ಗಾಂಧಿವನದ ತುಂಬ ಬಿಯರ್ ಬಾಟಲಿ ಚೂರು

ಶನಿವಾರ, ಮೇ 25, 2019
22 °C

ಗಾಂಧಿವನದ ತುಂಬ ಬಿಯರ್ ಬಾಟಲಿ ಚೂರು

Published:
Updated:
Prajavani

ಕಾರವಾರ: ಅದು ಗಾಂಧಿವನ. ಸುತ್ತಮುತ್ತಲಿನ ಬಡಾವಣೆಗಳ, ಶಾಲಾ ಕಾಲೇಜುಗಳು ಹುಡುಗರಿಗೆ ಆಟದ ಮೈದಾನ. ಆದರೆ, ಅಲ್ಲಿ ಕಾಲಿಡಬೇಕೆಂದರೆ ಒಡೆದ ಬಿಯರ್ ಬಾಟಲಿಗಳನ್ನು ಹೆಕ್ಕಿ ತೆಗೆಯಲೇಬೇಕು!

ಇದು ಕುಮಟಾ ಸಮೀಪದ ಕಡ್ಲೆಯ ಕಡಲ ತೀರದಲ್ಲಿರುವ ವಿಶಾಲ ಮೈದಾನದ ಸ್ಥಿತಿ. ಕುಡುಕರ ಹಾವಳಿಯಿಂದ ಇಲ್ಲಿ ಎಲ್ಲೆಂದರಲ್ಲಿ ಗಾಜಿನ ಬಾಟಲಿಗಳು ಕಾಣಸಿಗುತ್ತವೆ. ಸಂಜೆಯಾಗುತ್ತಿದ್ದಂತೆ ಗಾಳಿಮರದ ತೋಪಿನತ್ತ ಮದ್ಯಪಾನಿಗಳು ಒಬ್ಬೊಬ್ಬರಾಗಿ ಬರುತ್ತಾರೆ. ನಂತರ ಅಲ್ಲೇ ಕುಡಿದು ಬಾಟಲಿಗಳನ್ನು ಎತ್ತರಕ್ಕೆ ಎಸೆದು ಅದಕ್ಕೆ ಮತ್ತೊಂದು ಬಾಟಲಿ ಅಥವಾ ಕಲ್ಲಿನಿಂದ ಗುರಿಯಿಟ್ಟು ಹೊಡೆದ ಪುಡಿ ಮಾಡುತ್ತಾರೆ. ಆ ಚೂರುಗಳು ಮೈದಾನದಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳುತ್ತವೆ ಎಂದು ಸ್ಥಳೀಯರು ದೂರುತ್ತಾರೆ.

‘ಮೊದಲು ಹಿರಿಯರು ಕಡಲ ತೀರಕ್ಕೆ ನಿರಾತಂಕವಾಗಿ ಹೆಜ್ಜೆ ಹಾಕಬಹುದಿತ್ತು. ಮಕ್ಕಳು, ಮೊಮ್ಮಕ್ಕಳನ್ನು ಮರಳಿನ ಮೇಲೆ ಆಟವಾಡಲು ಬಿಡಬಹುದಿತ್ತು. ಆದರೆ, ಈಗ ಆ ವಾತಾವರಣವಿಲ್ಲ. ಎಲ್ಲೆಂದರಲ್ಲಿ ಗಾಜಿನ ಬಾಟಲಿಗಳ ಚೂರುಗಳು ಬಿದ್ದಿರುತ್ತವೆ. ಒಂದೊಂದು ಹೆಜ್ಜೆ ಹಾಕಲೂ ಯೋಚಿಸಬೇಕಿದೆ. ಬಾಟಲಿಗಳನ್ನು ಒಡೆದು ಬಿಸಾಡುವುದನ್ನು ನಾನೇ ಕಂಡಿದ್ದೇನೆ’ ಎನ್ನುತ್ತಾರೆ ಕುಮಟಾದ ನಿವಾಸಿ ವಸಂತ ನಾಯ್ಕ.

‘ಗಾಂಧಿವನ ನಿತ್ಯವೂ ನೂರಾರು ಮಕ್ಕಳು ಸೇರುವ ಸ್ಥಳ. ಅಲ್ಲಿ ಅವರು ಆಡಬೇಕು ಎಂದರೆ ಬಾಟಲಿಗಳನ್ನು ಒಂದೆಡೆ ರಾಶಿ ಹಾಕಿ ನಂತರ ಮೈದಾನಕ್ಕೆ ಕಾಲಿಡಬೇಕಿದೆ. ಈ ಮೈದಾನ ಶಾಲಾ, ಕಾಲೇಜುಗಳ ಮಟ್ಟದ ಯಾವುದೇ ಕ್ರೀಡಾ ಚಟುವಟಿಕೆಗಳಿಗೆ, ವಿವಿಧ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತದೆ. ಇಷ್ಟೊಂದು ಸುಂದರವಾದ ಮೈದಾನ ಸಮೀಪದಲ್ಲಿ ಎಲ್ಲೂ ಇಲ್ಲ. ಆದರೆ, ಕುಡುಕರ ಹಾವಳಿಯಿಂದ ಅದರ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ’ ಎಂಬ ಬೇಸರ ಅವರದ್ದು.

‘ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಅದರಿಂದ ಪರಿಸರಕ್ಕೆ ಆಗುತ್ತಿರುವ ಸಮಸ್ಯೆಯನ್ನು ಬಿಂಬಿಸುತ್ತಾರೆ. ಆದರೆ, ಈ ರೀತಿ ಗಾಜಿನ ಬಾಟಲಿಗಳನ್ನು ಒಡೆದು ಚೂರು ಚೂರು ಮಾಡುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಅಬಕಾರಿ ಇಲಾಖೆ ಅಧಿಕಾರಿಗಳೂ ನಿರ್ಲಕ್ಷ್ಯ ವಹಿಸುತ್ತಾರೆ. ಬಾಡ ದೇವಸ್ಥಾನದ ಸಮೀಪದ ರಸ್ತೆಯಲ್ಲೂ ಇದೇ ರೀತಿಯ ಚಿತ್ರಣವಿದೆ. ಇದನ್ನು ತಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂಬುದು ಅವರ ಆಗ್ರಹವಾಗಿದೆ.

‘ಇಂತಹ ಸಮಸ್ಯೆಗಳ ಬಗ್ಗೆ ಯಾರೂ ಹೋರಾಟಕ್ಕೆ ಮುಂದಾಗುವುದಿಲ್ಲ. ಇದರಿಂದ ತಮಗೇನು ಲಾಭ ಎಂದೇ ಲೆಕ್ಕ ಹಾಕುತ್ತಾರೆ. ನಾಳೆ ಅವರ ಮಕ್ಕಳಿಗೇ ಇದರಿಂದ ಸಮಸ್ಯೆಯಾದಾಗ ಪಶ್ಚಾತ್ತಾಪ ಪಡುತ್ತಾರೆ. ಆದ್ದರಿಂದ ನಮ್ಮೆಲ್ಲರಲ್ಲೂ ಜಾಗೃತಿ ಮೂಡುವುದು ಬಹುಮುಖ್ಯ’ ಎಂಬಬ ಅಭಿಪ್ರಾಯ ಅವರದ್ದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !