ಗುರುವಾರ , ಮಾರ್ಚ್ 4, 2021
29 °C
ಜಿಲ್ಲೆಯಾದ್ಯಂತ ಮುಂದುವರಿದ ಭಾರಿ ಮಳೆ

ಕಾರವಾರ: ಉಕ್ಕಿ ಹರಿಯುತ್ತಿರುವ ನದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನದ ನಂತರ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಎಲ್ಲ ಹೊಳೆ, ನದಿಗಳೂ ಉಕ್ಕಿ ಹರಿಯುತ್ತಿವೆ. ನೂರಾರು ಎಕರೆ ಕೃಷಿ ಜಮೀನು, ಕೆಲವು ಸೇತುವೆಗಳು, ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ.

ಕದ್ರಾ ಅಣೆಕಟ್ಟೆಯ 10 ಗೇಟ್‌ಗಳನ್ನು ತೆರೆಯಲಾಗಿದ್ದು, 55 ಸಾವಿರ ಕ್ಯುಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಗುತ್ತಿದೆ. ಇದರಿಂದ ಕೆಳಭಾಗದಲ್ಲಿರುವ ಮಹಾಮಾಯಿ ದೇವಸ್ಥಾನ ಮುಳುಗಡೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ ಏಳು ಕುಟುಂಬಗಳ 23 ಜನರನ್ನು ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಗೊಟೆಗಾಳಿಯಲ್ಲಿ ಗುಡ್ಡ ಕುಸಿದಿದ್ದು, ಮೂರು ಕುಟುಂಬಗಳನ್ನು ತೆರವು ಮಾಡಲಾಗಿದೆ.

ಅಂಕೋಲಾ ತಾಲ್ಲೂಕಿನ ಸುಂಕಸಾಳ ಸಮೀಪ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಮೇಲೆ ಗಂಗಾವಳಿ ನದಿಗೆ ನಿರ್ಮಿಸಲಾದ ಸೇತುವೆ ಮುಳುಗಡೆಯಾಯಿತು. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಪ್ರಯಾಣಿಕರು ಪರದಾಡಿದರು.

ಸಿದ್ದಾಪುರ ತಾಲ್ಲೂಕಿನ ಸರಕುಳಿ ಹೊಳೆ ಕೂಡ ಅಪಾಯದ ಮಟ್ಟ ಮೀರಿ ಹರಿದಿದ್ದು, ಸೇತುವೆಯ ಮುಳುಗಿದೆ. ಇತ್ತ ಕುಮಟಾ ತಾಲ್ಲೂಕಿನ ಕತಗಾಲ ಸಮೀಪ ಹಳ್ಳದ ನೀರು ರಾಜ್ಯ ಹೆದ್ದಾರಿಯನ್ನು ಆಕ್ರಮಿಸಿತು. ಸುಮಾರು ಮೂರು ಅಡಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಯಿತು.

ಮತ್ತಷ್ಟು ಮಳೆಯ ಮುನ್ಸೂಚನೆ: ಜಿಲ್ಲೆಯಾದ್ಯಂತ ಇನ್ನೂ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರ ಎಚ್ಚರಿಕೆ ನೀಡಿದೆ. ಹಾಗಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳ ಶಾಲೆ, ಕಾಲೇಜುಗಳಿಗೆ ಮಂಗಳವಾರ ರಜೆ‌ ಘೋಷಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು