ಭಾನುವಾರ, ಆಗಸ್ಟ್ 1, 2021
25 °C
ಗುಣಮಟ್ಟದ ಜೋನಿಬೆಲ್ಲಕ್ಕೆ ಈಗಲೂ ಹೆಚ್ಚಿದ ಬೇಡಿಕೆ

ಶಿರಸಿ: ಕಬ್ಬು ಬೆಳೆಗಾರರಿಗೆ ದಕ್ಕಿಲ್ಲ ಬೆಲ್ಲದ ಲಾಭ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಲಾಕ್‌ಡೌನ್ ಸಂದರ್ಭದಲ್ಲಿ  ಜೋನಿಬೆಲ್ಲದ ಬೇಡಿಕೆ ಹೆಚ್ಚಾಗಿದ್ದರೂ, ಬೆಲ್ಲ ತಯಾರಿಸಿದ ಉತ್ಪಾದಕರಯ ಮಾರುಕಟ್ಟೆ ಸಾಗಾಟ ಮಾಡಲು ಸಾಧ್ಯವಾಗದೇ ಹತಾಶರಾಗಿದ್ದರು. ಈಗ ಬೆಲ್ಲಕ್ಕೆ ಮತ್ತೆ ಬೇಡಿಕೆ ಬಂದಿದೆ ಆದರೆ, ರೈತರ ಬಳಿ ಹೆಚ್ಚು ಉತ್ಪನ್ನ ಉಳಿದಿಲ್ಲವಾಗಿದೆ.

ಆರೋಗ್ಯ ಸುರಕ್ಷೆಯ ಪ್ರಜ್ಞೆಯಿಂದ ಹೆಚ್ಚಿನ ಜನರು ಸಕ್ಕರೆ ಬಳಕೆ ಕಡಿಮೆಮಾಡಿ, ಬೆಲ್ಲವನ್ನು ಹೆಚ್ಚು ಉಪಯೋಗಿಸುತ್ತಿದ್ದಾರೆ. ಹೀಗಾಗಿ, ಜೋನಿಬೆಲ್ಲಕ್ಕೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಬೆಲ್ಲದ ಉತ್ಪಾದನೆ ತಗ್ಗಿದೆ. ತಾಲ್ಲೂಕಿನಲ್ಲಿ ಕೇವಲ 80 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ.

‘ಈ ವರ್ಷ ಕೋವಿಡ್ 19 ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಿದ್ದ ಸಂದರ್ಭದಲ್ಲಿ ಊರಿಗೆ ಬಂದವರಲ್ಲಿ ಹೆಚ್ಚಿನವರು ವಾಪಸ್ ಹೋಗುವಾಗ ಜೋನಿಬೆಲ್ಲ ಕೊಂಡೊಯ್ದರು. ಅದಕ್ಕಾಗಿ ಒಮ್ಮೆಲೇ ಬೆಲ್ಲದ ಬೇಡಿಕೆ ಹೆಚ್ಚಾಯಿತು. ಈ ಬಾರಿ ಮಾರ್ಚ್ ಆರಂಭದಲ್ಲೇ ದೊಡ್ಡ ಪ್ರಮಾಣದಲ್ಲಿ ಬೆಲ್ಲ ಖರೀದಿಯಾಗಿದೆ. ನಂತರ ಲಾಕ್‌ಡೌನ್ ಆಗಿದ್ದಕ್ಕೆ, ಹೆಚ್ಚಿನ ದರ ನಿರೀಕ್ಷೆಯಲ್ಲಿ ಉತ್ಪನ್ನ ಉಳಿಸಿಕೊಂಡಿದ್ದ ಉತ್ಪಾದಕರ ಬಳಿ ದಾಸ್ತಾನು ಉಳಿಯಿತು’ ಎನ್ನುತ್ತಾರೆ ಜೋನಿಬೆಲ್ಲ ಖರೀದಿಸುವ ಇಲ್ಲಿನ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ.

‘ಲಾಕ್‌ಡೌನ್ ನಂತರ ಬೆಲ್ಲದ ಬೇಡಿಕೆ ಹೆಚ್ಚಾಯಿತು. ಹಲವಾರು ಜನರು ಬೆಲ್ಲ ಕೇಳುತ್ತ ಬಂದರೂ ನಮ್ಮ ಬಳಿ ಸಂಗ್ರಹವಿರಲಿಲ್ಲ. ಕಳೆದ ವರ್ಷ 2000 ಕ್ಯಾನ್ ಖರೀದಿಸಿದ್ದೆವು. ಈ ವರ್ಷ ಇಲ್ಲಿಯವರೆಗೆ 2600 ಕ್ಯಾನ್ ಖರೀದಿಸಲಾಗಿದೆ. ಪ್ರಸ್ತುತ ಒಂದು ಡಬ್ಬಿ ಬೆಲ್ಲಕ್ಕೆ ₹ 1800ರಿಂದ 1900 ದರ ದೊರೆಯುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

‘ಆಲೆಮನೆ ಮೊದಲು ಮುಗಿಸಿದವರು ಬೆಲ್ಲ ಮಾರಾಟ ಮಾಡಿದ್ದರು. ದೇವಾಲಯ, ಕಲ್ಯಾಣ ಮಂಟಪಕ್ಕೆ ಬೆಲ್ಲ ಪೂರೈಕೆ ಮಾಡುವವರ ಬಳಿ ಉತ್ಪನ್ನ ಉಳಿದುಕೊಂಡಿತು. ಲಾಕ್‌ಡೌನ್‌ ವೇಳೆ ಮಾರಾಟಕ್ಕೆ ತಂದುಕೊಡಲು ಸಾಧ್ಯವಾಗಲಿಲ್ಲ. ರೈತರ ಮನೆಗೆ ಖರೀದಿಗೆ ಬಂದಿದ್ದ ಮಧ್ಯವರ್ತಿಗಳು, ಅತಿ ಕಡಿಮೆ ದರಕ್ಕೆ ಬೆಲ್ಲ ಖರೀದಿಸಿದರು. ಹೀಗಾಗಿ, ರೈತರಿಗೆ ಇದರ ಲಾಭ ಸಿಕ್ಕಿಲ್ಲ. ನಮ್ಮ ರೈತರು ಮಾರುಕಟ್ಟೆಯಲ್ಲೇ ಸೋಲುತ್ತಿದ್ದಾರೆ. ನಮ್ಮ ಬೆಳೆಗೆ ನಾವು ದರ ನಿಗದಿಪಡಿಸುವಂತಾಗಬೇಕು’ ಎನ್ನುತ್ತಾರೆ ಬೆಲ್ಲ ಉತ್ಪಾದಕ ಕಾನಕೊಪ್ಪದ ಸುಭಾಸ ಶಿರಾಲಿ.

ಕಲಬೆರಕೆ ಬೆಲ್ಲದ ಬಗ್ಗೆ ಇರಲಿ ಎಚ್ಚರ

ಬೆಲ್ಲದಲ್ಲಿ ಕಲಬೆರಕೆ ಹೆಚ್ಚುತ್ತಿದೆ. ಬಯಲು ಸೀಮೆ ಕಡೆಯಿಂದ ಕಳಪೆ ಗುಣಮಟ್ಟದ ಉಂಡೆಬೆಲ್ಲವನ್ನು ತಂದು, ಅದನ್ನು ಕರಗಿಸಿ, ಅದರೊಂದಿಗೆ ಸಕ್ಕರೆಯನ್ನು ಬೆರೆಸಿ, ಜೋನಿಬೆಲ್ಲವೆಂದು ಮೋಸದಿಂದ ಮಾರಾಟ ಮಾಡುವವರು ಹೆಚ್ಚಾಗಿದ್ದಾರೆ. ಇದಕ್ಕೆ ನಿಷೇಧಿತ ಟೇಸ್ಟಿಂಗ್ ಪೌಡರ್ ಬಳಸುವ ಕಾರಣ ಇದು ತಿನ್ನಲು ರುಚಿಯಾಗಿರುತ್ತದೆ. ಜನರು ಇಂತಹ ಕೃತಕ ರುಚಿಯ ಬೆಲ್ಲಕ್ಕೆ ಮಾರುಹೋಗಬಾರದು ಎನ್ನುತ್ತಾರೆ ಬೆಲ್ಲ ಉತ್ಪಾದಕ ಸುಭಾಸ ಶಿರಾಲಿ.

***

ಗುಣಮಟ್ಟದ ಜೋನಿಬೆಲ್ಲ ಇದ್ದರೆ ಖರೀದಿಸಲು ಕದಂಬ ಮಾರ್ಕೆಟಿಂಗ್ ಸಿದ್ಧವಿದೆ. 300 ಕ್ಯಾನ್‌ನಷ್ಟು ಬೆಲ್ಲದ ಬೇಡಿಕೆಯಿದೆ. ರೈತರು ಗುಣಮಟ್ಟಕ್ಕೆ ವಿಶೇಷ ಒತ್ತು ನೀಡಬೇಕು

–ವಿಶ್ವೇಶ್ವರ ಭಟ್ಟ, ಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು