ಶಿರಸಿ: ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ನಾಲ್ಕು ಕಡೆ 2018-19ರಲ್ಲಿ ಮಂಜೂರಾಗಿದ್ದ ವಿದ್ಯಾರ್ಥಿ ವಸತಿ ನಿಲಯಗಳು ಅರ್ಧಕ್ಕೆ ಸ್ಥಗಿತಗೊಂಡಿವೆ.
ಶಿರಸಿ, ಕಾರವಾರ, ಹಳಿಯಾಳ ಮತ್ತು ಕುಮಟಾದಲ್ಲಿ ₹5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕಟ್ಟಡಗಳು ಚಾವಣಿ ಹಂತಕ್ಕೆ ತಲುಪಿದ ಮೇಲೆ ಗುತ್ತಿಗೆ ಪಡೆದಿದ್ದ ವೆಕ್ಟರ್ ಎಂಬ ಸಂಸ್ಥೆ ಕೆಲಸ ಸ್ಥಗಿತಗೊಳಿಸಿದೆ ಎಂಬ ಆರೋಪವಿದೆ.
ಶಿರಸಿಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಕಾರವಾರದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಕುಮಟಾದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಹಳಿಯಾಳದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಕಾಮಗಾರಿ ನನೆಗುದಿಗೆ ಬಿದ್ದಂತಾಗಿದೆ.
ನಾಲ್ಕು ಕಡೆಗಳಲ್ಲಿ ಲಕ್ಷಾಂತರ ವೆಚ್ಚ ಭರಿಸಿ ಖಾಸಗಿ ಕಟ್ಟಡಗಳನ್ನು ಬಾಡಿಗೆಗೆ ಪಡೆಯಬೇಕಾದ ಅನಿವಾರ್ಯತೆ ಉಂಟಾಗಿದೆ. ಪ್ರೌಢಶಾಲೆ, ಕಾಲೇಜು ತರಗತಿಗಳು ಆರಂಭಗೊಂಡಿದ್ದರೂ ಹಾಸ್ಟೆಲ್ ಸೌಲಭ್ಯ ದೊರೆಯದೆ ದೂರದ ಹಾಗೂ ಕುಗ್ರಾಮಗಳ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ಕೋವಿಡ್ ಕಾರಣದಿಂದ ಶಾಲೆಗಳು ಒಂದೂವರೆ ವರ್ಷದಿಂದ ಬಾಗಿಲು ತೆರೆದಿರಲಿಲ್ಲ. ಹೀಗಾಗಿ ಹಾಸ್ಟೆಲ್ ಕೊರತೆ ಸಮಸ್ಯೆ ಕಾಡಲಿಲ್ಲ. ಈಗ ಶಾಲೆಗಳನ್ನು ಹಂತ ಹಂತವಾಗಿ ತೆರೆಯಲಾಗುತ್ತಿದ್ದು ವಿದ್ಯಾರ್ಥಿ ವಸತಿ ನಿಲಯಗಳ ಅಗತ್ಯವಿದೆ. ಆದರೆ ಇನ್ನೂ ಹಾಸ್ಟೆಲ್‌ಗಳು ಕಾರ್ಯಾರಂಭ ಮಾಡಿಲ್ಲ.
‘ಹಾಸ್ಟೆಲ್ ಇಲ್ಲದೆ ತರಗತಿಗೆ ಹೋಗಲು ಆಗುತ್ತಿಲ್ಲ. ಇದು ಶಿಕ್ಷಣಕ್ಕೆ ತೊಡಕಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲಕ್ಕೆ ಹಾಸ್ಟೆಲ್ ಬೇಗ ಆರಂಭಿಸಬೇಕು’ ಎಂದು ವಿದ್ಯಾರ್ಥಿನಿ ಸೌಮ್ಯ ಆರೇರ ಹೇಳಿದರು.
‘ಕೆಲಸ ಸ್ಥಗಿತಗೊಳಿಸಿದ್ದ ಕಂಪನಿಗೆನೋಟಿಸ್ ನೀಡಲಾಗಿತ್ತು. ಅವಧಿಗೆ ಸರಿಯಾಗಿ ಕಾಮಗಾರಿ ನಡೆಸದ ಕಾರಣ ಕಪ್ಪುಪಟ್ಟಿಗೆ ಸೇರಿಸಲು ಪ್ರಸ್ತಾವ ಸಲ್ಲಿಸಿದ್ದೇವೆ. ಬೇರೆ ಕಂಪನಿಗೆ ಟೆಂಡರ್ ನೀಡಲಾಗಿದೆ. ಕೆಲಸ ಶೀಘ್ರ ಮುಗಿಸಲು ಸೂಚಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಪುರುಷೋತ್ತಮ ಪ್ರತಿಕ್ರಿಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.