ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ತಿಂಗಳ ಬಳಿಕ ಗೋವಾ ವಿಧಿಸಿದ್ದ ಸಂಚಾರ ನಿರ್ಬಂಧ ತೆರವು

Last Updated 1 ಸೆಪ್ಟೆಂಬರ್ 2020, 11:36 IST
ಅಕ್ಷರ ಗಾತ್ರ

ಕಾರವಾರ: ಐದು ತಿಂಗಳ ಅಂತರದ ಬಳಿಕ ಮಂಗಳವಾರದಿಂದ ಗೋವಾ ರಾಜ್ಯವು ತನ್ನ ಗಡಿಗಳನ್ನು ಇತರ ರಾಜ್ಯಗಳ ‍ಪ್ರಯಾಣಿಕರಿಗೆ ಮುಕ್ತವಾಗಿಸಿದೆ. ಕೊರೊನಾ ನೆಪದಲ್ಲಿ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳನ್ನು ಅಲ್ಲಿನ ಸರ್ಕಾರವು ಹಿಂಪಡೆದಿದೆ.

ಕರ್ನಾಟಕ– ಗೋವಾ ಗಡಿಯಲ್ಲಿರುವ ಮಾಜಾಳಿಯ ಚೆಕ್‌ಪೋಸ್ಟ್‌ನಲ್ಲಿ ಆ.31ರವರೆಗೆ ವಿವಿಧ ಷರತ್ತುಗಳನ್ನು ವಿಧಿಸಿ ಹೊರರಾಜ್ಯಗಳ ಪ್ರಯಾಣಿಕರನ್ನು ಒಳ ಬಿಡಲಾಗುತ್ತಿತ್ತು. ಕೇಂದ್ರ ಸರ್ಕಾರವು ಅಂತರರಾಜ್ಯ ಗಡಿಗಳನ್ನು ಮುಕ್ತವಾಗಿ ಇಡುವಂತೆ ರಾಜ್ಯಗಳಿಗೆ ಆ.22ರಂದು ಆದೇಶಿಸಿತ್ತು. ಅದರಂತೆ ಆ.24ರಿಂದ ಕರ್ನಾಟಕವು ತನ್ನೆಲ್ಲ ಅಂತರರಾಜ್ಯ ಗಡಿಗಳನ್ನೂ ಮುಕ್ತವಾಗಿಸಿತ್ತು. ಆದರೂ ಗೋವಾ ಈ ಆದೇಶವನ್ನು ಪಾಲಿಸಿರಲಿಲ್ಲ. ಇದು ಸ್ಥಳೀಯರ ಹಾಗೂ ಕಾರವಾರದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ತನ್ನ ರಾಜ್ಯದೊಳಗೆ ಬರುವವರು ಕೋವಿಡ್ 19 ನೆಗೆಟಿವ್ ತರಬೇಕು. ಇದಾಗಿದಿದ್ದರೆ 14 ದಿನ ಹೋಂ ಕ್ವಾರಂಟೈನ್ ಆಗಬೇಕು. ಒಂದುವೇಳೆ, ಈ ಎರಡೂ ಷರತ್ತುಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ ₹ 2 ಸಾವಿರ ಪಾವತಿಸಿ ಗಂಟಲುದ್ರವದ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಿತ್ತು. ಗೋವಾದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕಾರವಾರ, ಅಂಕೋಲಾ ಭಾಗದ ಜನರಿಗೆ ಈ ನಿಯಮದಿಂದಾಗಿ ಭಾರಿ ತೊಂದರೆಯಾಯಿತು.

ತನ್ನ ನಿಯಮಗಳನ್ನು ಹಿಂಪಡೆದು ಮುಕ್ತ ಸಂಚಾರಕ್ಕೆ ಅವಕಾಶ ನೀಡುವಂತೆ ವಿವಿಧ ಸಂಘಟನೆಗಳೂ ಗೋವಾ ಸರ್ಕಾರವನ್ನು ಆಗ್ರಹಿಸಿದ್ದರು. ಮಾಜಾಳಿಯಲ್ಲಿ ಆ.29ರಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆಯನ್ನೂ ನಡೆಸಿದ್ದರು.

ಈ ನಡುವೆ, ಶಾಸಕಿ ರೂಪಾಲಿ ನಾಯ್ಕ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಮಸ್ಯೆಯನ್ನು ವಿವರಿಸಿದ್ದರು. ಇದಕ್ಕೆ ಸ್ಪಂದಿಸಿದ ಸಾವಂತ, ಕೇಂದ್ರ ಸರ್ಕಾರದ ನಿರ್ದೇಶನಂತೆ ಸೆ.1ರಿಂದ ಗೋವಾದ ಎಲ್ಲ ಗಡಿಗಳನ್ನೂ ತೆರವು ಮಾಡುವುದಾಗಿ ಭರವಸೆ ನೀಡಿದ್ದರು.

ಸಿಹಿ ಹಂಚಿ ಸಂಭ್ರಮ:ಮಾಜಾಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಗೋವಾ ಗಡಿಯಲ್ಲಿ ಸಂಚಾರ ನಿರ್ಬಂಧವನ್ನು ಸಂಪೂರ್ಣವಾಗಿ ತೆರವು ಮಾಡಿದ್ದು ಕಾರವಾರದ ಜನರ ಸಂತಸಕ್ಕೆ ಕಾರಣವಾಗಿದೆ. ಗೋವಾ ಚೆಕ್‌ಪೋಸ್ಟ್‌ಗೆ ತೆರಳಿದ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ನೇತೃತ್ವದಲ್ಲಿ, ಅಲ್ಲಿನ ಸರ್ಕಾರಿ ಸಿಬ್ಬಂದಿ, ವಾಹನ ಚಾಲಕರಿಗೆ ಸಿಹಿ ವಿತರಿಸಿದರು.

ಗೋವಾ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೆರವು ಮಾಡಿರುವ ಕಾರಣ ಬಸ್ ಸಂಚಾರವೂ ಹಂತಹಂತವಾಗಿ ಆರಂಭವಾಗುವ ನಿರೀಕ್ಷೆಯಿದೆ. ಕರ್ನಾಟಕದ ಗಡಿಯ ಸಮೀಪದಲ್ಲಿರುವ ಪೋಳೆಂ ಸುತ್ತಮುತ್ತ ಇರುವ ವಿವಿಧ ಅಂಗಡಿ, ಹೋಟೆಲ್‌, ಬಾರ್‌ಗಳ ಮಾಲೀಕರೂ ವ್ಯಾಪಾರ, ವಹಿವಾಟು ನಡೆಸಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT