ಶನಿವಾರ, ಮೇ 21, 2022
27 °C
‘ಕ್ರಿಮ್ಸ್’, ಜಿಲ್ಲಾ ಕಾರಾಗೃಹ ನಡುವೆ 3 ಎಕರೆ 12 ಗುಂಟೆಯ ಕುತೂಹಲ

‘ಒತ್ತುವರಿ ಜಾಗ’ದ ಜಂಟಿ ಸಮೀಕ್ಷೆ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಆವರಣದಲ್ಲಿ 450 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಆದರೆ, ಜಿಲ್ಲಾ ಕಾರಾಗೃಹ ಮತ್ತು ‘ಕ್ರಿಮ್ಸ್’ ಆಡಳಿತ ಮಂಡಳಿಗಳು, ತಮ್ಮ ಜಮೀನು ಒತ್ತುವರಿಯಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದು, ಜಂಟಿ ಸರ್ವೆ ಮಾಡಲಾಗಿದೆ.

ಒಟ್ಟು 17 ಎಕರೆ 14 ಗುಂಟೆ ವಿಸ್ತೀರ್ಣದಲ್ಲಿರುವ ಜಿಲ್ಲಾ ಕಾರಾಗೃಹದ ಜಾಗದಲ್ಲಿ 3 ಎಕರೆ 12 ಗುಂಟೆಯಷ್ಟನ್ನು (ಸರ್ವೆ ನಂಬರ್ 1406ಅ/1) ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಒತ್ತುವರಿ ಮಾಡಿಕೊಂಡಿದೆ. ಅದೇ ಜಾಗದಲ್ಲಿ ‘ಕ್ರಿಮ್ಸ್’ ಸಿಬ್ಬಂದಿಯ ವಸತಿ ಗೃಹ ಮುಂತಾದ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.

‘ಕಾರಾಗೃಹ ಇಲಾಖೆಯು ಈ ಹಿಂದೆ ಸರ್ವೆ ಮಾಡಿಸಿದಾಗ ಒತ್ತುವರಿಯಾಗಿರುವುದು ದೃಢಪಟ್ಟಿತ್ತು. ಅಲ್ಲದೇ ಅದರ ವರದಿಯನ್ನೂ ಸರ್ವೆ ಇಲಾಖೆಯು ಕಾರಾಗೃಹ ಇಲಾಖೆಗೆ ಈಗಾಗಲೇ ಸಲ್ಲಿಸಿದೆ. ಅದರ ಆಧಾರದಲ್ಲಿ ಒತ್ತುವರಿಯಾದ ಜಮೀನಿನಲ್ಲಿರುವ ಕಟ್ಟಡಗಳನ್ನು ತೆರವು ಮಾಡಬೇಕು. ಬಳಿಕ ಜಮೀನನ್ನು ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಆದರೆ, ‘ಕ್ರಿಮ್ಸ್’ ಆಡಳಿತ ಮಂಡಳಿಯು ತನ್ನ ಜಾಗವೇ ಒತ್ತುವರಿಯಾಗಿದೆ ಎಂದು ಪ್ರತಿಪಾದಿಸಿದ್ದರಿಂದ ಜಂಟಿ ಸರ್ವೆ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದರು. ಅದರಂತೆ ಬುಧವಾರ ಜಂಟಿ ಸರ್ವೆ ನಡೆದಿದ್ದು, ಈ ವಾರದಲ್ಲಿ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ.

‘ನಿರ್ದೇಶನದಂತೆ ಕ್ರಮ’:

‘ದಾಖಲೆಗಳ ಪ್ರಕಾರ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಒಟ್ಟು 23 ಎಕರೆ 5 ಗುಂಟೆ ಜಾಗವಿದೆ. ಆದರೆ, ಪ್ರಸ್ತುತ 17 ಎಕರೆ ಮಾತ್ರವಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರ ಜಂಟಿ ಸರ್ವೆ ಮಾಡಲಾಗಿದೆ. ಅವರ ಮಾರ್ಗದರ್ಶನದಂತೆ ನಡೆದುಕೊಳ್ಳಲಾಗುವುದು’ ಎಂದು ‘ಕ್ರಿಮ್ಸ್’ ನಿರ್ದೇಶಕ ಡಾ.ಗಜಾನನ ನಾಯಕ ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು