ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕನ್ನಡ: ಕದಂಬ ಮಾರ್ಕೆಟಿಂಗ್‌ನಲ್ಲಿ ಸಸ್ಯಸಂತೆ

ಒಂದು ತಿಂಗಳ ಕಾಲ ನಡೆಯಲಿರುವ ಸಸ್ಯ ವೈವಿಧ್ಯ ಪ್ರದರ್ಶನ
Last Updated 10 ಜೂನ್ 2020, 11:43 IST
ಅಕ್ಷರ ಗಾತ್ರ

ಶಿರಸಿ: ಕೃಷಿ ವೈವಿಧ್ಯ ಹೆಚ್ಚಿಸುವ ಉದ್ದೇಶದಿಂದ ಇಲ್ಲಿನ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ಆವರಣದಲ್ಲಿ ಬುಧವಾರದಿಂದ ಆರಂಭವಾಗಿರುವ ಸಸ್ಯಸಂತೆಯಲ್ಲಿ ವೈವಿಧ್ಯ ಜಾತಿಯ ಸಸ್ಯಗಳು ಕೃಷಿಕರನ್ನು ಸೆಳೆಯುತ್ತಿವೆ.

ನೇರಳೆ, ದಾಲ್ಚಿನ್ನಿ, ದಾಳಿಂಬೆ, ಲವಂಗ, ರುದ್ರಾಕ್ಷಿ, ಲಿಚಿ, ಜಾಯಿಕಾಯಿ, ಬೇರು ಹಲಸು, ಚಿಕ್ಕು, ನೆಲ್ಲಿ, ಲಕ್ಷ್ಮಣ ಫಲ, ಗಮ್‌ಲೆಸ್ ಬಕ್ಕೆ, ಅಡಿಕೆ, ಅಂಜೂರ, ನೀರು ಸೇಬು, ಪೇರಲ, ತೆಂಗು, ಕಾಳುಮೆಣಸು, ಏಲಕ್ಕಿ, ರಾಮಪತ್ರೆ, ಸಿಲ್ವರ್ ಓಖ್, ನುಗ್ಗೆ, ಮುರುಗಲು, 10ಕ್ಕೂ ಹೆಚ್ಚು ಬಗೆಯ ಮಾವು ಸೇರಿದಂತೆ 80ಕ್ಕೂ ಹೆಚ್ಚು ಜಾತಿಯ ಸಸಿಗಳು ಇಲ್ಲಿವೆ.

ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಸಸ್ಯಸಂತೆಗೆ ಚಾಲನೆ ನೀಡಿದರು. ಸಾವಯವ ಉತ್ಪನ್ನ ಹಾಗೂ ರೈತರ ಆರ್ಥಿಕ ಸ್ವಾವಲಂಬನೆಗೆ ಸಸ್ಯಸಂತೆ ಸಹಕಾರಿಯಾಗಿದೆ. ಕದಂಬ ಸೌಹಾರ್ದವು ಎಂಟು ವರ್ಷಗಳಿಂದ ಸಸ್ಯಸಂತೆ ಆಯೋಜಿಸುತ್ತಿರುವ ಪರಿಣಾಮವಾಗಿ, ಕೃಷಿ ಜೀವವೈವಿಧ್ಯ ಹೆಚ್ಚುತ್ತಿದೆ. ರೈತರು ನಾಟಿ ಮಾಡುವ ಗಿಡಗಳು ಫಲನೀಡಿ, ಮಾರುಕಟ್ಟೆಯಲ್ಲಿ ಆದಾಯ ತಂದುಕೊಡುತ್ತಿವೆ. ಸಸ್ಯಸಂತೆ ಮೂಲಕ ಈ ವರ್ಷ 1.5 ಲಕ್ಷಕ್ಕೂ ಅಧಿಕ ಗಿಡಗಳನ್ನು ಕೃಷಿ ಜಮೀನಿನಲ್ಲಿ ಬೆಳೆಸುವ ಗುರಿ ಹೊಂದಲಾಗಿದೆ ಎಂದರು.

ರೈತರಿಗೆ ಕಸಿ ತರಬೇತಿ ನೀಡಿ, ಅವರು ಬೆಳೆಸಿರುವ ಗಿಡಗಳಿಗೆ ಸಸ್ಯಸಂತೆಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಜೈವಿಕ ಇಂಧನ ಸಸ್ಯಕ್ಕೆ ಒತ್ತು ನೀಡಲಾಗಿದೆ. ಹಲಸಿನ ತಳಿ ವೈವಿಧ್ಯಕ್ಕೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ಹೇಳಿದರು.

ಶಿರಸಿ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಮಾತನಾಡಿ, ‘ಅರಣ್ಯೀಕರಣದ ಮಹತ್ವ ತಿಳಿಸಲು ಸಸ್ಯಸಂತೆ ಅನುಕೂಲವಾಗಿದೆ. ಅರಣ್ಯೀಕರಣದ ಬಗ್ಗೆ ಇಲಾಖೆಯಲ್ಲೂ ಸಾಕಷ್ಟು ಯೋಜನೆಗಳಿವೆ. ಅರಣ್ಯೇತರ ಪ್ರದೇಶಗಳಲ್ಲಿ ಗಿಡ ಬೆಳೆಸುವ ಕಾರ್ಯ ನಡೆಯುತ್ತಿದೆ’ ಎಂದರು.

ಕದಂಬ ಮಾರ್ಕೆಟಿಂಗ್ ನಿರ್ದೇಶಕರಾದ ಎಂ.ವಿ.ಹೆಗಡೆ, ಗುರುಪಾದ ಹೆಗಡೆ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮಂಜು ಎಂ.ಜೆ, ಪ್ರಾಧ್ಯಾಪಕ ಡಾ.ಕೃಷ್ಣ, ತೋಟಗಾರಿಕಾ ಇಲಾಖೆ ಅಧಿಕಾರಿ ಅಣ್ಣಪ್ಪ ನಾಯ್ಕ, ಎಸಿಎಫ್ ಡಿ.ರಘು, ಆರ್‌ಎಫ್‌ಒ ಅಮಿತ್ ಚೌವ್ಹಾಣ್, ಕದಂಬ ಸಂಸ್ಥೆ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT