ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮನೆಗೆ ಗಂಗೆ ಒಂದೂವರೆ ವರ್ಷದಲ್ಲಿ ಪೂರ್ಣ

ಬಳಲೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಉದ್ಘಾಟಿಸಿದ ಸಚಿವ ಈಶ್ವರಪ್ಪ
Last Updated 4 ಏಪ್ರಿಲ್ 2022, 14:38 IST
ಅಕ್ಷರ ಗಾತ್ರ

ಬಳಲೆ (ಕಾರವಾರ): ‘ರಾಜ್ಯದ ಪ್ರತಿ ಮನೆಗೆ ಪೈಪ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಯ ಮನೆ ಮನೆಗೆ ಗಂಗೆ ಯೋಜನೆಯ ಪ್ರಗತಿಯು ರಾಜ್ಯದಲ್ಲಿ ಉತ್ತಮವಾಗಿದೆ. ಈಗಾಗಲೇ ಶೇ 46ರಿಂದ ಶೇ 47ರಷ್ಟು ಮನೆಗಳಿಗೆ ಸಂಪರ್ಕ ನೀಡಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಗೋಕರ್ಣ ಸಮೀಪದ ತೊರ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಲೆಯಲ್ಲಿ ಅಂದಾಜು ₹ 31 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯ ಪ್ರತಿ ಮನೆಗೂ ಒಂದೂವರೆ ವರ್ಷದೊಳಗೆ ನಲ್ಲಿ ಮೂಲಕ ನೀರು ಪೂರೈಕೆ ಮಾಡಲಾಗುವುದು. ರಾಜ್ಯದ 97 ಲಕ್ಷ ಮನೆಗಳ ಪೈಕಿ ಈಗಾಗಲೇ 47 ಲಕ್ಷ ಮನೆಗಳಿಗೆ ಪೈಪ್ ಸಂಪರ್ಕ ನೀಡಲಾಗಿದೆ’ ಎಂದು ತಿಳಿಸಿದರು.

‘ಉದ್ಯೋಗ ಖಾತ್ರಿಯಲ್ಲಿ ಮಾನವ ದಿನಗಳ ಸೃಜನೆಯಲ್ಲಿ ರಾಜ್ಯವು ದೇಶಕ್ಕೆ ಮೊದಲ ಸ್ಥಾನದಲ್ಲಿದೆ. ರಾಜ್ಯಕ್ಕೆ ನೀಡಲಾಗಿದ್ದ 13 ಕೋಟಿ ಮಾನವ ದಿನಗಳ ಗುರಿಗೆ ಪ್ರತಿಯಾಗಿ 16.68 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ‘ಬಳಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 2002ರಲ್ಲಿ ಅಂದಿನ ಶಾಸಕ ಮೋಹನ ಶೆಟ್ಟಿ ಚಾಲನೆ ನೀಡಿದ್ದರು. ಆದರೆ, ಹಲವಾರು ಅಡೆತಡೆಗಳ ಬಳಿಕ ಈ ವರ್ಷ ಪೂರ್ಣಗೊಂಡಿದೆ. ಇದರಿಂದ ಕುಮಟಾ ಮತ್ತು ಅಂಕೋಲಾ ತಾಲ್ಲೂಕುಗಳ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಅಳಕೋಡ ಗ್ರಾಮ ಪಂಚಾಯಿತಿಯ 12 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ಕೊಡಲಾಗಿದೆ. ಬರ್ಗಿ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ನೀಡಬೇಕಿದೆ’ ಎಂದು ಗಮನ ಸೆಳೆದರು.

‘ಭೇಟಿ ಕೊಟ್ಟು ವರದಿ ಕೊಡಿ’:

ಗೋಕರ್ಣ:

‘ಮನೆ ಮನೆಗೆ ನೀರು ಸರಬರಾಜು ಯೋಜನೆ ಯಶಸ್ವಿಯಾಗಿ ಜಾರಿಯಾಗಬೇಕು. ಸಭೆಯಲ್ಲಿ ಕೇವಲ ಅಂಕಿ, ಅಂಶ ಹೇಳುವುದು ಸಾಧನೆಯಲ್ಲ. ಯೋಜನೆ ಸರಿಯಾಗಿ ಕಾರ್ಯಗತಗೊಳ್ಳುವಂತೆ ಪ್ರತಿ ಅಧಿಕಾರಿಯೂ ಪ್ರಯತ್ನಿಸಬೇಕು’ ಎಂದು ಸಚಿವ ಈಶ್ವರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಮೀಪದ ತೊರ್ಕೆಯಲ್ಲಿ ಸೋಮವಾರ ನಡೆದ, ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಜಲ ಜೀವನ ಮಿಶನ್ ಯೋಜನೆಗೆ ಹಣದ ಅಭಾವವಿಲ್ಲ. ಈ ಯೋಜನೆಗಾಗಿಯೇ ಪ್ರತ್ಯೇಕ ನಿಧಿಯಿದೆ. ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ಕೊಟ್ಟು ವರದಿ ನೀಡಬೇಕು. ಯೋಜನೆ ಜಾರಿಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ’ ಎಂದು ಆದೇಶಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಸ್ವಾಗತಿಸಿದರು. ಆಡಳಿತ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT