ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ರಚನೆಯಾಗಲಿವೆ 14 ಕಂದಾಯ ಗ್ರಾಮಗಳು

ಸುದೀರ್ಘ ಪ್ರಕ್ರಿಯೆಗಳಿಗೆ ಹಂತ ಹಂತವಾಗಿ ಚಾಲನೆ
Last Updated 11 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ 14 ಹೊಸ ಕಂದಾಯ ಗ್ರಾಮಗಳ ರಚನೆಯ ಸುದೀರ್ಘ ಪ್ರಕ್ರಿಯೆಯು ಆರಂಭವಾಗಿದೆ. ಈಗಾಗಲೇ ಜಿಲ್ಲಾಡಳಿತದಿಂದ ಎರಡು ಪ್ರಾಥಮಿಕ ಅಧಿಸೂಚನೆಗಳು ಪ್ರಕಟವಾಗಿವೆ.

ಕಂದಾಯ ಸಚಿವ ಆರ್.ಅಶೋಕ್ ಅವರು ಏ.15ರಂದು ಅಂಕೋಲಾ ತಾಲ್ಲೂಕಿನ ಅಚವೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಹೊಸ ಗ್ರಾಮಗಳ ರಚನೆಯನ್ನು ಪ್ರಕಟಿಸಿದ್ದರು. ಒಟ್ಟು 23 ನೂತನ ಗ್ರಾಮಗಳ ರಚನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದರು. ಆದರೆ, ನಿಯಮಗಳ ಅನುಸಾರ ಸಾಧ್ಯಾಸಾಧ್ಯತೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅಂತಿಮವಾಗಿ 14 ಗ್ರಾಮಗಳ ರಚನೆಗೆ ಸಿದ್ಧತೆ ನಡೆಯುತ್ತಿದೆ.

ಉತ್ತರ ಕನ್ನಡದಲ್ಲಿ ನೂತನ ಗ್ರಾಮಗಳೆಂದು ಪರಿಗಣಿಸಲು ಗುರುತಿಸಲಾಗಿರುವ ಪ್ರದೇಶಗಳು ಪ್ರಮುಖವಾಗಿ ಹಳಿಯಾಳ ಮತ್ತು ಮುಂಡಗೋಡ ತಾಲ್ಲೂಕಿನಲ್ಲೇ ಇವೆ.

ಜನವಸತಿಯಿದ್ದರೂ ಗ್ರಾಮಗಳೆಂಬ ಮಾನ್ಯತೆ ಇಲ್ಲದ ಕಾರಣ, ಹಲವು ಹಳ್ಳಿಗಳಿಗೆ ಸರ್ಕಾರ ವಿವಿಧ ಸೌಕರ್ಯಗಳು ತಲುಪುತ್ತಿರಲಿಲ್ಲ. ಗ್ರಾಮಸ್ಥರಿಗೆ ತಮ್ಮ ವಾಸಸ್ಥಳದ ಹಕ್ಕುಪತ್ರಗಳನ್ನು ಪಡೆಯಲೂ ತೊಡಕಾಗಿತ್ತು. ಹಾಗಾಗಿ ತಮ್ಮ ಪ್ರದೇಶಗಳನ್ನೂ ಗ್ರಾಮಗಳೆಂದು ಪರಿಗಣಿಸುವಂತೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿಗಳು ಸಲ್ಲಿಕೆಯಾಗತ್ತಲೇ ಇದ್ದವು.

ಸರ್ಕಾರದ ಸುತ್ತೋಲೆಯ ಪ್ರಕಾರ, ಕನಿಷ್ಠ 10 ಮನೆಗಳಿರುವ ನಿರ್ದಿಷ್ಟ ಪ್ರದೇಶವನ್ನು ಕಂದಾಯ ಗ್ರಾಮವೆಂದು ಘೋಷಿಸಲು ಅವಕಾಶವಿದೆ. ಅಂತೆಯೇ, ಕನಿಷ್ಠ 50 ಜನಸಂಖ್ಯೆಯಿರುವ ಪ್ರದೇಶವನ್ನೂ ಪರಿಗಣಿಸಬಹುದು. ಈ ರೀತಿ ಪರಿವರ್ತನೆಯಾದ ಗ್ರಾಮಗಳ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ‘ಕಲಂ 94’ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ.

‘ಎಲ್ಲ ಮಾಹಿತಿ ಸಲ್ಲಿಕೆ’:

‘ಉತ್ತರ ಕನ್ನಡದಲ್ಲಿ 14 ನೂತನ ಕಂದಾಯ ಗ್ರಾಮಗಳನ್ನು ರಚಿಸುವ ಪ್ರಕ್ರಿಯೆಗಳು ಚುರುಕಾಗಿ ನಡೆಯುತ್ತಿವೆ. ಕಂದಾಯ ಗ್ರಾಮಗಳೆಂದು ಘೋಷಿಸಬೇಕಿರುವ ಜನವಸತಿ ಪ್ರದೇಶಗಳ ಸಂಪೂರ್ಣ ಸರ್ವೆ, ಪಹಣಿ ಮುಂತಾದ ದಾಖಲೆಗಳ ಬದಲಾವಣೆ, ಗ್ರಾಮಗಳ ಗಡಿ ಗುರುತು ಮುಂತಾದ ಎಲ್ಲ ಕಾರ್ಯಗಳು ಹಂತ ಹಂತವಾಗಿ ನಡೆಯುತ್ತಿವೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಗ್ರಾಮಗಳ ರಚನೆಯ ಸಂಬಂಧ ಜಿಲ್ಲಾಡಳಿತದಿಂದ ಬೇಕಾಗಿರುವ ಎಲ್ಲ ದಾಖಲೆಗಳನ್ನೂ ಈಗಾಗಲೇ ಸಲ್ಲಿಕೆ ಮಾಡಲಾಗಿದೆ. ಸರ್ಕಾರದ ಸೂಚನೆಯ ಅನುಸಾರ ಪ್ರಕ್ರಿಯೆಗಳು ಮುಂದುವರಿಯುತ್ತಿವೆ. ಇದೊಂದು ಸುದೀರ್ಘ ಪ್ರಕ್ರಿಯೆಯಾಗಿದ್ದು, ಪೂರ್ಣಗೊಳ್ಳಲು ಮತ್ತಷ್ಟು ದಿನಗಳು ಬೇಕಾಗುತ್ತವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT