ಶನಿವಾರ, ಮಾರ್ಚ್ 6, 2021
32 °C
ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಸದಸ್ಯರ ಆಕ್ರೋಶ

ಮನೆ ನಂಬರ್ ಪ್ಲೇಟ್: ಅಕ್ರಮ ಹಣ ವಸೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶಿರಸಿ: ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನೆಗಳಿಗೆ ಶಾಶ್ವತ ನಂಬರ್ ಪ್ಲೇಟ್ ಅಳವಡಿಸಿಕೊಡುವುದಾಗಿ ಹೇಳಿಕೊಂಡು, ಕಲ್ಕತ್ತಾದ ಕಂಪನಿಯೊಂದು ಜನರಿಂದ ₹ 50 ವಸೂಲಿ ಮಾಡುತ್ತದೆ. ತಾಲ್ಲೂಕಿನಲ್ಲಿ ಈ ರೀತಿ ಅಕ್ರಮ ಹಣ ಸಂಗ್ರಹಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ವಿಷಯ ಪ್ರಸ್ತಾಪಿಸಿದ ಸದಸ್ಯ ನರಸಿಂಹ ಹೆಗಡೆ ಅವರು, ‘ಹುಲೇಕಲ್ ಪಂಚಾಯ್ತಿ ವ್ಯಾಪ್ತಿಯ ಮನೆಗಳಿಗೆ ಮನೆಗೆ ನಂಬರ್ ಪ್ಲೇಟ್ ಅಳವಡಿಸಿಕೊಡುವುದಾಗಿ ಹೇಳಿಕೊಂಡು ಕೆಲವರು ಬಂದಿದ್ದರು. ಅವರನ್ನು ವಿಚಾರಿಸಿದಾಗ, ತಾಲ್ಲೂಕು ಪಂಚಾಯ್ತಿ ಮೂಲಕ ಗ್ರಾಮ ಪಂಚಾಯ್ತಿಯ ಪತ್ರವನ್ನು ಅವರು ಪಡೆದಿರುವುದು ಗೊತ್ತಾಯಿತು. ಗ್ರಾಮ ಪಂಚಾಯ್ತಿ ನೀಡಿರುವ ಪತ್ರದಲ್ಲಿ, ಅವಶ್ಯಕತೆ ಇದ್ದಲ್ಲಿ ಪ್ಲೇಟ್ ಅಳವಡಿಸಿಕೊಳ್ಳಬಹುದು ಎಂಬ ಉಲ್ಲೇಖವಿದ್ದರೂ, ಎಸ್.ಬಿ.ನಂಬರಿಂಗ್ ವರ್ಕ್ಸ್‌ ಕಂಪನಿ ವತಿಯಿಂದ ಬಂದಿರುವ ಸಿಬ್ಬಂದಿ, ಕಡ್ಡಾಯವಾಗಿ ಇದನ್ನು ಪಡೆಯುವಂತೆ ಜನರನ್ನು ಒತ್ತಾಯಿಸುತ್ತಾರೆ’ ಎಂದರು.

‘ಸರ್ಕಾರ ಟೆಂಡರ್‌ ನೀಡಿದೆ ಎಂದು ಹೇಳುತ್ತಿದ್ದರೂ ಅವರು ಜನರಿಂದ ಹಣ ಸಂಗ್ರಹಿಸುವುದು ಯಾಕೆಂದು ಗೊತ್ತಾಗುತ್ತಿಲ್ಲ. ಟೆಂಡರ್ ಪಡೆದಿರುವ ಬಗ್ಗ ಅವರ ಬಳಿ ದಾಖಲೆಯೂ ಇಲ್ಲ. ಸಂಬಂಧಪಟ್ಟ ಪಂಚಾಯ್ತಿಯೇ ನೇರವಾಗಿ ಈ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದರು. ‘ಸದಸ್ಯರ ವಿರೋಧದ ನಡುವೆ ಈ ಕಾರ್ಯ ಮಾಡುವುದಿಲ್ಲ. ತಕ್ಷಣದಿಂದ ಇದನ್ನು ಕೈಬಿಡಲು ತಿಳಿಸಲಾಗುವುದು’ ಎಂದು ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಹೇಳಿದರು.

‘ಪಂಡಿತ ಸಾರ್ವಜನಿಕ ಆಸ್ಪತ್ರೆಯ ಜನೌಷಧ ಕೇಂದ್ರದಲ್ಲಿ ಎಲ್ಲ ರೀತಿ ಔಷಧಗಳು ಲಭ್ಯವಿಲ್ಲ. ಬಡರೋಗಿಗಳಿಗೆ ತೊಂದರೆಯಾಗಿದೆ’ ಎಂದು ಉಪಾಧ್ಯಕ್ಷ ಚಂದ್ರು ದೇವಾಡಿಗ ಹೇಳಿದರು. ‘ಜನೌಷಧ ಕೇಂದ್ರದಿಂದ ಜನರಿಗೆ ಸಾಕಷ್ಟು ಪ್ರಯೋಜನವಾಗಿದೆ. ಕೆಲವು ಔಷಧ ಎಲ್ಲ ಕಡೆಗಳಲ್ಲೂ ಕೊರತೆಯಿದೆ. ಸದ್ಯದಲ್ಲಿ ವ್ಯವಸ್ಥೆ ಸರಿಯಾಗಬಹುದು’ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಜಾನನ ಭಟ್ಟ ಹೇಳಿದರು.

ಆಸ್ಪತ್ರೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಹೆರಿಗೆ ಆಸ್ಪತ್ರೆ ಕಟ್ಟಡಕ್ಕೆ ಎಂ.ಸ್ಯಾಂಡ್ ಬಳಕೆ ಮಾಡಲಾಗುತ್ತಿದೆ. ಗುಣಮಟ್ಟದ ಮರಳನ್ನೇ ಬಳಸಬೇಕು ಎಂದು ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಸೂಚಿಸಿದರು.

ಮತ್ತಿಘಟ್ಟ ಭಾಗದಲ್ಲಿ ಕಾಣಿಸಿಕೊಂಡಿರುವ ಹುಲಿ, ಅನೇಕ ಜಾನುವಾರುಗಳನ್ನು ಹಿಡಿದಿದೆ. ಅರಣ್ಯ ಇಲಾಖೆ ಹುಲಿಯನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಚಂದ್ರು ದೇವಾಡಿಗ ಒತ್ತಾಯಿಸಿದರು. ‘ಅರಣ್ಯ ಇಲಾಖೆಯ 20 ಸಿಬ್ಬಂದಿಯನ್ನು ಮತ್ತಿಘಟ್ಟ ಭಾಗದಲ್ಲಿ ಗಸ್ತು ತಿರುಗಲು ನೇಮಿಸಲಾಗಿದೆ. ಹುಲಿ ಹಿಡಿಯಲು ರಾಷ್ಟ್ರೀಯ ಹುಲಿ ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಬೇಕಾಗುತ್ತದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಓಣಿಕೇರಿ, ಬೆಂಗಳೆ ಭಾಗದಲ್ಲಿ ಜಾನುವಾರಿಗೆ ಲಸಿಕೆ ಹಾಕಿಸಿದರೂ, ಕಾಲು–ಬಾಯಿ ಬೇನೆ ರೋಗ ಬಂದಿದೆ. ಪಶುಸಂಗೋಪನಾ ಇಲಾಖೆಗೆ ತಿಳಿಸಿದರೂ, ವೈದ್ಯರು ಸ್ಥಳ ಭೇಟಿ ನೀಡಲು ವಿಳಂಬ ಮಾಡಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ದೂರಿದರು. ಲಸಿಕೆ ದೋಷದಿಂದಲೂ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಬೇರೆ ವೈರಸ್‌ನಿಂದಲೂ ಕಾಯಿಲೆ ಬರಬಹುದು ಎಂದು ಇಲಾಖೆ ಅಧಿಕಾರಿ ಹೇಳಿದರು.

ಆಯುಷ್ ಇಲಾಖೆಯಡಿ ತಾಲ್ಲೂಕಿನಲ್ಲಿ ನಾಲ್ಕು ಆರೋಗ್ಯ ಶಿಬಿರ, ಎರಡು ಮನೆಮದ್ದು ಕಾರ್ಯಕ್ರಮ, ಒಂದು ಕಾರ್ಯಾಗಾರ ನಡೆಸಲು ಅವಕಾಶವಿದೆ ಎಂದು ಆಯುರ್ವೇದ ಆಸ್ಪತ್ರೆಯ ಡಾ.ಜಗದೀಶ ಯಾಜಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು