ಶನಿವಾರ, ಜೂನ್ 19, 2021
27 °C
91 ಪ್ರವಾಸಿಗರ ನಿರ್ಗಮನ, ರಷ್ಯಾಕ್ಕೆ ಹೋಗಬೇಕಿದ್ದ ವಿಮಾನ ರದ್ದು

ಗೋಕರ್ಣ: ವಿದೇಶಿ ಪ್ರವಾಸಿಗರಿಗೆ ಪೊಲೀಸರ ನೆರವು

ರವಿ ಸೂರಿ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಕೊರೊನಾ ವೈರಸ್‌ ವ್ಯಾಪಿಸಿರುವ ಈ ಹಂತದಲ್ಲಿ ತಮ್ಮ ದೇಶಗಳಿಗೆ ಹೋಗಲು ಸಾಧ್ಯವಾಗದ ವಿದೇಶಿ ಪ್ರವಾಸಿಗರಿಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸರು ಸಹಾಯ ಹಸ್ತ ಚಾಚಿದ್ದಾರೆ. ಅವರವರ ರಾಯಭಾರ ಕಚೇರಿಗಳನ್ನು ಸಂಪರ್ಕಿಸಿ ವಾಪಸ್ ಹೋಗಲು ವಿಮಾನದ ವ್ಯವಸ್ಥೆ ಕಲ್ಪಿಸಿದ್ದಾರೆ.

ಈಗಾಗಲೇ ಫ್ರಾನ್ಸ್, ಜರ್ಮನಿ, ರಷ್ಯಾ, ಬೆಲ್ಜಿಯಂ, ಇಸ್ರೇಲ್, ಸ್ಪೇನ್, ಸ್ವೀಡನ್, ಡೆನ್ಮಾರ್ಕ್, ನೆದರ್‌ಲ್ಯಾಂಡ್ ಸೇರಿದಂತೆ ಒಟ್ಟು 12 ದೇಶದ 91 ಪ್ರವಾಸಿಗರು ಗೋಕರ್ಣದಿಂದ ನಿರ್ಗಮಿಸಿದ್ದಾರೆ. 

ರಾಯಭಾರ ಕಚೇರಿಗಳಿಂದ ಒಪ್ಪಿಗೆ ಸಿಕ್ಕಿದ ಬಳಿಕ ಪ್ರವಾಸಿಗರು ಹೋಗುವ ವಾಹನ, ಚಾಲಕನ ಮಾಹಿತಿಗಳನ್ನು ಗೋವಾ ಗಡಿಯಲ್ಲಿದ್ದವರಿಗೆ ತಿಳಿಸಲಾಗಿತ್ತು. ಗೋವಾ ವಿಮಾನನಿಲ್ದಾಣಕ್ಕೆ ಹೋಗಲು ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗಿತ್ತು. ಗೋಕರ್ಣ ಪೊಲೀಸರ ಈ ಶ್ರಮಕ್ಕೆ ವಿದೇಶಗರೂ ಅಭಿನಂದಿಸಿದ್ದಾರೆ.

‘ಗೋವಾದಿಂದ ಬೆಲ್ಜಿಯಂಗೆ ವಿಮಾನ ಹೋಗಲು ಕೆಲವೇ ಗಂಟೆಗಳಿರುವಾಗ ಬೇಕಾದ ವ್ಯವಸ್ಥೆಯನ್ನೆಲ್ಲ ಮಾಡಿದ್ದಾರೆ. ನಮಗೆ ಯಾವುದೇ ತೊಂದರೆ ಆಗದಂತೆ ಸುರಕ್ಷಿತವಾಗಿ ನಮ್ಮ ದೇಶ ತಲುಪಲು ಸಹಕರಿಸಿದ್ದಾರೆ’ ಎಂದು ಪಿ.ಎಸ್.ಐ ನವೀನ ನಾಯ್ಕ ಮತ್ತು ಸಿಬ್ಬಂದಿ ಶಿವಾನಂದ ಗೌಡ ಅವರಿಗೆ ಇವಾ ರೋಲಂಡ್ ಎಂಬ ಮಹಿಳೆ ಅಭಿನಂದಿಸಿ ಸಂದೇಶ ಕಳುಹಿಸಿದ್ದಾಳೆ.

ರಷ್ಯಾದ ವಿಮಾನ ರದ್ದುಗೋವಾದಿಂದ ಗುರುವಾರ ರಾತ್ರಿ ರಷ್ಯಾಕ್ಕೆ ಹೊರಡಬೇಕಾಗಿದ್ದ ವಿಮಾನದ ಸಂಚಾರ ದಿಢೀರ್ ರದ್ದಾಗಿದೆ. ಗೋಕರ್ಣದಿಂದ ಒಟ್ಟು 100 ಮಂದಿ ರಷ್ಯನ್ನರು ಅದರಲ್ಲಿ ತಮ್ಮ ದೇಶಕ್ಕೆ ಹೋಗುವವರಿದ್ದರು. ಆದರೆ, ಆ ದೇಶದಲ್ಲೂ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದ್ದು, ಯಾರನ್ನೂ ಒಳಗೆ ಸೇರಿಸಿಕೊಳ್ಳುತ್ತಿಲ್ಲ. ಹಾಗಾಗಿ ರಷ್ಯಾಕ್ಕೆ ಕಳುಹಿಸುವುದನ್ನು ಸ್ವಲ್ಪ ಮಂದೂಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಒಟ್ಟು 180 ಮಂದಿ ರಷ್ಯನ್ನರು ಇಲ್ಲಿ ತಂಗಿದ್ದಾರೆ. ಅವರ ಸಮಗ್ರ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಈ ಪೈಕಿ 100ರಷ್ಟು ಮಂದಿ ಮಾತ್ರ ಸ್ವದೇಶಕ್ಕೆ ಮರಳಲು ಒಪ್ಪಿದ್ದಾರೆ. ಉಳಿದವರು ಸದ್ಯ ರಷ್ಯಾ ಅನುಸರಿಸುತ್ತಿರುವ ಕಟ್ಟುನಿಟ್ಟಿನ ನಿರ್ಬಂಧಕ್ಕೆ ಹೆದರಿ ಇಲ್ಲಿಯೇ ಕೆಲವು ದಿನ ಉಳಿದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

‘ಗೋವಾದಿಂದ ಹೊರಡಬೇಕಿದ್ದ ವಿಮಾನ ಸಂಚಾರ ಮುಂದೂಡಲು ಕೊರೊನಾ ವೈರಸ್‌ನ ಭಯ ಕಾರಣ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ಬೇರೆ ದೇಶದಿಂದ ರಷ್ಯಾಕ್ಕೆ ವಿಶೇಷ ವಿಮಾನದಲ್ಲಿ ಬಂದ ಒಬ್ಬರಲ್ಲಿ ಕೋವಿಡ್ 19 ದೃಢಪಟ್ಟಿತ್ತು. ಹಾಗಾಗಿ ನಾವು ಸಂಚರಿಸಬೇಕಿದ್ದ ವಿಮಾನವನ್ನು ರದ್ದು ಮಾಡಿರಬಹುದು’ ಎಂದು ಇಲ್ಲಿರುವ ರಷ್ಯಾದ ಪ್ರಜೆಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ವ್ಯವಸ್ಥೆ ಕಲ್ಪಿಸಲಾಗುವುದು’: ‌‘ಗೋಕರ್ಣದಲ್ಲಿ ಇನ್ನೂ 350 ವಿದೇಶಿ ಪ್ರವಾಸಿಗರಿದ್ದಾರೆ. ಅವರಲ್ಲಿ ಕೆಲವರು ವಾಪಸ್ ಹೋಗಲು ಪ್ರಯತ್ನಿಸುತ್ತಿದ್ದಾರೆ. ಅಂಥವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಉಳಿದವರ ಮೇಲೂ ಗಮನವಿದ್ದು, ಕೆಲವರಿಗೆ ಉಳಿಯಲು, ಊಟದ, ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ. ಅವರ ಆರೋಗ್ಯದ ಬಗ್ಗೆಯೂ ನಿಗಾ ಇಡಲಾಗಿದೆ’ ಎಂದು ಪಿ.ಎಸ್.ಐ ನವೀನ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು