ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಜೀವನದ ಒಂದು ಭಾಗ: ಶಿವರಾಮ ಹೆಬ್ಬಾರ್

ಕಾರವಾರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಸಚಿವ ಶಿವರಾಮ ಹೆಬ್ಬಾರ್ ಅಭಿಮತ
Last Updated 5 ಜೂನ್ 2020, 20:06 IST
ಅಕ್ಷರ ಗಾತ್ರ

ಕಾರವಾರ: ‘ಕೊರೊನಾ ಕಾರಣದಿಂದ ವಿದ್ಯಾರ್ಥಿಗಳು ಒಂದು ವರ್ಷದ ತರಗತಿಗಳನ್ನು ಕಳೆದುಕೊಳ್ಳಲು ಸಿದ್ಧ.ಆದರೆ, ಅವರ ಬದುಕಿಗೆ ತೊಂದರೆ ಉಂಟುಮಾಡಲು ಸರ್ಕಾರವೂ ಸಿದ್ಧವಿಲ್ಲ. ಈಗಿನ ಸಂದಿಗ್ಧ ಸ್ಥಿತಿಯಿಂದಾಗಿ ಸ್ಪಷ್ಟ ನಿರ್ಣಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದ ಕೆಇಬಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್ ಅನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್ 19 ಈಗ ಜೀವನದ ಒಂದು ಭಾಗವಾಗಿದೆ. ಹಾಗೆಂದು ಎರಡು ಮೂರು ವರ್ಷಗಳ ಕಾಲ ಲಾಕ್‌ಡೌನ್ ಮುಂದುವರಿಸಲು ಸಾಧ್ಯವಿಲ್ಲ. ನಮ್ಮ ಜೀವಕ್ಕೆ ನಾವೇ ರಕ್ಷಕರು ಎಂಬ ಪಾಠವನ್ನು ಎಲ್ಲರೂ ಅರಿಯಬೇಕಿದೆ.ಎಲ್ಲ ಕೆಲಸವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ’ ಎಂದರು.

‘ಕೊರೊನಾ ವೈರಸ್ ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳುವಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಜಿಲ್ಲೆಗೆ ಗೌರವ ತರುವ ರೀತಿಯಲ್ಲಿ ನಿಭಾಯಿಸಿದ್ದಾರೆ’ ಎಂದು ಶ್ಲಾಘಿಸಿದರು.

‘ಬಡವರು ಇಂದಿರಾ ಕ್ಯಾಂಟೀನ್‌ನ ಪ್ರಯೋಜನವನ್ನು ಹೆಚ್ಚು ಪಡೆದುಕೊಳ್ಳಬೇಕು. ಇಲ್ಲಿ ಶುಚಿತ್ವ, ಆಹಾರದ ಗುಣಮಟ್ಟದಲ್ಲಿ ಕೊರತೆಯಾಗದಂತೆ ನೋಡಿಕೊಳ್ಳುವುದು ನಗರಸಭೆಯ ಜವಾಬ್ದಾರಿ. ಅಲ್ಲದೇ ಸ್ಥಳೀಯ ಜನಪ್ರತಿನಿಧಿಗಳೂ ಗಮನ ಹರಿಸಬೇಕು. ಬಡವರ ಪರವಾದ ಈ ಯೋಜನೆಯನ್ನು ಮುಂದುವರಿಸಲು ಮುಖ್ಯಮಂತ್ರಿ ಹಸಿರು ನಿಶಾನೆ ತೋರಿದ್ದಾರೆ’ ಎಂದು ಹೇಳಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಕಳೆದ ಬಾರಿ ಸಚಿವರು ಸಭೆ ಕರೆದಿದ್ದಾಗ ಮುಂದಿನ 10 ದಿನಗಳಲ್ಲಿ ಕ್ಯಾಂಟೀನ್‌ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಇದು ಹಿಂದಿನ ಸರ್ಕಾರದ ಯೋಜನೆಯಾದರೂ ಬಡವರಿಗೆ ಅನುಕೂಲವಾಗಲೆಂದು ಯೋಜನೆ ಮುಂದುವರಿಸಲು ಮುಖ್ಯಮಂತ್ರಿ ಯಡಿಯೂರಪ್ಪಒಪ್ಪಿಗೆ ನೀಡಿದ್ದಾರೆ’ ಎಂದರು.

ಸ್ವಯಂ ಚಾಲಿತ ಯಂತ್ರ:ಇಂದಿರಾ ಕ್ಯಾಂಟೀನ್‌ನ ₹ 75 ಲಕ್ಷ ವೆಚ್ಚದ ಕಟ್ಟಡದಲ್ಲಿ ₹ 15 ಲಕ್ಷ ಮೌಲ್ಯದ ಯಂತ್ರೋಪಕರಣಗಳಿವೆ. ತರಕಾರಿ ಹೆಚ್ಚುವುದರಿಂದ ಮೊದಲಾಗಿ ಬೇಯಿಸುವವರೆಗೆ ಎಲ್ಲವೂ ಸ್ವಯಂ ಚಾಲಿತವಾಗಿವೆ. 500 ಜನರಿಗೆ ದಿನವೂ ಮಧ್ಯಾಹ್ನ ₹ 5 ಮತ್ತು ರಾತ್ರಿ ₹ 10ಕ್ಕೆ ಊಟ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ನಗರಸಭೆಯ ಪ್ರಭಾರ ಆಯುಕ್ತೆಯೂ ಆಗಿರುವ ಉಪ ವಿಭಾಗಾಧಿಕಾರಿ ಪ್ರಿಯಾಂಗಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ ಇದ್ದರು. ಬಂದರು ಅಧಿಕಾರಿ ಸುರೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT