾಯಿ ಶರ್ಮಿಳಾ ನಾಯಕ.

ಮೆಕ್ಯಾನಿಕಲ್ ಎಂನಿಯರಿಂಗ್ ಪದವೀಧರ ಸಚಿನ್, ಕೇಂದ್ರೀಯ ಆಡಳಿತಾತ್ಮಕ ಹುದ್ದೆಯ ಗುರಿ ಹೊಂದಿ ಮೂರು ವರ್ಷಗಳಿಂದ ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದರು.

ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ ಅವರು, ಕಂಪನಿಯೊಂದರಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಆರು ತಿಂಗಳಲ್ಲೇ ಅದಕ್ಕೆ ರಾಜೀನಾಮೆ ನೀಡಿ ಯು.ಪಿ.ಎಸ್.ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡರು.

ಪ್ರಸ್ತುತ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್.ಎ.ಐ) ಉಪ ನಿರ್ದೇಶಕರಾಗಿ ಕೊಲ್ಕತ್ತದಲ್ಲಿ ಕೆಲಸ ಮಾಡುತ್ತಿದ್ದಾರೆ. ತಂದೆ ಶಿವಾನಂದ ಎಚ್.ಎಂ ಹಾಗೂ ತಾಯಿ ಶರ್ಮಿಳಾ ನಾಯಕ ಇಬ್ಬರೂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ.

ಹೇಮಾ ನಾಯಕ:ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗೆ ಗ್ರಾಮದವರಾದ ಹೇಮಾ ನಾಯಕ, 225ನೇ ರ‍್ಯಾಂಕ್ ಗಳಿಸಿದ್ದಾರೆ. ತಂದೆಶಾಂತಾರಾಮ ಬಿ. ನಾಯಕ ನಿವೃತ್ತ ಶಿಕ್ಷಕ. ತಾಯಿ ರಾಜಮ್ಮ ನಾಯಕ ಅಂಕೋಲಾ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

‘ನಾನು ಯು.ಪಿ.ಎಸ್‌.ಸಿ ಪರೀಕ್ಷೆಗೆ ಅಧ್ಯಯನಕ್ಕೆಂದೇ ವಿಶೇಷ ವೇಳಾಪಟ್ಟಿಯೇನೂ ಸಿದ್ಧಪಡಿಸಿಕೊಂಡಿರಲಿಲ್ಲ. ಯಾವುದರಲ್ಲಿ ಆಸಕ್ತಿ ಕಾಣುತ್ತಿತ್ತೋ ಅದನ್ನು ಓದುತ್ತಿದ್ದೆ. ಎರಡನೇ ಸಂದರ್ಶನದಲ್ಲೇ ಉತ್ತೀರ್ಣಳಾದೆ. ಆಸಕ್ತಿ ಬಂದಾಗ ಇಡೀ ದಿನ ಓದುತ್ತಿದ್ದೆ. ಕೆಲವು ದಿನ ಮಧ್ಯೆ ಮಧ್ಯೆ ಬಿಡುವು ಮಾಡಿಕೊಳ್ಳುತ್ತಿದ್ದೆ’ ಎಂದು ಹೇಮಾ ‘ಪ್ರಜಾವಾಣಿ’ ಜೊತೆ ಸಂತಸ ವ್ಯಕ್ತಪಡಿಸಿದರು.

ಪಾಲಕರು ಬೋಧನೆಯ ಕ್ಷೇತ್ರದಲ್ಲಿ ಇದ್ದ ಕಾರಣ ಹೇಮಾ ಅವರೂ ಅದೇ ವಿಚಾರದಲ್ಲಿ ಆಸಕ್ತರಾಗಿದ್ದರಂತೆ. ಆದರೆ, ಮೈಸೂರು ವಿಶ್ವವಿದ್ಯಾಲಯದಲ್ಲಿ ಭೌತ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾಗ ಆಡಳಿತಾತ್ಮಕ ಹುದ್ದೆಗಳತ್ತ ಆಕರ್ಷಿತರಾಗಿ ಅಧ್ಯಯನದಲ್ಲಿ ತೊಡಗಿಕೊಂಡರು.

‘ಅಂಕೋಲಾದ ಜಿ.ಸಿ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದಾಗ ಪಟ್ಟಣದ ಶ್ರೀರಾಮ ಸ್ಟಡಿ ಸರ್ಕಲ್‌ಗೆ ಪ್ರತಿ ಭಾನುವಾರ ಹೋಗುತ್ತಿದ್ದೆ. ಅಲ್ಲಿ ನಡೆಯುತ್ತಿದ್ದ ತರಗತಿಗಳಲ್ಲಿ ಭಾಗವಹಿಸಿದ್ದಾಗ ಆಡಳಿತಾತ್ಮಕ ವಿಚಾರಗಳ ಬಗ್ಗೆ ಆಸಕ್ತಿ ಬೆಳೆದಿತ್ತು. ನಂತರ ಬೆಂಗಳೂರಿನಲ್ಲಿ ಸಿದ್ಧತೆ ಮಾಡಿಕೊಂಡೆ’ ಎಂದರು.

‘ಉನ್ನತ ಶಿಕ್ಷಣ ಒದಗಿಸಿ’:‘ಜಿಲ್ಲೆಯಲ್ಲಿ ವೃತ್ತಿಪರ ಕೋರ್ಸ್‌ಗಳನ್ನೇ ಅಧ್ಯಯನ ಮಾಡುವಂತೆ ಪಾಲಕರು ಒತ್ತಾಯಿಸುತ್ತಾರೆ. ಅದರಿಂದ ಮಕ್ಕಳಿಗೆ ತಮ್ಮ ಆಸಕ್ತಿಯ ವಿಷಯದಲ್ಲಿ ಮುಂದುವರಿಯಲು ಕಷ್ಟವಾಗ್ತಿದೆ. ಈ ಮನಸ್ಥಿತಿ ಬದಲಾಗಬೇಕು. ನಮ್ಮ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಿ.ಯು. ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದರೂ ಉನ್ನತ ಅಧ್ಯಯನಕ್ಕೆ ಇಲ್ಲಿ ಅವಕಾಶವಿಲ್ಲ. ಅದನ್ನು ಒದಗಿಸಿಕೊಡಬೇಕು’ ಎನ್ನುವುದು ಹೇಮಾ ಅವರ ಅನಿಸಿಕೆ.

ಬಿ.ಕೃತಿ:ಕುಮಟಾ ತಾಲ್ಲೂಕಿನ ಕತಗಾಲದ, ಈಗ ಬೆಂಗಳೂರಿನಲ್ಲಿರುವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಭಾಸ್ಕರ ವಿಷ್ಣು ಭಟ್ಟ ಹಾಗೂ ಅಲಕಾ ಭಟ್ಟ ದಂಪತಿಯ ಪುತ್ರಿ ಬಿ.ಕೃತಿ 297 ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಎಂಜಿನಿಯರಿಂಗ್ ಪದವೀಧರೆಯಾಗಿರುವ ಅವರು, ಎರಡು ವರ್ಷ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ವೆಂಕಟ್ರಮಣ ಕವಡಿಕೇರಿ:ಯಲ್ಲಾಪುರ ತಾಲ್ಲೂಕಿನ ಕವಡಿಕೇರಿಯ ವೆಂಕಟ್ರಮಣ, ಯಾವುದೇ ತರಬೇತಿ ಪಡೆದುಕೊಳ್ಳದೇ 363ನೇ ರ‍್ಯಾಂಕ್ ಪಡದ ಸಾಧನೆ ಮಾಡಿದ್ದಾರೆ. ಅವರು ತಮ್ಮ ಐದನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ.

ಬೆಂಗಳೂರಿನ ಬಿ.ಎಂ.ಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಅವರು, ಸದ್ಯ ಎಸ್.ಬಿ.ಐ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT