ಗುರುವಾರ , ಜನವರಿ 27, 2022
21 °C
ಹೊಸ್ತೋಟ ಮಂಜುನಾಥ ಭಾಗವತರ ನೆಲೆ ಮೋತಿಗುಡ್ಡದಲ್ಲಿ ವಿವಿಧ ಕಾಮಗಾರಿ

ಕಾರವಾರ: ಯಕ್ಷಋಷಿ ಸ್ಮರಣೆಗೆ ‘ಅಶ್ವತ್ಥಧಾಮ’ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಯಕ್ಷ ಲೋಕದಲ್ಲಿ ‘ಯಕ್ಷ ಋಷಿ’ ಎಂದೇ ಪರಿಚಿತರಾಗಿದ್ದವರು ಹೊಸ್ತೋಟ ಮಂಜುನಾಥ ಭಾಗವತ ಅವರು. ಅವರ ನೆನಪಿನಲ್ಲಿ ‘ಅಶ್ವತ್ಥಧಾಮ’ ನಿರ್ಮಾಣಗೊಂಡಿದ್ದು, ಜ.14ರಂದು ಲೋಕಾರ್ಪಣೆಯಾಗಲಿದೆ.

ಅಂಕೋಲಾ ತಾಲ್ಲೂಕಿನ ಮೋತಿಗುಡ್ಡದಲ್ಲಿ ಭಾಗವತರ ಹೆಸರನ್ನು ಶಾಶ್ವತವಾಗಿಸುವ ಕೆಲಸಗಳಾಗುತ್ತಿವೆ. ಆರಂಭಿಕ ಹಂತದ ಕೆಲಸಗಳು ಪೂರ್ಣಗೊಂಡಿದ್ದು, ಮಕರ ಸಂಕ್ರಾಂತಿಯ ದಿನವೇ ಅವರ ಪುಣ್ಯತಿಥಿಯೂ ಆಗಿದೆ. ಕಾರ್ಕಳದ ಪ್ರಸಿದ್ಧ ಶಿಲ್ಪಕಲಾ ಶಿಕ್ಷಕ ಗುಣವಂತೇಶ್ವರ ಭಟ್, ಭಾಗವತ ಅವರ ಪುತ್ಥಳಿಯನ್ನು ಆಕರ್ಷಕವಾಗಿ ನಿರ್ಮಿಸಿದ್ದಾರೆ. ಅದರ ಸ್ಥಾಪನೆಯೂ ಅಂದೇ ಆಗಲಿದೆ.

ಭಾಗವತ ಅವರು ಅಶ್ವತ್ಥ ಮರದ ಕೆಳಗೆ ಕುಳಿತು ಧ್ಯಾನ, ಯಕ್ಷಗಾನ ಕೃತಿ ರಚನೆ, ಆಧ್ಯಾತ್ಮಿಕ ಸಾಧನೆ, ಕಲಿಕಾಸಕ್ತರಿಗೆ ತರಬೇತಿ ಮುಂತಾದ ಕಾರ್ಯಗಳನ್ನು ಮಾಡುತ್ತಿದ್ದರು. ಅಶ್ವತ್ಥ ವೃಕ್ಷದ ಕಟ್ಟೆಗೆ ಶೆಡ್ ನಿರ್ಮಿಸಬೇಕು ಎನ್ನುವುದು ಅವರ ಆಸೆಯಾಗಿತ್ತು. ಅದಕ್ಕಾಗಿ ಪ್ರಯತ್ನವನ್ನೂ ಆರಂಭಿಸಿದ್ದಾಗಲೇ ನಿಧನರಾದರು. ಈಗ ಅರಳಿಮರಕ್ಕೆ ಕಟ್ಟೆ ನಿರ್ಮಿಸಿ, ತಗಡಿನ ಚಾವಣಿ ಅಳವಡಿಸಲಾಗಿದೆ.

ಭಾಗವತರು ವಾಸ ಮಾಡುತ್ತಿದ್ದ ಕುಟೀರವನ್ನು ಯಥಾಸ್ಥಿತಿಯಲ್ಲೇ ಕಾಪಿಡಲಾಗಿದೆ. ಅದಕ್ಕೆ ಸುಣ್ಣ ಬಣ್ಣ ಬಳಿದು ಭಾಗವತ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಯಕ್ಷಗಾನದ ರೇಖಾಚಿತ್ರಗಳನ್ನು ಬಿಡಿಸಲಾಗಿದೆ. ಕಲಾವಿದ ಸತೀಶ ಯಲ್ಲಾಪುರ ಹಾಗೂ ಸಂಗಡಿಗರು ಚಿತ್ರಗಳನ್ನು ರಚಿಸಿದ್ದಾರೆ. ಭಾಗವತರ ಪರಿಚಯ, ಸಾಧನೆಯನ್ನು ಬಿಂಬಿಸುವ ಶಿಲಾಫಲಕ ಅಳವಡಿಸಲಾಗಿದೆ. 

ಮಂಜುನಾಥ ಭಾಗವತ ಅವರು ನಿತ್ಯವೂ ಬಳಸುತ್ತಿದ್ದ ವಸ್ತುಗಳನ್ನು ಸಂರಕ್ಷಿಸಲಾಗಿದೆ. ಅಶ್ವತ್ಥ ವೃಕ್ಷದ ಕೆಳಗೆ ಧ್ಯಾನ ಮಾಡಲು ಅವರು ನಿರ್ಮಿಸಿದ್ದ ಪೀಠವನ್ನು ದುರಸ್ತಿ ಮಾಡಲಾಗಿದೆ. ಅಶ್ವತ್ಥಧಾಮದ ಪ್ರದೇಶವನ್ನು ಸಮತಟ್ಟುಗೊಳಿಸಲಾಗಿದೆ.

ಪರಿಚಯ: ಹೊಸ್ತೋಟ ಮಂಜುನಾಥ ಭಾಗವತ ‘ಯಕ್ಷಗಾನದ ವಿಶ್ವಕೋಶ’ ಎಂದೇ ಪ್ರಸಿದ್ಧರಾದವರು. ನಾಲ್ಕನೇ ತರಗತಿ ವಿದ್ಯಾಭ್ಯಾಸ ಮಾಡಿದ್ದರೂ 250ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ವಿವಿಧೆಡೆ ಸಾವಿರಾರು ಜನರಿಗೆ ತರಬೇತಿ ನೀಡಿ ಕಲೆಯನ್ನು ಶ್ರೀಮಂತಗೊಳಿಸಿದವರು. ಕೇಂದ್ರ ಸಂಗೀತ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ಶಾಸಕಿ ನೆರವು: ಈ ಸ್ಥಳವನ್ನು ಸ್ವಂತ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವುದಾಗಿ ಶಾಸಕಿ ರೂಪಾಲಿ ನಾಯ್ಕ ಭರವಸೆ ನೀಡಿದ್ದರು. ತಮ್ಮ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ವಾಸ್ತವ್ಯ ಮಾಡಿದ್ದು ಭಾಗ್ಯ ಎಂದು ಹೇಳಿದ್ದರು. ಅದರಂತೆ ನಡೆದುಕೊಂಡ ಅವರು, ಭಾಗವತರ ಪ್ರತಿಮೆ, ಅಶ್ವತ್ಥ ವೃಕ್ಷದ ಕಟ್ಟೆ ದುರಸ್ತಿ, ಪ್ಲಾಸ್ಟರ್ ಅಳವಡಿಕೆ, ಶೆಡ್ ನಿರ್ಮಾಣ, ಕುಟೀರಕ್ಕೆ ಬಣ್ಣ, ಶಿಲಾ ಫಲಕ, ಭಾವಚಿತ್ರಗಳು ಹೀಗೆ ಪ್ರತಿಯೊಂದರ ವೆಚ್ಚವನ್ನೂ ಭರಿಸಿದ್ದಾರೆ. ಸ್ಥಳದ ಅಭಿವೃದ್ಧಿಗೆ ಕಾರಣರಾಗಿದ್ದಾರೆ.

ಉದ್ಘಾಟನೆ 14ರಂದು: ಮೋತಿಗುಡ್ಡದಲ್ಲಿ ‘ಅಶ್ವತ್ಥಧಾಮ’ವನ್ನು ಜ.14ರಂದು ಮಧ್ಯಾಹ್ನ 3ಕ್ಕೆ ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಲಿದ್ದಾರೆ. ಪರಿಸರ ಬರಹಗಾರ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಾನಂದ ಕಳವೆ ಅಧ್ಯಕ್ಷತೆ ವಹಿಸಲಿದ್ದಾರೆ. ಊರಿನ ಗಣ್ಯರಾದ ಮಾಧವ ಹೊಸ್ಮನೆ ಉಪಸ್ಥಿತರಿರುವರು. ಸಂಜೆ 4ರಿಂದ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಉಚಿತ ಪ್ರದರ್ಶನ ನಡೆಯಲಿದೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.

*
ಮಂಜುನಾಥ ಭಾಗವತರಿಗೆ ಮೋತಿಗುಡ್ಡ ಅಚ್ಚುಮೆಚ್ಚಿನ ಸ್ಥಳವಾಗಿತ್ತು. ಅಶ್ವತ್ಥಧಾಮದ ಅಭಿವೃದ್ಧಿಗೆ ಶಾಸಕಿ ರೂಪಾಲಿ ನಾಯ್ಕ ನೆರವಾಗಿದ್ದಾರೆ. ಅವರಿಗೆ ಕೃತಜ್ಞತೆಗಳು.
– ಭಾಸ್ಕರ ಹೆಗಡೆ, ಮೋತಿಗುಡ್ಡ ನಿವಾಸಿ.

*
ಮಂಜುನಾಥ ಭಾಗವತರ ಹೆಸರನ್ನು ಶಾಶ್ವತವಾಗಿಡುವ ಉದ್ದೇಶದಿಂದ ಮೋತಿಗುಡ್ಡ ಪರಿಸರದ ಅಭಿವೃದ್ಧಿಗೆ ಪ್ರಯತ್ನಿಸಲಾಗಿದೆ. ಭಾಗವತರಿಗೆ ಪ್ರಿಯವಾದ ಅಶ್ವತ್ಥಧಾಮ ಎಂದು ಹೆಸರಿಸಲಾಗಿದೆ.
– ಶಿವಾನಂದ ಕಳವೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.